ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ|ಮನೆಗಳಿಗೆ ನುಗ್ಗಿದ ಮಳೆ ನೀರು: ವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ಆಗ್ರಹ

Published 11 ಮೇ 2024, 14:04 IST
Last Updated 11 ಮೇ 2024, 14:04 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪಟ್ಟಣದ 21ನೇ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ, ಮಳೆ ನೀರು ಮನೆಗಳಿಗೆ ನುಗ್ಗುತ್ತಿದ್ದು,  ಮಳೆ ಬಂದಾಗಲೆಲ್ಲ ನೀರು ಮನೆಯೊಳಗೆ ಬಾರದಂತೆ ತಡೆಯುವುದು ದೊಡ್ಡ ಕೆಲಸವಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

30 ವರ್ಷಗಳ ಹಿಂದೆ ಕಲ್ಲಿನಲ್ಲಿ ಚಿಕ್ಕದಾಗಿ ಚರಂಡಿ ಮಾಡಿದ್ದಾರೆ. ಆದರೆ, ಅದೆಲ್ಲವೂ ಮುಚ್ಚಿಹೋಗಿದೆ. ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆ ಬಂದರೆ ಮನೆ ಆವರಣ ಕುಂಟೆಯಂತೆ ನೀರು ನಿಲ್ಲುತ್ತಿದೆ‌. ಮನೆ ಜಂತಿಗೆ, ಗೋಡೆಗಳು ಶಕ್ತಿಯುತವಾಗಿಲ್ಲ, ನೀರಿನಿಂದ ನೆನೆದರೆ ಗೋಡೆಯು ಕುಸಿಯುವ ಭೀತಿಯಿದೆ ಎಂದು ಸ್ಥಳೀಯ ನಿವಾಸಿ ಲಲಿತಮ್ಮ ತಮ್ಮ ಅಳಲು ತೋಡಿಕೊಂಡರು.

21ನೇ ವಾರ್ಡ್‌ ಪುರಸಭೆಯ ಹಿಂಭಾಗದಲ್ಲಿದ್ದರೂ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲ. ಮನೆಗಳಲ್ಲಿ ಉಪಯೋಗಿಸಿದ ನೀರು ಹೊರಗೆ ಹೋಗಲು ಅವಕಾಶವಿಲ್ಲದಂತೆ ಮಾಡಿದ್ದಾರೆ. ಹಲವು ಬಾರಿ ಪುರಸಭೆಯವರಿಗೆ ಮನವಿ ಮಾಡಿದರೂ ಗಮನಹರಿಸಿಲ್ಲ ಎಂದು ಸ್ಥಳೀಯ ನಿವಾಸಿ ಎನ್.ಸಿ.ಮುನಿವೆಂಕಟರಮಣ ತಿಳಿಸಿದರು.

ಶೀಘ್ರವೇ ಕಾಮಗಾರಿ ಆರಂಭ:

‘ಚರಂಡಿಯ ಮೇಲೆ ಗೋಡೆ ಕಟ್ಟಿಕೊಂಡು ಮೆಟ್ಟಿಲು ನಿರ್ಮಿಸಿದ್ದಾರೆ. ಹೀಗಾಗಿ ನೀರು ಮುಂದೆ ಹೋಗುತ್ತಿಲ್ಲ. ನಗರೋತ್ಥಾನ ಯೋಜನೆಯಡಿ ಅನುದಾನ ಮೀಸಲಿಟ್ಟಿದ್ದೇವೆ. ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ. ನೀರು ನಿಲ್ಲದಂತೆ ಕ್ರಮ ವಹಿಸಲಾಗುತ್ತದೆ’ ಎಂದು 21ನೇ ವಾರ್ಡಿನ ಪುರಸಭೆ ಸದಸ್ಯೆ ವಿಮಲಾ ಬಸವರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT