ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ₹158 ಕೋಟಿ ಬಾಕಿ ಉಳಿಸಿಕೊಂಡಿರುವ ಬೈಜುಸ್ ಕಂಪನಿಯ ವಿರುದ್ಧ ಕಾರ್ಪೊರೇಟ್ ದಿವಾಳಿ ಪ್ರಕ್ರಿಯೆ ಆರಂಭಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮುಂದಾಗಿದೆ. ಮಂಗಳವಾರ ಈ ಕುರಿತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಶಾಖೆಗೆ ಅರ್ಜಿ ಸಲ್ಲಿಸಿದೆ.
ಎನ್‌ಸಿಎಲ್‌ಟಿಯು ಈ ಅರ್ಜಿಯನ್ನು ಸ್ವೀಕರಿಸಿದ್ದು, ಆಡಳಿತ ಮಂಡಳಿಯ ನಿರ್ದೇಶಕರನ್ನು ಅಮಾನತುಗೊಳಿಸಿದೆ. ಜೊತೆಗೆ, ಕಂಪನಿಯ ಆಸ್ತಿಯನ್ನು ವಶಕ್ಕೆ ಪಡೆದಿದ್ದು, ಮಧ್ಯಂತರ ನಿರ್ಣಯ ಅಧಿಕಾರಿಯಾಗಿ ಪಂಕಜ್ ಶ್ರೀವಾಸ್ತವ ಅವರನ್ನು ನೇಮಿಸಿದೆ.
ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಬೈಜುಸ್ ರವೀಂದ್ರನ್ ಅವರು, ಇನ್ನು ಮುಂದೆ ಪಂಕಜ್ ಶ್ರೀವಾಸ್ತವ ಅವರ ಬಳಿಕ ವರದಿ ಮಾಡಿಕೊಳ್ಳಬೇಕಿದೆ.
‘ಬಿಸಿಸಿಐ ಜೊತೆಗಿನ ಈ ಪ್ರಕರಣವು ಸೌಹಾರ್ದಯುತವಾಗಿ ಇತ್ಯರ್ಥವಾಗುವ ಭರವಸೆ ಹೊಂದಿದ್ದೇವೆ. ನ್ಯಾಯಮಂಡಳಿಯಿಂದ ನೋಟಿಸ್ ಸ್ವೀಕರಿಸಿದ ಬಳಿಕ ಕಾನೂನು ಸಲಹೆಗಾರರು ಕಂಪನಿಯ ಹಿತಾಸಕ್ತಿ ಕಾಪಾಡುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ’ ಎಂದು ಬೈಜುಸ್ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ಕೋವಿಡ್‌ನಿಂದಾಗಿ ಶಾಲೆಗಳನ್ನು ಮುಚ್ಚಿದ್ದರಿಂದ ಆನ್‌ಲೈನ್ ಪಾಠಗಳಿಗೆ ಬೇಡಿಕೆ ಹೆಚ್ಚಿತ್ತು. ಈ ವೇಳೆ ಬೈಜುಸ್ ತರಗತಿಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು ₹1.84 ಲಕ್ಷ ಕೋಟಿ ದಾಟಿತ್ತು.