ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಲೆ ನವೀಕರಣ ಹಗರಣ: ಸಿಬಿಐ ತನಿಖೆಗೆ ಸ್ವಾಗತ; ಯಾವ ಲೋಪವೂ ಸಿಗದು– ಕೇಜ್ರಿವಾಲ್

Published 28 ಸೆಪ್ಟೆಂಬರ್ 2023, 13:01 IST
Last Updated 28 ಸೆಪ್ಟೆಂಬರ್ 2023, 13:01 IST
ಅಕ್ಷರ ಗಾತ್ರ

ನವದೆಹಲಿ: ಬಂಗಲೆ ನವೀಕರಣದಲ್ಲಿ ನಡೆದಿದೆ ಎನ್ನಲಾದ ಹಗರಣ ಕುರಿತು ತನಿಖೆ ಆರಂಭಿಸಿರುವ ಸಿಬಿಐಗೆ ಸ್ವಾಗತ ಕೋರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ‘ಯಾವುದೇ ತಪ್ಪು ನಡೆದಿಲ್ಲದ ಕಾರಣ ಅವರಿಗೆ ಏನೂ ಸಿಗದು’ ಎಂದಿದ್ದಾರೆ.

ಈ ತನಿಖೆಯು ಪ್ರಧಾನಿ ನರೇಂದ್ರ ಮೋದಿ ಅವರ ಆತಂಕವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಂಗಲೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದಡಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿದೆ. ದೆಹಲಿ ಸರ್ಕಾರದ ಅಪರಿಚಿತ ನೌಕರ ನೀಡಿರುವ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ತನಿಖೆಗೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ‘ನನ್ನ ವಿರುದ್ಧ ತನಿಖೆ ಹೊಸತಲ್ಲ. ಕಳೆದ 8 ವರ್ಷಗಳಲ್ಲಿ 50ಕ್ಕೂ ಹೆಚ್ಚು ತನಿಖೆಗಳು ನನ್ನ ವಿರುದ್ಧ ನಡೆದಿವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆತಂಕವನ್ನು ತೋರಿಸುತ್ತದೆ’ ಎಂದಿದ್ದಾರೆ.

‘ಶಾಲೆಗಳ ಕಟ್ಟಡದಲ್ಲಿ, ಬಸ್ಸುಗಳ ಖರೀದಿಯಲ್ಲಿ, ಅಬಕಾರಿ ನೀತಿ, ರಸ್ತೆ ಹಗರಣ, ನೀರಿನ ಹಗರಣ, ವಿದ್ಯುತ್ ಖರೀದಿ ಹಗರಣ ಸೇರಿದಂತೆ ಹಲವು ರೀತಿಯ ಆರೋಪಗಳನ್ನು ನನ್ನ ವಿರುದ್ಧ ಮಾಡಲಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಆರೋಪಗಳನ್ನು ಎದುರಿಸಿದ ವ್ಯಕ್ತಿ ಬಹುಶಃ ನಾನೇ ಆಗಿದ್ದೇನೆ. ಈಗ ನಡೆದಿರುವ ಹೊಸ ತನಿಖೆಗೆ ಸ್ವಾಗತ. ಇದರಲ್ಲೂ ನನ್ನ ವಿರುದ್ಧ ಯಾವುದೇ ಅಂಶ ಸಿಗದು. ಯಾವುದೇ ತಪ್ಪು ನಡೆಯದ ಪ್ರಕರಣದಲ್ಲಿ ತಪ್ಪು ಸಿಗುವುದಾದರೂ ಹೇಗೆ?’ ಎಂದಿದ್ದಾರೆ.

ಇದಕ್ಕೂ ಮೊದಲು ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೇಜ್ರಿವಾಲ್ ಅವರ ಬಂಗಲೆಯ ನವೀಕರಣದ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿರುವ ಅವ್ಯವಹಾರ ಸಿಬಿಐ ತನಿಖೆಯಿಂದ ಬಹಿರಂಗಗೊಳ್ಳಲಿದೆ’ ಎಂದಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ‘ನಾಲ್ಕನೇ ತರಗತಿ ಪಾಸಾದ ‘ರಾಜ’ನಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ದಿನದ 24 ಗಂಟೆಗಳೂ ತನಿಖೆ, ತನಿಖೆ ಎಂಬ ಆಟವನ್ನೇ ಆಡುತ್ತಿರುತ್ತಾರೆ ಅಥವಾ ಕೆಲಸ ಮಾಡದೆ ಕೇವಲ ಭಾಷಣ ಮಾಡುತ್ತಿರುತ್ತಾರೆ. ಅವರ ಮುಂದೆ ಮಂಡಿಯೂರಬೇಕು ಎಂಬುದು ಅವರ ಇಚ್ಛೆ. ನನ್ನ ವಿರುದ್ಧ ಎಷ್ಟೇ ಸುಳ್ಳು ಪ್ರಕರಣ ದಾಖಲಿಸಲಿ ಅಥವಾ ಎಷ್ಟಾದರೂ ತನಿಖೆ ಕೈಗೊಳ್ಳಲಿ ನಾನು ಮಾತ್ರ ಅವರ ಮುಂದೆ ತಲೆ ತಗ್ಗಿಸುವುದಿಲ್ಲ’ ಎಂದು ಗುಡುಗಿದ್ದಾರೆ.

‘ಈ ಹಿಂದೆ ನನ್ನ ವಿರುದ್ಧ ನಡೆಸಲಾದ ತನಿಖೆಗಳಲ್ಲಿ ಹೇಗೆ ಯಾವುದೇ ತಪ್ಪು ಸಿಗಲಿಲ್ಲವೋ, ಈ ತನಿಖೆಯಲ್ಲೂ ಏನೂ ಸಿಗದು. ಏನೂ ಸಿಗದಿದ್ದರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆಯೇ?’ ಎಂದು ಕೇಜ್ರಿವಾಲ್ ಸವಾಲೆಸೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT