ನವದೆಹಲಿ: ‘ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ, ಅದಾನಿ ಷೇರು ಹಗರಣದಲ್ಲಿ ಭಾಗಿಯಾಗಿದ್ದಾರೆ’ ಎಂದು ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪವನ್ನು ಅದಾನಿ ಸಮೂಹ ತಳ್ಳಿ ಹಾಕಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅದಾನಿ ಸಮೂಹವು, ‘ಹಿಂಡೆನ್‌ಬರ್ಗ್‌ನ ಇತ್ತೀಚಿನ ಆರೋಪಗಳು ದುರುದ್ದೇಶಪೂರಿತವಾಗಿವೆ. ಕಾನೂನನ್ನು ಉಲ್ಲಂಘಿಸುವ ಮೂಲಕ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ತಿರುಚುವ ಪ್ರಯತ್ನ ಮಾಡಲಾಗಿದೆ. ಅದಾನಿ ಸಮೂಹದ ವಿರುದ್ಧ ಹಿಂಡೆನ್‌ಬರ್ಗ್ ಮಾಡಿರುವ ಎಲ್ಲ ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂಡೆನ್‌ಬರ್ಗ್‌ನ ಆರೋಪಗಳ ಬಗ್ಗೆ ಈಗಾಗಲೇ ಸಂಪೂರ್ಣವಾಗಿ ತನಿಖೆ ನಡೆಸಲಾಗಿದ್ದು, ಆರೋಪಗಳು ಆಧಾರರಹಿತವೆಂದು ಸಾಬೀತುಪಡಿಸಲಾಗಿದೆ ಎಂದು ಅದಾನಿ ಸಮೂಹ ತಿಳಿಸಿದೆ.
Adani Group issues a statement on the latest report from Hindenberg Research.
— ANI (@ANI) August 11, 2024
The latest allegations by Hindenburg are malicious, mischievous and manipulative selections of publicly available information to arrive at pre-determined conclusions for personal profiteering with… pic.twitter.com/WwKbPLTkrv
ಉದ್ಯಮಿ ಗೌತಮ್ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ ಮತ್ತು ಅವರ ಪತಿ ಪಾಲುದಾರಿಕೆ ಹೊಂದಿದ್ದಾರೆ. ಅದಾನಿಯವರು ಮಾರಿಷಸ್ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ‘ಶೆಲ್ ಕಂಪನಿ’ಗಳ ಬಗ್ಗೆ ತನಿಖೆ ನಡೆಸಲು ಸೆಬಿ ಯಾವುದೇ ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ ಎಂದು ಹಿಂಡೆನ್‌ಬರ್ಗ್ ತನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಶನಿವಾರ ಆರೋಪ ಮಾಡಿತ್ತು.
ಮಾಧವಿ ದಂಪತಿ ಹೂಡಿಕೆಯ ಮೂಲ ತಮ್ಮ ವೇತನವೆಂದು ನಿಧಿಯ ದೃಢೀಕೃತ ಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ. ಈ ದಂಪತಿಯ ಹೂಡಿಕೆಯ ನಿವ್ವಳ ಮೌಲ್ಯವು ₹84 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಅದು ಹೇಳಿತ್ತು.
ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು 2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್ ವರದಿ ಪ್ರಕಟಿಸಿತ್ತು. ಅದಾನಿ ಸಮೂಹದ ಕಂಪನಿಗಳ ಕುರಿತು ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯು ವರದಿ ಪ್ರಕಟಿಸಿದ ಬೆನ್ನಲ್ಲೇ, ಸಮೂಹದ ಷೇರುಗಳ ಬೆಲೆಗಳಲ್ಲಿ ಭಾರಿ ಕುಸಿತ ಉಂಟಾಗಿತ್ತು.
ಹಿಂಡೆನ್‌ಬರ್ಗ್ ವರದಿಯ ಆರೋಪ ನಿರಾಕರಿಸಿದ ಸೆಬಿ ಅಧ್ಯಕ್ಷೆ
ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಶನಿವಾರ ಅಲ್ಲಗಳೆದಿದ್ದಾರೆ. ಹಿಂಡೆನ್‌ಬರ್ಗ್ ಆರೋಪಗಳು ಆಧಾರರಹಿತವಾಗಿವೆ ಎಂದಿರುವ ದಂಪತಿ, ತಮ್ಮ ಹಣಕಾಸು ವ್ಯವಹಾರಗಳು ತೆರೆದ ಪುಸ್ತಕವಿದ್ದಂತೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.