ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ರಾಜಕೀಯ ಅಖಾಡಕ್ಕೆ ದಿಂಗಾಲೇಶ್ವರ ಸ್ವಾಮೀಜಿ

ಪ್ರಲ್ಹಾದ ಜೋಶಿ ಮೇಲಿನ ಸಿಟ್ಟಿನಿಂದ ಸ್ಪರ್ಧೆ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಲ್ಹಾದ ಜೋಶಿ ವಿರುದ್ಧ ತೊಡೆ ತಟ್ಟಿರುವ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಬಿಜೆಪಿಯ ಪ್ರಲ್ಹಾದ ಜೋಶಿ ಹಾಗೂ ಕಾಂಗ್ರೆಸ್‌ನ ವಿನೋದ ಅಸೂಟಿ ನಡುವಿನ ಸ್ಪರ್ಧೆ ಈಗ ಸ್ವಾಮೀಜಿ ಅವರ ಪ್ರವೇಶದಿಂದ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಸ್ವಾಮೀಜಿ ಅವರ ಸ್ಪರ್ಧೆ ಕುತೂಹಲ ಕೆರಳಿಸಿದೆ.

‘ರಾಷ್ಟ್ರೀಯ ಪಕ್ಷಗಳ ನಾಯಕರು ಅಲ್ಲದೇ ಭಕ್ತರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಸ್ವಾಮೀಜಿ ಎರಡು ವಾರದ ಹಿಂದೆಯೇ ಗದಗದಲ್ಲಿ ಹೇಳಿದ್ದರು. ನಂತರ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವಿರುದ್ಧ ನಿರಂತರ ಹರಿಹಾಯ್ದರು. ಜೋಶಿ ಬದಲು ಲಿಂಗಾಯತ ನಾಯಕರಿಗೆ ಟಿಕೆಟ್ ನೀಡುವಂತೆ ಮಾರ್ಚ್ 31ರವರೆಗೆ ಗಡುವು ಕೊಟ್ಟರು. ಆದರೆ, ಬಿಜೆಪಿ ಹೈಕಮಾಂಡ್ ಸ್ಪಂದಿಸಲಿಲ್ಲ.

‘ಪ್ರಲ್ಹಾದ ಜೋಶಿ ಅವರ ಸೇಡಿನ ರಾಜಕಾರಣದಿಂದ ವೀರಶೈವ ಲಿಂಗಾಯತ. ಕುರುಬ, ಪರಿಶಿಷ್ಟ ಸಮುದಾಯದ ನಾಯಕರು ಮಾನಸಿಕ, ಆರ್ಥಿಕ ಮತ್ತು ರಾಜಕೀಯವಾಗಿ ಕುಸಿದಿದ್ದಾರೆ. ಮಹಿಳಾ ಜನಪ್ರತಿನಿಧಿಗಳಿಗೆ ಅವಮಾನವಾಗಿದೆ. ಜಗದೀಶ ಶೆಟ್ಟರ್‌ನಂತಹ ನಾಯಕರ ಟಿಕೆಟ್ ತಪ್ಪಿಸುವಲ್ಲಿ ಜೋಶಿ ಕೈವಾಡವಿದೆ’ ಎಂದು ಸ್ವಾಮೀಜಿ ಆರೋಪಿಸಿದ್ದರು.

‘ರಾಜಕೀಯ ಅಲ್ಲದೇ, ವೈಯಕ್ತಿಕವಾಗಿಯೂ ಜೋಶಿ ಅವರ ನಡೆ ಬಗ್ಗೆ ಸ್ವಾಮೀಜಿಗೆ ಅಸಮಾಧಾನವಿದೆ. ಮೂರು ವರ್ಷಗಳ ಹಿಂದೆ ಯಾವುದೋ ಕೆಲಸಕ್ಕಾಗಿ ಸ್ವಾಮೀಜಿ ದೂರವಾಣಿ ಕರೆ ಮಾಡಿದಾಗ, ಜೋಶಿ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಅಲ್ಲದೇ, ನಿಮ್ಮಲ್ಲಿ ಲಿಂಗಾಯತ ಮುಖಂಡರು ಯಾರು ಇಲ್ಲವೇ? ಅವರ ಬಳಿ ಹೋಗಿ ಎಂದಿದ್ದು ಸ್ವಾಮೀಜಿಗೆ ಬೇಸರ ಉಂಟು ಮಾಡಿತ್ತು’ ಎಂದು ಮೂಲಗಳು ತಿಳಿಸಿವೆ.

‘ಸಂಸದರು ಒಂದು ಜಾತಿಗೆ ಸೀಮಿತರಾದವರಲ್ಲ. ಎಲ್ಲ ಜಾತಿ, ಸಮುದಾಯದವರು ಮತ ಹಾಕಿರುತ್ತಾರೆ. ಎಲ್ಲರ ಅಹವಾಲು ಆಲಿಸಬೇಕು. ಎಲ್ಲರ ಅಭಿವೃದ್ಧಿಗಾಗಿ ದುಡಿಯಬೇಕು. ಹೀಗೆ ಮಾಡದ ಅವರನ್ನು ಚುನಾವಣಾ ಕಣದಿಂದ ಬದಲಿಸಿ, ಬೇರೊಬ್ಬ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಸ್ವಾಮೀಜಿ ಅವರು ಪಕ್ಷದ ವರಿಷ್ಠ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದರು. ಆದರೆ, ಇದಕ್ಕೆ ಯಡಿಯೂರಪ್ಪ ಒಪ್ಪಲಿಲ್ಲ. ಹೀಗಾಗಿ ಸ್ವಾಮೀಜಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಪಣತೊಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.

ಚುನಾವಣೆಗೆ ಎರಡನೇ ಧರ್ಮಗುರು

ಧಾರವಾಡ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವವರಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಎರಡನೇ ಧರ್ಮಗುರುಗಳು. 2004ರಲ್ಲಿ ಕನ್ನಡ ನಾಡು ಪಕ್ಷದಿಂದ ಜಗದ್ಗುರು ಮಾತೆ ಮಹಾದೇವಿ  ಸ್ಪರ್ಧಿಸಿದ್ದರು. ಉದ್ಯಮಿ ವಿಜಯ ಸಂಕೇಶ್ವರ 2004ರಲ್ಲಿ ಬಿಜೆಪಿ ತೊರೆದು ಕನ್ನಡ ನಾಡು ಪಕ್ಷ ಕಟ್ಟಿದ್ದರು. ಆಗ ಮೊದಲ ಸಲ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಲ್ಹಾದ ಜೋಶಿ ಗೆಲುವು ಸಾಧಿಸಿದ್ದರು.

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನನ್ನ ಬಗ್ಗೆ ಅವರೇನೇ ಹೇಳಿದರೂ ನನಗೆ ಆಶೀರ್ವಾದ ಇದ್ದಂತೆ. ಲೋಕಸಭೆ ಚುನಾವಣೆ ಜಾತಿ ಅಲ್ಲ ರಾಷ್ಟ್ರೀಯತೆ ಆಧಾರದ ಮೇಲೆ ನಡೆಯುತ್ತದೆ
–ಪ್ರಲ್ಹಾದ ಜೋಶಿ, ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT