ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Cup | ಟ್ರಾವಿಸ್ ಹೆಡ್ ಅಬ್ಬರದ ಶತಕ; ಕಿವೀಸ್‌ಗೆ ಬೃಹತ್ ಗುರಿ ನೀಡಿದ ಆಸಿಸ್

Published 28 ಅಕ್ಟೋಬರ್ 2023, 5:14 IST
Last Updated 28 ಅಕ್ಟೋಬರ್ 2023, 5:14 IST
ಅಕ್ಷರ ಗಾತ್ರ

ಧರ್ಮಶಾಲಾ: ಆರಂಭಿಕ ಬ್ಯಾಟರ್‌ಗಳು ತೋರಿದ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬೃಹತ್‌ ಮೊತ್ತ ಕಲೆಹಾಕಿದೆ.

ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆಸಿಸ್, 49.2 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 388 ರನ್‌ ಪೇರಿಸಿದೆ.

ಇನಿಂಗ್ಸ್‌ ಆರಂಭಿಸಿದ ಡೇವಿಡ್‌ ವಾರ್ನರ್‌ ಹಾಗೂ ಟ್ರಾವಿಸ್‌ ಹೆಡ್‌ ಆರಂಭದಲ್ಲೇ ರಟ್ಟೆಯರಳಿಸಿದರು. ಕಿವೀಸ್‌ ಬೌಲರ್‌ಗಳೆದರು ಟಿ20 ಶೈಲಿಯಲ್ಲಿ ಬ್ಯಾಟ್‌ ಬೀಸಿದ ಈ ಇಬ್ಬರು ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 19.1 ಓವರ್‌ಗಳಲ್ಲಿ 175 ರನ್ ಕೂಡಿಸಿದರು. 65 ಎಸೆತಗಳಲ್ಲಿ 81 ರನ್‌ ಗಳಿಸಿದ್ದ ವಾರ್ನರ್‌ ಔಟಾದ ಬಳಿಕ, ಹೆಡ್‌ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಡದ ಮೊತ್ತ 200 ರನ್‌ ಆಗಿದ್ದಾಗ ಪೆವಿಲಿಯನ್‌ ಸೇರಿಕೊಂಡರು.

162ರ ಸ್ಟ್ರೈಕ್‌ರೇಟ್‌ನಲ್ಲಿ 109 ರನ್‌ ಬಾರಿಸಿದ ಅವರು ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ನಾಲ್ಕನೇ ಶತಕ ಸಿಡಿಸಿ ಸಂಭ್ರಮಿಸಿದರು.

ಕಮ್‌ಬ್ಯಾಕ್‌ ಮಾಡಿದ ಕಿವೀಸ್
ವಾರ್ನರ್‌–ಟ್ರಾವಿಸ್‌ ವಿಕೆಟ್‌ ಪತನದ ಬಳಿಕ ಕಿವೀಸ್‌ ಕಮ್‌ಬ್ಯಾಕ್‌ ಮಾಡಿತು. ಮೊದಲ 20 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಪಡೆದು 177 ರನ್ ಬಿಟ್ಟುಕೊಟ್ಟಿದ್ದ ಬೌಲರ್‌ಗಳು, ನಂತರ 20 ಓವರ್‌ಗಳಲ್ಲಿ 115 ರನ್‌ ನೀಡಿ 4 ಪ್ರಮುಖ ವಿಕೆಟ್‌ಗಳನ್ನು ಪಡೆದರು.

ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಹೆಡ್‌, ಮಿಚೇಲ್‌ ಮಾರ್ಷ್ (36), ಸ್ಟೀವ್‌ ಸ್ಮಿತ್‌ (18), ಮಾರ್ನಸ್‌ ಲಾಬುಷೇನ್‌ (18) ವಿಕೆಟ್‌ ಒಪ್ಪಿಸಿದರು.

ಕೊನೇ ಹಂತದಲ್ಲಿ ಗ್ಲೆನ್ ಮಾಕ್ಸ್‌ವೆಲ್‌ (24 ಎಸೆತ, 41 ರನ್), ಜೋಶ್‌ ಇಂಗ್ಲಿಸ್ (28 ಎಸೆತ, 38 ರನ್) ಹಾಗೂ ಪ್ಯಾಟ್‌ ಕಮಿನ್ಸ್‌ (14 ಎಸೆತ, 37 ರನ್) ಅಬ್ಬರಿಸಿದರು. ಆದರೆ, ಕೇವಲ 1 ರನ್‌ ಅಂತರದಲ್ಲಿ ಅಂತಿಮ 4 ವಿಕೆಟ್‌ಗಳು ಪತನವಾದದ್ದರಿಂದ ಆಸಿಸ್‌ ತಂಡದ ಮೊತ್ತ 400ರ ಗಡಿ ದಾಟಲಿಲ್ಲ.

ನ್ಯೂಜಿಲೆಂಡ್ ಪರ ಗ್ಲೆನ್‌ ಫಿಲಿಪ್ಸ್‌ ಹಾಗೂ ಟ್ರೆಂಟ್‌ ಬೌಲ್ಟ್‌ ತಲಾ ಮೂರು ವಿಕೆಟ್‌ ಪಡೆದರೆ, ಮಿಚೇಲ್‌ ಸ್ಯಾಂಟ್ನರ್‌ 2 ಹಾಗೂ ಜೇಮ್ಸ್ ನಿಶಾಮ್, ಮ್ಯಾಟ್‌ ಹೆನ್ರಿ ತಲಾ ಒಂದೊಂದು ವಿಕೆಟ್‌ ಕಿತ್ತರು.

ತಂಡಗಳು ಇಂತಿವೆ

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಷೇನ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್‌ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್‌, ಆ್ಯಡಂ ಜಂಪಾ.

ನ್ಯೂಜಿಲೆಂಡ್: ಡೇವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲೇಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಜೇಮ್ಸ್ ನಿಶಾಮ್, ಲಾಕಿ ಫರ್ಗುಸನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT