ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಎರಡೇ ವಾರ ಬಾಕಿ: ಗಲಭೆ ಪೀಡಿತ ಮಣಿಪುರದಲ್ಲಿ ರಂಗೇರಲಿಲ್ಲ ಚುನಾವಣಾ ಕಣ

Published 6 ಏಪ್ರಿಲ್ 2024, 11:04 IST
Last Updated 6 ಏಪ್ರಿಲ್ 2024, 11:04 IST
ಅಕ್ಷರ ಗಾತ್ರ

ಇಂಫಾಲ: ಮಣಿಪುರದ ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಕೇವಲ ಎರಡು ವಾರಗಳಷ್ಟೇ ಬಾಕಿ ಇದೆ. ಆದಾಗ್ಯೂ, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿಲ್ಲ. ಪ್ರಚಾರಕ್ಕಾಗಿನ ಪೋಸ್ಟರ್‌ಗಳಾಗಲಿ, ಬೃಹತ್‌ ರ್‍ಯಾಲಿಗಳಾಗಲಿ, ಮುಖಂಡರ ಸಾರ್ವಜನಿಕ ಸಭೆಯಂತಹ ಯಾವುದೇ ಸಾಂಪ್ರದಾಯಿಕ ಚಟುವಟಿಕೆಗಳು ಇಲ್ಲದಿರುವುದು ಎದ್ದುಕಾಣುತ್ತಿದೆ.

ನಾಗರಿಕರಿಗೆ ತಮ್ಮ ಹಕ್ಕು ಚಲಾಯಿಸಲು ಕರೆ ನೀಡುವುದಕ್ಕಾಗಿ ಸ್ಥಳೀಯ ಚುನಾವಣಾ ಅಧಿಕಾರಿಗಳು ಹಾಕಿರುವ ಬ್ಯಾನರ್‌ಗಳಷ್ಟೇ, ಇಲ್ಲಿಯೂ ಚುನಾವಣೆ ನಡೆಯಲಿದೆ ಎಂಬ ಮಾಹಿತಿ ನೀಡುವಂತಿವೆ.

ಭೀಕರ ಕೋಮು ಸಂಘರ್ಷಕ್ಕೆ ಸಾಕ್ಷಿಯಾಗಿರುವ ರಾಜ್ಯದಲ್ಲಿ ಚುನಾವಣಾ ಬಿಸಿ ಏರದೇ ಇರುವ ಕಾರಣ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರೂ, ಇಲ್ಲಿಗೆ ಭೇಟಿ ನೀಡದೆ ಅಂತರ ಕಾಯ್ದುಕೊಂಡಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಂತಹ ನಾಯಕರನ್ನು ತಾರಾ ಪ್ರಚಾರಕರೆಂದು ಪಟ್ಟಿ ಮಾಡಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಇತರ ಕೆಲವು ನಾಯಕರನ್ನು ಕಾಂಗ್ರೆಸ್‌ ಸಹ ನೆಚ್ಚಿಕೊಂಡಿದೆ.

ಆದಾಗ್ಯೂ ಅವರ್ಯಾರೂ ಇಲ್ಲಿಯವರೆಗೆ ಮಣಿಪುರಕ್ಕೆ ಭೇಟಿ ನೀಡಿಲ್ಲ.

ಪ್ರಚಾರ ಪ್ರಕ್ರಿಯೆಗಳ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ ಎಂಬುದನ್ನು ಖಚಿತಪಡಿಸಿರುವ ಮಣಿಪುರ ಚುನಾವಣಾ ಆಯೋಗ, ರಾಜ್ಯದಲ್ಲಿ ಮತ್ತೆ ಪರಿಸ್ಥಿತಿ ಹದಗೆಡದಂತೆ ಎಚ್ಚರವಹಿಸುವ ಸಲುವಾಗಿ ರಾಜಕೀಯ ನಾಯಕರು ತೀವ್ರ ತರಹದ ಪ್ರಚಾರದಲ್ಲಿ ತೊಡಗಿಕೊಳ್ಳದಿರುವುದು ಅಗತ್ಯ ಎಂದು ಪ್ರತಿಪಾದಿಸಿದೆ.

'ಚುನಾವಣಾ ಆಯೋಗದ ಕಡೆಯಿಂದ ಪ್ರಚಾರದ ಮೇಲೆ ಯಾವುದೇ ನಿರ್ಬಂಧವಿಲ್ಲ. ನೀತಿ ಸಂಹಿತೆಯ ಅಡಿಯಲ್ಲಿ ರಾಜಕೀಯ ಚಟುವಟಿಕೆ ನಡೆಸಬಹುದಾಗಿದೆ' ಎಂದು ಮುಖ್ಯ ಚುನಾವಣಾಧಿಕಾರಿ ಪ್ರದೀಪ್‌ ಝಾ ತಿಳಿಸಿದ್ದಾರೆ.

ರಾಜ್ಯದ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಅಭ್ಯರ್ಥಿಗಳು
ರಾಜ್ಯದ ಸದ್ಯದ ಸ್ಥಿತಿಯನ್ನು ವಿವಿಧ ಪಕ್ಷಗಳ ಅಭ್ಯರ್ಥಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಟಿ.ಬಸಂತ ಕುಮಾರ್‌ ಸಿಂಗ್‌, ಕಾಂಗ್ರೆಸ್‌ನ ಎ.ಬಿಮಲ್‌ ಅಕೈಜಾಮ್‌, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾದ ಮಹೇಶ್ವರ್‌ ಥೌನೋಜಾಮ್‌ ಹಾಗೂ ಮಣಿಪುರ ಪೀಪಲ್ಸ್‌ ಪಕ್ಷ ಬೆಂಬಲಿತ ರಾಜ್‌ಕುಮಾರ್‌ ಸೋಮೇಂದ್ರ ಸಿಂಗ್‌ ಅವರು ವಿಭಿನ್ನ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಮತದಾರರನ್ನು ತಲುಪಲು ಸಾಂಪ್ರದಾಯಿಕ ಮಾರ್ಗವನ್ನು ಬಿಟ್ಟು, ತಮ್ಮದೇ ನಿವಾಸದಲ್ಲಿ ಅಥವಾ ಪಕ್ಷದ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಬೆಂಬಲಿಗರ ತಂಡಗಳನ್ನು ರಚಿಸಿ ಮನೆ–ಮನೆ ಪ್ರಚಾರಕ್ಕೆ ಹೋಗುವಂತೆ ಸೂಚಿಸುತ್ತಿದ್ದಾರೆ.

'ಸಾರ್ವಜನಿಕ ಸಭೆ ಹಾಗೂ ಸಮಾವೇಶಗಳನ್ನು ನಾನೇ ನಡೆಸಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಪ್ರಚಾರವನ್ನು ತೀವ್ರ ರೀತಿಯಲ್ಲಿ ನಡೆಸದಿರಲು ನಿರ್ಧರಿಸಿದ್ದೇನೆ' ಎಂದು ಮಹೇಶ್ವರ್‌ ತಿಳಿಸಿದ್ದಾರೆ.

'ಸದ್ಯದ ಸ್ಥಿತಿಯಲ್ಲಿ ಮತದಾನದ ಪ್ರಾಮುಖ್ಯತೆಯನ್ನು ಜನರು ಅರಿತಿದ್ದಾರೆ. ಹಾಗಾಗಿ ಜವಾಬ್ದಾರಿಯಿಂದ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ' ಎಂದೂ ಹೇಳಿದ್ದಾರೆ.

ಮಣಿಪುರದ ಶಿಕ್ಷಣ ಮತ್ತು ಕಾನೂನು ಸಚಿವರೂ ಆಗಿರುವ ಬಿಜೆಪಿ ಅಭ್ಯರ್ಥಿ ಬಸಂತ ಕುಮಾರ್‌, ತಮ್ಮ ಮನೆ ಮತ್ತು ಕಚೇರಿಯಲ್ಲೇ ಸಭೆ ನಡೆಸಿದ್ದಾರೆ. ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಕಾಂಗ್ರೆಸ್‌ನ ಅಕೈಜಾಮ್‌ ಸಹ ಇಂಥದೇ ತಂತ್ರ ಅನುಸರಿಸಿದ್ದಾರೆ.

ರಾಹುಲ್‌ ಗಾಂಧಿ ನಡೆಸಿದ್ದ ಭಾರತ ಜೋಡೊ ನ್ಯಾಯ ಯಾತ್ರೆಯ ಚಿತ್ರಗಳು ಹಾಗೂ ಅಕೈಜಾಮ್‌ಗೆ ಮತ ನೀಡುವಂತೆ ಕರೆ ನೀಡುವ ಮಾಹಿತಿಯನ್ನೊಳಗೊಂಡ ಪೋಸ್ಟರ್‌ಗಳನ್ನು ರಾಜಧಾನಿ ಇಂಫಾಲದಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ಅಂಟಿಸಲಾಗಿದೆ.

'ಚುನಾವಣೆ ನಮ್ಮ ಪಾಲಿಗೆ ತುಂಬಾ ಮುಖ್ಯ. ಆದರೆ, ಅಬ್ಬರದ ಪ್ರಚಾರ ನಡೆಸುವ ಮೂಲಕ ಜನರ ಗಾಯದ ಮೇಲೆ ಉಪ್ಪು ಸುರಿಯಲು ಸಾಧ್ಯವಿಲ್ಲ. ಚುನಾವಣೆಗಳು ಹಬ್ಬವಿದ್ದಂತೆ. ಆದರೆ, ಸದ್ಯದ ಸ್ಥಿತಿಯಲ್ಲಿ ಜೋರಾಗಿ ಸಂಭ್ರಮಿಸಲಾಗದು' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಎ.ಶಾರದಾ ದೇವಿ ಹೇಳಿದ್ದಾರೆ.

'ಜನರು ತಮ್ಮ ಮನೆಗಳಿಂದ ದೂರ ಹೋಗಿ ಬದುಕುತ್ತಿದ್ದಾರೆ. ಅವರೆಲ್ಲ ನಮ್ಮ ಮೇಲೆ ವಿಶ್ವಾಸವಿಡಬೇಕು ಎಂದು ಬಯಸುತ್ತಿದ್ದೇವೆ. ಆದರೆ, ಅದಕ್ಕಾಗಿ ಅಭಿಯಾನ ನಡೆಸಲಾಗದು' ಎಂದೂ ಸ್ಪಷ್ಟಪಡಿಸಿದ್ದಾರೆ.

ಹಿಂಸಾಚಾರಕ್ಕೆ ಕಾರಣವಾದ ಪ್ರತಿಭಟನಾ ರ‍್ಯಾಲಿ
ಮಣಿಪುರದ ಜನಸಂಖ್ಯೆಯ ಶೇ 53 ರಷ್ಟಿರುವ ಮೈತೇಯಿ ಸಮುದಾಯ, ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಬೇಡಿಕೆ ಇಟ್ಟಿತ್ತು. ಇದನ್ನು ಖಂಡಿಸಿದ್ದ 'ಅಖಿಲ ಮಣಿಪುರ ಬುಡಕಟ್ಟು ವಿದ್ಯಾರ್ಥಿ ಸಂಘಟನೆ' (ಎಟಿಎಸ್‌ಯುಎಂ) 2023ರ ಮೇ 3 ರಂದು ಪ್ರತಿಭಟನಾ ರ‍್ಯಾಲಿಗೆ ಕರೆ ನೀಡಿತ್ತು. ಇದರಿಂದಾಗಿ ಗಲಭೆ ಸೃಷ್ಟಿಯಾಗಿ, ಜನಾಂಗೀಯ ಹಿಂಸಾಚಾರ ನಡೆದಿತ್ತು.

ಹಿಂಸಾಚಾರ ಆರಂಭವಾದ ಬಳಿಕ ಕನಿಷ್ಠ 219 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಮನೆಗಳನ್ನು ತೊರೆದಿರುವ ಸುಮಾರು 50,000ಕ್ಕೂ ಹೆಚ್ಚು ಜನರು, ವಿವಿಧ ಜಿಲ್ಲೆಗಳಲ್ಲಿ ತೆರೆಯಲಾಗಿರುವ ಆಶ್ರಯ ಶಿಬಿರಗಳಲ್ಲಿ ನೆಲೆಸಿದ್ದಾರೆ.

ಎರಡು ಹಂತದಲ್ಲಿ ಮತದಾನ
ಲೋಕಸಭೆಯ ಎರಡು ಕ್ಷೇತ್ರಗಳಿರುವ ಮಣಿಪುರದಲ್ಲಿ ಏಪ್ರಿಲ್‌ 19 ಹಾಗೂ 26ರಂದು ಮತದಾನ ನಡೆಯಲಿದೆ.

ಸ್ಥಳಾಂತರಗೊಂಡಿರುವ ಜನರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಆಶ್ರಯ ಶಿಬಿರಗಳಲ್ಲಿ ಮತಗಟ್ಟೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ಆಶ್ರಯ ಶಿಬಿರಗಳಿಗೆ ತೆರಳಿ ಮತ ಯಾಚಿಸಲು ಅಭ್ಯರ್ಥಿಗಳಿಗೆ ಅವಕಾಶವಿದೆಯಾದರೂ, ಯಾರೊಬ್ಬರೂ ಅತ್ತ ಸುಳಿದಿಲ್ಲ.

ಕ್ವಾಕೇಯಿಥೆಮ್‌ ಪ್ರದೇಶದಲ್ಲಿ ಮೈಥೇಯಿ ಸಮುದಾಯದವರೇ ಇರುವ ಆಶ್ರಯ ಶಿಬಿರದಲ್ಲಿರುವ ದಿಮಾ ಎಂಬ ಮಹಿಳೆ ಈ ಬಗ್ಗೆ ಮಾತನಾಡಿದ್ದಾರೆ.

'ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಂದೆರಡು ಬಾರಿ ಇಲ್ಲಿಗೆ ಬಂದಿದ್ದಾರೆ. ಆದರೆ, ಯಾವ ಅಭ್ಯರ್ಥಿಯೂ ನಮ್ಮನ್ನು ಭೇಟಿ ಮಾಡಿಲ್ಲ. ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗುವ ಯಾವ ಭರವಸೆಯೂ ಇಲ್ಲದೆ, ನಾವು ಎಂತಹ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂಬುದು ಅಭ್ಯರ್ಥಿಗಳು ಇಲ್ಲಿಗೆ ಬಂದರಷ್ಟೇ ಗೊತ್ತಾಗುತ್ತದೆ' ಎಂದು ನೊಂದುಕೊಂಡಿದ್ದಾರೆ. ದಿಮಾ ಅವರ ಇಬ್ಬರು ಮಕ್ಕಳೂ ಶಿಬಿರದಲ್ಲಿದ್ದಾರೆ.

ಕುಕಿ ಸಮುದಾಯದವರು ನೆಲಸಿರುವ ಮೊರೇಹ್‌, ಚುರಚಾಂದಪುರದಲ್ಲಿಯೂ ಇಂಥದೇ ಪರಿಸ್ಥಿತಿ ಇದೆ. ಕುಕಿ ಸಮುದಾಯದ ಕೆಲವು ಸಂಘಟನೆಗಳು ಮತದಾನ ಬಹಿಷ್ಕರಿಸುವುದಾಗಿ ಈಗಾಗಲೇ ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT