ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಲೀಗ್ ಚಿಂತನೆಗಳನ್ನು ಪ್ರತಿಫಲಿಸುವ ಕಾಂಗ್ರೆಸ್ ಪ್ರಣಾಳಿಕೆ: ಮೋದಿ

Published 6 ಏಪ್ರಿಲ್ 2024, 12:48 IST
Last Updated 6 ಏಪ್ರಿಲ್ 2024, 12:48 IST
ಅಕ್ಷರ ಗಾತ್ರ

ಸಹರಾನ್‌ಪುರ (ಉತ್ತರ ಪ್ರದೇಶ): ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಟೀಕಿಸಿದ್ದಾರೆ.

ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮೋದಿ, 'ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇದ್ದ ಕಾಂಗ್ರೆಸ್‌ ಪಕ್ಷ, ದಶಕಗಳ ಹಿಂದೆಯೇ ಅಂತ್ಯಕಂಡಿದೆ. ಆಗ ಮುಸ್ಲಿಂ ಲೀಗ್‌ ಹೊಂದಿದ್ದ ಚಿಂತನೆಗಳು, ಈಗಿನ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಪ್ರತಿಫಲಿಸುತ್ತಿವೆ' ಎಂದು ಆರೋಪಿಸಿದ್ದಾರೆ.

'ಸಾಕಷ್ಟು ಮಹಾನ್‌ ವ್ಯಕ್ತಿಗಳು ಕಾಂಗ್ರೆಸ್‌ನಲ್ಲಿದ್ದರು. ಮಹಾತ್ಮಾ ಗಾಂಧಿ ಅವರು ಆಗ ಕಾಂಗ್ರೆಸ್‌ ಜೊತೆಗಿದ್ದರು. ಆಗಿನ ಕಾಂಗ್ರೆಸ್‌ ಇಂದು ಇಲ್ಲ. ದೇಶದ ಬಗ್ಗೆ ಕಾಳಜಿಯುಳ್ಳ ಯೋಜನೆಗಳಾಗಲಿ, ರಾಷ್ಟ್ರಾಭಿವೃದ್ಧಿಯ ಚಿಂತನೆಗಳಾಗಲಿ ಆ ಪಕ್ಷದಲ್ಲಿ ಇಲ್ಲ' ಎಂದು ಗುಡುಗಿದ್ದಾರೆ.

'ನಿನ್ನೆ ಬಿಡುಗಡೆಯಾಗಿರುವ ಚುನಾವಣಾ ಪ್ರಣಾಳಿಕೆಯು, ದೇಶದ ಈಗಿನ ನಿರೀಕ್ಷೆ, ಆಶೋತ್ತರಗಳನ್ನು ಇಂದಿನ ಕಾಂಗ್ರೆಸ್‌ ಸಂಪೂರ್ಣವಾಗಿ ಕೈಬಿಟ್ಟಿದೆ ಎಂಬುದನ್ನು ಸಾಬೀತುಮಾಡಿದೆ' ಎಂದು ಆರೋಪಿಸಿದ್ದಾರೆ.

ದೇಶದ ಅತಿಸೂಕ್ಷ್ಮ ಸ್ಥಳಗಳಲ್ಲಿಯೂ ಕಾಂಗ್ರೆಸ್‌ ನಾಪತ್ತೆಯಾಗಿದೆ ಎಂದು ತಿವಿದಿರುವ ಅವರು, ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ಪ್ರಮುಖ ಪಕ್ಷವಾಗಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. 

'ಉತ್ತರ ಪ್ರದೇಶದಲ್ಲಿ ಗಂಟೆ ಗಂಟೆಗೂ ತನ್ನ ಅಭ್ಯರ್ಥಿಗಳನ್ನು ಬದಲಾಯಿಸುವ ಸ್ಥಿತಿ ಎಸ್‌ಪಿಗೆ ಬಂದೊದಗಿದೆ. ಕಾಂಗ್ರೆಸ್‌ ಪರಿಸ್ಥಿತಿ ಅದಕ್ಕಿಂತಲೂ ಹೀನಾಯವಾಗಿದೆ. ಅವರಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.

ಅಮೇಠಿ ಹಾಗೂ ರಾಯ್‌ ಬರೇಲಿ ಕ್ಷೇತ್ರಗಳನ್ನು ಉಲ್ಲೇಖಿಸಿ, 'ತನ್ನ ಭದ್ರಕೋಟೆ ಎಂದು ಪರಿಗಣಿಸಿದ್ದ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಘೋಷಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ' ಎಂದು ಕಾಲೆಳೆದಿದ್ದಾರೆ.

''ಇಂಡಿ' ಮೈತ್ರಿಕೂಟವು ಅಸ್ಥಿರತೆ ಹಾಗೂ ಅನಿಶ್ಚಿತತೆಗೆ ಹೆಸರಾಗಿದೆ. ಹಾಗಾಗಿಯೇ, ಅವರು ಹೇಳುವ ಯಾವ ಮಾತನ್ನೂ ದೇಶ ಗಂಭೀರವಾಗಿ ಪರಿಗಣಿಸುವುದಿಲ್ಲ' ಎಂದು ಗುಡುಗಿದ್ದಾರೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೆಸರುಗಳನ್ನು ಉಲ್ಲೇಖಿಸದೆ, 'ಇಬ್ಬರು ಬಾಲಕರು ಅಭಿನಯಿಸಿದ್ದ ಸಿನಿಮಾ ಉತ್ತರ ಪ್ರದೇಶದಲ್ಲಿ ಕಳೆದ ಸಲ ಮುಗ್ಗರಿಸಿತ್ತು. ಅದೇ ಸಿನಿಮಾವನ್ನು ಮತ್ತೆ ರಿಲೀಸ್‌ ಮಾಡಲಾಗುತ್ತಿದೆ' ಎಂದು ಛೇಡಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು.

ಲೋಕಸಭೆ ಚುನಾವಣೆಯ ಏಳೂ ಹಂತಗಳಲ್ಲಿ ಮತದಾನ ನಡೆಯಲಿರುವ ಮೂರು ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಮೊದಲ ಹಂತದಲ್ಲಿ ಇಲ್ಲಿನ 8 ಕ್ಷೇತ್ರಗಳಿಗೆ ಏಪ್ರಿಲ್‌ 19ರಂದು ಮತದಾನ ನಡೆಯಲಿದೆ.

ಈ ಚುನಾವಣೆಗೂ ಮುನ್ನ ಮತ್ತೆ ಒಂದಾಗಿರುವ ಕಾಂಗ್ರೆಸ್ ಹಾಗೂ ಎಸ್‌ಪಿ, ಜೊತೆಯಾಗಿ ಚುನಾವಣೆ ಎದುರಿಸಲು ಸಜ್ಜಾಗಿವೆ. ಇಲ್ಲಿನ 80 ಕ್ಷೇತ್ರಗಳ ಪೈಕಿ 62ರಲ್ಲಿ ಎಸ್‌ಪಿ, 17 ಕಡೆ ಕಾಂಗ್ರೆಸ್‌ ಹಾಗೂ ಒಂದು ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ ಕಣಕ್ಕಿಳಿಯಲಿವೆ.

ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT