ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಣ್ಯ ಒತ್ತುವರಿ ತಡೆಗೆ ಉಪಗ್ರಹ ಚಿತ್ರ ಆಧರಿಸಿ ಕ್ರಮ: ಸಚಿವ ಈಶ್ವರ ಖಂಡ್ರೆ

ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ
Published 18 ಮೇ 2024, 16:07 IST
Last Updated 18 ಮೇ 2024, 16:07 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯ ಭೂಮಿ ಒತ್ತುವರಿಯನ್ನು ತಡೆಯಲು ಉಪಗ್ರಹ ಚಿತ್ರವನ್ನು ಪರಿಶೀಲಿಸಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಧಿಕಾರಿಗಳಿಗೆ ಹೇಳಿದರು. ನಗರದಲ್ಲಿ ಶನಿವಾರ ನಡೆದ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅರಣ್ಯ ಒತ್ತುವರಿ ಅವ್ಯಾಹತವಾಗಿ ನಡೆಯುತ್ತಿದೆ. ಅರಣ್ಯದ ಉಪಗ್ರಹ ಆಧಾರಿತ ಚಿತ್ರಗಳನ್ನು ನಿರಂತರವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಪಟ್ಟಾ ಜಮೀನಿನ ಸ್ವಾಧೀನದಲ್ಲಿ ಅರಣ್ಯ ಇಲಾಖೆಯ ಭೂಮಿ ಇದ್ದರೆ ಅಂತಹ ಜಮೀನುಗಳನ್ನು ಇತ್ಯರ್ಥಪಡಿಸಿ ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರಣ್ಯ ಮತ್ತು ಪಟ್ಟಾ ಭೂಮಿಯಲ್ಲಿ ಮರಗಳ ಅಕ್ರಮ ಕಡಿತಲೆ ಆಗುತ್ತಿರುವ ಬಗ್ಗೆ ಸತತವಾಗಿ ದೂರುಗಳು ಬರುತ್ತಿದ್ದು, ನಿರ್ಲಕ್ಷ್ಯ ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬದುಕಿರುವ ಸಸಿಗಳೆಷ್ಟು?: ಕಳೆದ ವರ್ಷ ಜುಲೈನಲ್ಲಿ ನಡೆದ ವನಮಹೋತ್ಸವದ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ 5 ಕೋಟಿ ಸಸಿಗಳನ್ನು ನೆಡಲಾಗಿತ್ತು. ಅದರಲ್ಲಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ವರದಿಯನ್ನು 3 ತಿಂಗಳೊಳಗಾಗಿ ಸಲ್ಲಿಸಬೇಕು. ಈ ವರ್ಷ ನರ್ಸರಿಗಳಲ್ಲಿ ಎಷ್ಟು ಎತ್ತರದ ಸಸಿಗಳನ್ನು ಬೆಳೆಸಲಾಗಿದೆ ಎಂಬ ಮಾಹಿತಿಯನ್ನು 7 ದಿನಗಳ ಒಳಗೆ ನೀಡಬೇಕು ಎಂದು ಸೂಚನೆ ನೀಡಿದರು.

ಆನ್ ಲೈನ್ ಬುಕ್ಕಿಂಗ್: ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲ ಹಣ ಸ್ವೀಕೃತಿಗೆ ಆನ್‌ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ತ್ವರಿತವಾಗಿ ಕ್ರಮ ವಹಿಸಬೇಕು. ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲು ಇನ್ನೊಂದು ತಿಂಗಳೊಳಗೆ ತಂತ್ರಾಂಶ ಮತ್ತು ವೆಬ್‌ಸೈಟ್ ರೂಪಿಸಬೇಕು ಎಂದು ಹೇಳಿದರು.

ವನ್ಯಜೀವಿ ಅಂಗಾಂಗ: ವಾಪಸ್‌ಗೆ ಗಡುವು ವಿಸ್ತರಣೆ?

ವನ್ಯಜೀವಿಗಳ ಅಂಗಾಂಗಗಳಿಂದ ತಯಾರಿಸಿದ ಉತ್ಪನ್ನಗಳನ್ನು ಟ್ರೋಫಿ ಫಲಕಗಳನ್ನು ಸರ್ಕಾರಕ್ಕೆ ಮರಳಿಸಲು ನೀಡಲಾಗದ್ದ ಗಡುವನ್ನು ವಿಸ್ತರಿಸುವ ಬಗ್ಗೆ ಕಾನೂನು ಸಲಹೆ ಪಡೆದು ತೀರ್ಮಾನಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ವಾಪಸ್‌ಗೆ ನೀಡಿದ್ದ ಗಡುವು ಏಪ್ರಿಲ್ 9ರಂದು ಮುಕ್ತಾಯವಾಗಿದೆ. ಈ ಬಗ್ಗೆ ಕೆಲವರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿರುವುದರಿಂದ ಉಂಟಾಗಿರುವ ಗೊಂದಲದಿಂದಾಗಿ ಮತ್ತೆ 2-3 ತಿಂಗಳ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿಗಳು ಬಂದಿವ. ನ್ಯಾಯಾಲಯದ ತೀರ್ಪು ಬಂದ ಬಳಿಕ ಈ ಬಗ್ಗೆ ಕಾನೂನು ಇಲಾಖೆಯ ಸಲಹೆ ಪಡೆದು ನಿರ್ಧರಿಸಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT