ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pakistan Election | ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ, ಬಿಗಿ ಭದ್ರತೆ

Published 7 ಫೆಬ್ರುವರಿ 2024, 14:21 IST
Last Updated 8 ಫೆಬ್ರುವರಿ 2024, 2:46 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಇಂದು (ಗುರುವಾರ) ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಗುರುವಾರ ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ಚುನಾವಣೆ ಇರುವ ಕಾರಣ ದೇಶದಾದ್ಯಂತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಪಾಕಿಸ್ತಾನ ಚುನಾವಣಾ ಆಯೋಗದ ಪ್ರಕಾರ, ‘4,807 ಪುರುಷರು, 312 ಮಹಿಳೆಯರು ಮತ್ತು ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿ 5,121 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. 

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಜೈಲಿನಲ್ಲಿ ಇರುವ ಕಾರಣ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್(ಪಿಎಂಎಲ್‌–ಎನ್‌)  ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಾಗಿದೆ. 74 ವರ್ಷದ ಷರೀಫ್‌ ದಾಖಲೆಯ ನಾಲ್ಕನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರುವ ಉಮೇದಿನಲ್ಲಿದ್ದಾರೆ. 

ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್ (ಪಿಟಿಐ) ಪಕ್ಷದ ಚಿಹ್ನೆಯಾದ ‘ಕ್ರಿಕೆಟ್ ಬ್ಯಾಟ್‌’ ಅನ್ನು ಚುನಾವಣಾ ಆಯೋಗವು ರದ್ದುಗೊಳಿಸಿದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಹೀಗಾಗಿ ಪಿಟಿಐ ತನ್ನ ಅಭ್ಯರ್ಥಿಗಳನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದೆ.

ಚುನಾವಣೆಯಲ್ಲಿ ಬಿಲಾವಲ್‌ ಭುಟ್ಟೊ–ಜರ್ದಾರಿ ಅವರ ಪಾಕಿಸ್ತಾನ ಪೀಪಲ್ಸ್‌ ಪಕ್ಷ ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿಯು ಒಟ್ಟು 336 ಸ್ಥಾನಗಳನ್ನು ಒಳಗೊಂಡಿದ್ದು, 265 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರ ಕೊಲೆಯಾದ ಕಾರಣ ಅಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. ಉಳಿದ 60 ಸ್ಥಾನಗಳನ್ನು ಮಹಿಳೆಯರಿಗೆ ಹಾಗೂ 10 ಸ್ಥಾನಗಳನ್ನು ಮುಸ್ಲಿಮೇತರರಿಗೆ ಮೀಸಲಿಡಲಾಗಿದೆ.

ಇದೇ ಸಂದರ್ಭದಲ್ಲಿ ನಾಲ್ಕು ಪ್ರಾಂತ್ಯಗಳ 593 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದ್ದು, 12,695 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಬಿಗಿ ಭದ್ರತೆ

ಚುನಾವಣಾ ಮುನ್ನಾ ದಿನವೇ ಅವಳಿ ಬಾಂಬ್ ಸ್ಫೋಟ ನಡೆದಿರುವ ಕಾರಣ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದೇಶದಾದ್ಯಂತ 650000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  ಭಯೋತ್ಪಾದಕರಿಂದ ದಾಳಿ ನಡೆಸುವ ಬೆದರಿಕೆ ಇರುವುದರಿಂದ ಪೊಲೀಸ್‌ ಅರೆಸೇನಾ ಪಡೆ ಮತ್ತು ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಬುಧವಾರ ಸುಮಾರು 90000ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಚುನಾವಣಾ ಪರಿಕರಗಳನ್ನು ಸಾಗಿಸಲಾಗಿದೆ. 29985 ಮತಗಳಟ್ಟೆಗಳನ್ನು ‘ಅತ್ಯಂತ ಸೂಕ್ಷ್ಮ’ ಎಂದು ಪರಿಗಣಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT