ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊ ವಿವಾದದ ಬೆನ್ನಿಗೇ ತಮಿಳುನಾಡು ಸಚಿವ ತ್ಯಾಗರಾಜನ್‌ ಖಾತೆ ಬದಲಾವಣೆ

Published 11 ಮೇ 2023, 9:42 IST
Last Updated 11 ಮೇ 2023, 9:42 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಸಚಿವ ಪಳನಿವೇಲ್ ತ್ಯಾಗರಾಜನ್ ಅವರನ್ನು ಮಹತ್ವದ ಹಣಕಾಸು ಮತ್ತು ಮಾನವ ಸಂಪನ್ಮೂಲ ಖಾತೆಯಿಂದ ಗುರುವಾರ ಬಿಡುಗಡೆ ಮಾಡಲಾಗಿದ್ದು, ಮಾಹಿತಿ ತಂತ್ರಜ್ಞಾನ ಇಲಾಖೆಯನ್ನು ವಹಿಸಲಾಗಿದೆ.

ತಂಗಂ ತೆನ್ನರಸು ಅವರನ್ನು ನೂತನ ಹಣಕಾಸು ಸಚಿವರನ್ನಾಗಿ ನಿಯೋಜಿಸಲಾಗಿದೆ. ಸಂಪುಟಕ್ಕೆ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲಾಗಿರುವ ಮನ್ನಾರ್‌ಗುಡಿ ಕ್ಷೇತ್ರದ ಮೂರು ಬಾರಿಯ ಶಾಸಕ ಟಿಆರ್‌ಬಿ ರಾಜಾ ಅವರಿಗೆ ಕೈಗಾರಿಕೆ ಖಾತೆಯನ್ನು ನೀಡಲಾಗಿದೆ.

ಪಿಟಿಆರ್ ಎಂದೇ ಕರೆಯಲಾಗುವ ತ್ಯಾಗ ರಾಜನ್ ಅವರು ಐಟಿ ಮತ್ತು ಡಿಜಿಟಲ್ ಸೇವೆಗಳ ಇಲಾಖೆಯನ್ನು ಮುನ್ನಡೆಸಲಿದ್ದಾರೆ ಎಂದು ರಾಜಭವನದ ಅಧಿಕೃತ ಪ್ರಕಟಣೆ ತಿಳಿಸಿದೆ.

ಐಟಿ ಇಲಾಖೆಯ ಖಾತೆಯನ್ನು ಈ ಹಿಂದೆ ಟಿ. ಮನೋ ತಂಗರಾಜ್ ನಿರ್ವಹಿಸುತ್ತಿದ್ದರು. ಈಗ ಅವರಿಗೆ ಹಾಲು ಮತ್ತು ಡೈರಿ ಅಭಿವೃದ್ಧಿ ಇಲಾಖೆ ನೀಡಲಾಗಿದೆ. ಹಾಲು ಖಾತೆ ಹೊಂದಿದ್ದ ಎಸ್‌.ಎಂ ನಸರ್ ಅವರನ್ನು ಮೇ 9 ರಂದು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು.

ವಾರ್ತಾ ಸಚಿವ ಎಂ.ಪಿ ಸಾಮಿನಾಥನ್ ಅವರಿಗೆ ತಮಿಳು ಅಭಿವೃದ್ಧಿ ಮತ್ತು ಸಂಸ್ಕೃತಿ ಖಾತೆ ಸಿಕ್ಕಿದೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸಂಪುಟ ಪುನಾರಚನೆಗೆ ಮಾಡುವ ಬಗ್ಗೆ ಕಳೆದ ಕೆಲವು ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದವು.

ಆಡಿಯೊ ಹರಿದಾಡಿದ ಬೆನ್ನಿಗೇ ಖಾತೆ ಬದಲಾವಣೆ

ಸದ್ಯ ತಮಿಳುನಾಡು ಸಂಪುಟ ಪುನರಚನೆಯಲ್ಲಿ ತ್ಯಾಗ ರಾಜನ್ ಅವರ ಖಾತೆ ಬದಲಾವಣೆಯು ಮಹತ್ವ ಪಡೆದುಕೊಂಡಿದೆ. ಡಿಎಂಕೆ ಕಾರ್ಯವೈಖರಿಯನ್ನು ಟೀಕಿಸಿದ ತ್ಯಾಗರಾಜನ್ ಅವರ ಆಡಿಯೋ ಕ್ಲಿಪ್‌ಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಅದರ ಬೆನ್ನಿಗೇ ಅವರ ಖಾತೆಯೂ ಬದಲಾವಣೆಯಾಗಿದೆ. ಬ್ಯಾಂಕರ್ ಆಗಿದ್ದ ತ್ಯಾಗರಾಜನ್‌ ಚುನಾವಣಾ ರಾಜಕೀಯಕ್ಕೆ ಜಿಗಿಯುವುದಕ್ಕೂ ಮೊದಲು ಉತ್ತಮ ಸಂಬಳದ ನೌಕರಿ ತೊರೆದಿದ್ದರು. ತ್ಯಾಗ ರಾಜನ್ ಅವರಿಗೆ ಮೇ 2021 ರಲ್ಲಿ ಹಣಕಾಸು ಖಾತೆಯನ್ನು ನೀಡಲಾಗಿತ್ತು. ಸ್ಟಾಲಿನ್ ಕ್ಯಾಬಿನೆಟ್‌ನಲ್ಲಿ ತ್ಯಾಗರಾಜನ್‌ ಅವರು ಪ್ರಭಾವಿ ಮತ್ತು ಜನಪ್ರಿಯರೂ ಆಗಿದ್ದರು.

ಆರ್ಥಿಕತೆ ಮತ್ತು ಇತರ ವಿಷಯಗಳ ಕುರಿತು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರ ಸಂದರ್ಶನಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೀಕ್ಷಣೆಗೆ ಪಾತ್ರವಾಗಿವೆ. ಹೀಗಾಗಿ ಅವರು ರಾಷ್ಟ್ರೀಯ ಮಾಧ್ಯಮಗಳ ಡಾರ್ಲಿಂಗ್‌ ಕೂಡ ಹೌದು! ಕೇವಲ ಎರಡು ವರ್ಷಗಳಲ್ಲಿ ರಾಜ್ಯದ ವಿತ್ತೀಯ ಕೊರತೆಯನ್ನು ಸುಮಾರು ₹30,000 ಕೋಟಿ ಕಡಿಮೆ ಮಾಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT