ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಮುಡಾ ಹಗರಣ: ಬಿಜೆಪಿ ಪ್ರತಿಭಟನೆ

ಗೂಡ್ಸ್‌ ವಾಹನದಲ್ಲಿ ಬಂದ ಅಶೋಕ, ಅಶ್ವತ್ಥನಾರಾಯಣ
Published : 12 ಜುಲೈ 2024, 23:07 IST
Last Updated : 12 ಜುಲೈ 2024, 23:07 IST
ಫಾಲೋ ಮಾಡಿ
Comments

ಮೈಸೂರು: ಮುಡಾ ಹಗರಣದ ಸಿಬಿಐ ತನಿಖೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು. ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಅವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಸೇರಿದ ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು, ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗಿದರು. ‘ಸಿದ್ದರಾಮಯ್ಯ ಪತ್ನಿಗೆ 14 ಸೈಟು; ಬಡ ಮಹಿಳೆಯರಿಗೆ ಖಾಲಿ ಸೌಟು’ ಮೊದಲಾದ ಫಲಕಗಳನ್ನು ಹಿಡಿದು ಮಹಿಳೆಯರು ಹೆಜ್ಜೆ ಹಾಕಿದರು.

ಮುಡಾ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದ ಅವರನ್ನು ಒಆರ್‌ಐ ಕಟ್ಟಡದ ಹಿಂಭಾಗ ತಡೆದ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದ ತಂಡವು ಮಳೆಯಲ್ಲೇ ವಶಕ್ಕೆ ಪಡೆದು ಕರೆದೊಯ್ದಿತು.

‘10 ಸಾವಿರಕ್ಕೂ ಹೆಚ್ಚು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ’ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಒಂದು ಸಾವಿರ ಮಂದಿಯಷ್ಟೇ ಬಂದಿದ್ದರು. ‘ಮೈಸೂರು ಜೊತೆಗೆ ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಪ್ರತಿಭಟನೆಗೆ ಬರುತ್ತಿದ್ದ ನಮ್ಮ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಅಲ್ಲಲ್ಲೇ ತಡೆದಿದ್ದಾರೆ’ ಎಂದು ಬಿಜೆಪಿ ಮುಖಂಡರು ದೂರಿದರು.

ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎಲ್‌.ಆರ್. ಮಹದೇವಸ್ವಾಮಿ, ಮಾಜಿ ಸಂಸದ ಸಿ.ಎಸ್. ವಿಜಯಶಂಕರ್‌, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ಯುವ ಘಟಕದ ಅಧ್ಯಕ್ಷ ಧೀರಜ್‌, ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಭಾಗವಹಿಸಿದ್ದರು.

ಮೈಸೂರು ಚಲೊ ನಡೆಸಲು ಮುಂದಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕಾರ್ಯಕರ್ತರನ್ನು ನೈಸ್‌ ರಸ್ತೆಯಲ್ಲಿ ಪೊಲೀಸರು ವಶಕ್ಕೆ ಪಡೆದರು
ಮೈಸೂರು ಚಲೊ ನಡೆಸಲು ಮುಂದಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕಾರ್ಯಕರ್ತರನ್ನು ನೈಸ್‌ ರಸ್ತೆಯಲ್ಲಿ ಪೊಲೀಸರು ವಶಕ್ಕೆ ಪಡೆದರು
ಪ್ರತಿಭಟಿಸುವುದು ವಿರೋಧ ಪಕ್ಷಗಳ ಹಕ್ಕು. ಅದನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಿದೆ. ಮುಡಾ ಬಳಿ ಬಂದಾಗ ಬಂಧಿಸಬಹುದಿತ್ತು. ಅದನ್ನು ಬಿಟ್ಟು ಬೆಂಗಳೂರಿನಲ್ಲೇ ಬಂಧಿಸಿದ ಉದ್ದೇಶವೇನು?
ಆರ್‌. ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ

ಗೂಡ್ಸ್‌ ವಾಹನದಲ್ಲಿ ಬಂದ ನಾಯಕರು

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಪೊಲೀಸರ ಕಣ್ಣು ತಪ್ಪಿಸಿ ತರಕಾರಿ ಸಾಗಣೆ ವಾಹನದಲ್ಲಿ ಪ್ರತಿಭಟನೆಗೆ ಬಂದರು. ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಅವರನ್ನೂ ಪೊಲೀಸರು ವಶಕ್ಕೆ ಪಡೆದರು. ‘ಪೊಲೀಸರು ಏನೇನು ಮಾಡುತ್ತಾರೆ ಎನ್ನುವುದು ಗೊತ್ತಿದೆ. ಹೀಗಾಗಿ ಅವರ ಎಲ್ಲ ಭದ್ರಕೋಟೆ ದಾಟಿ ಗೂಡ್ಸ್‌ ಆಟೊದಲ್ಲಿ ಬಂದೆವು’ ಎಂದು ಅಶೋಕ ಹೇಳಿದರು. ‘ಮುಡಾ ಹಗರಣದಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ. ಉಪ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಅಕ್ರಮ ಎಸಗಿದ್ದಾರೆ. ಕಂದಾಯ ಭೂಮಿಯನ್ನು ಅಕ್ರಮವಾಗಿ ನೋಂದಣಿ ಮಾಡಿಸಿ ಮುಡಾ ನಿವೇಶನ ಮಾಡಿದ್ದ ಭೂಮಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ನಂತರ ಮುಡಾದಿಂದ 50:50 ಅನುಪಾತದಲ್ಲಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ. ಅವರ ಶಿಫಾರಸು ಇಲ್ಲದೆ ಇಷ್ಟೆಲ್ಲ ನಡೆಯಿತಾ’ ಎಂದು ಪ್ರಶ್ನಿಸಿದರು. ‘ಬಿಜೆಪಿ ಅಥವಾ ಜೆಡಿಎಸ್ ಯಾರ ಅವಧಿಯಲ್ಲೇ ಅಕ್ರಮ ನಡೆದಿದ್ದರೂ ಸರಿ. ಎಲ್ಲರನ್ನೂ ಹಿಡಿದು ಜೈಲಿಗೆ ಹಾಕಲಿ. ಈ ಹಿಂದೆ ಅಧ್ಯಕ್ಷರು–ಆಯುಕ್ತರಾಗಿದ್ದವರು ತಪ್ಪೆಸಗಿದ್ದರೆ ಅವರನ್ನೂ ಬಂಧಿಸಲಿ. ನಿವೇಶನಕ್ಕಾಗಿ ದಶಕದಿಂದ ಕಾಯುತ್ತಿರುವ 85 ಸಾವಿರ ಅರ್ಜಿದಾರರಿಗೆ ನ್ಯಾಯ ಒದಗಿಸುವರೆಗೂ ಬಿಜೆಪಿ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.

ವಿಜಯೇಂದ್ರ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಮುಡಾ ಹಗರಣ ಖಂಡಿಸಿ ‘ಮೈಸೂರು ಚಲೊ’ಗೆ ಮುಂದಾಗಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಶಾಸಕ ಮುನಿರತ್ನ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರನ್ನು ಶುಕ್ರವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು. ಪೊಲೀಸರ ಕ್ರಮ ಖಂಡಿಸಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಾರ್ಯಕರ್ತರು–ಪೊಲೀಸರ ಮಧ್ಯೆ ನೂಕಾಟ ತಳ್ಳಾಟ ನಡೆಯಿತು. ದಾಸರಹಳ್ಳಿ ಬಳಿ ಶಾಸಕ ಮುನಿರಾಜು ಅವರನ್ನು ಪೊಲೀಸರು ವಶಕ್ಕೆ ಪಡೆದರು. ಕೆಂಗೇರಿ ಬಳಿ 80ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದರು. ‘ಕಾರ್ಯಕರ್ತರು ಮತ್ತು ಮುಖಂಡರನ್ನು ವಶಕ್ಕೆ ಪಡೆದಿರುವುದು ಖಂಡನೀಯ. ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ. ದಲಿತರ ಹಣ ಲೂಟಿ ಮಾಡಲಾಗಿದೆ. ಅಲ್ಲದೇ ದಲಿತರು ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಲಪಟಾಯಿಸಲಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು’ ಎಂದು ವಿಜಯೇಂದ್ರ ಆಗ್ರಹಿಸಿದರು. ‘ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿಗೂ ಮೀರಿದ ದೊಡ್ಡ ಹಗರಣ ಬಯಲಾಗಿದೆ. ಇದರಿಂದ ಮುಖ್ಯಮಂತ್ರಿ ಆತಂಕಗೊಂಡಿದ್ದಾರೆ. ಅವರ ಆದೇಶದ ಮೇರೆಗೆ ಪೊಲೀಸರು ಪ್ರತಿಭಟನೆ ಹತ್ತಿಕ್ಕಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT