ಢಾಕಾ: ಭಾರತ, ನೇಪಾಳ ಮತ್ತು ಕೆನಡಾದ 284 ನಾಗರಿಕರು ಹಿಂಸಾಚಾರ ಪೀಡಿತ ಬಾಂಗ್ಲಾದಿಂದ ಮೇಘಾಲಯಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಾಕಿ ಇಂಟಿಗ್ರೇಟೆಡ್ ಚೆಕ್‌ಪೋಸ್ಟ್ ಮೂಲಕ ಮೇಘಾಲಯ ತಲುಪಿದ್ದಾರೆ. ಅವರ ಪೈಕಿ 168 ಮಂದಿ ನೇಪಾಳಿಗರು, 115 ಮಂದಿ ಭಾರತೀಯರು ಮತ್ತು ಒಬ್ಬ ಕೆನಡಾ ಪ್ರಜೆ ಇದ್ದಾರೆ ಎಂದು ಹೇಳಿದ್ದಾರೆ.
‘ಕಳೆದ ಮೂರು ದಿನಗಳಲ್ಲಿ ಭಾರತ, ಭೂತಾನ್ ಮತ್ತ ನೇಪಾಳ, ಕೆನಾಡದಿಂದ ಒಟ್ಟು 953 ನಾಗರಿಕರು ದಾಕಿ ಚೆಕ್‌ಪೋಸ್ಟ್ ಮೂಲಕ ಮೇಘಾಲಯ ತಲುಪಿದ್ದಾರೆ’ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏತನ್ಮಧ್ಯೆ, ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಸಿಲುಕಿದ್ದ ಸುಮಾರು 800 ನೇಪಾಳಿ ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶನಿವಾರವೂ ಮುಂದುವರಿದಿದೆ. ಪ್ರತಿಭಟನೆಯಲ್ಲಿ ಇಲ್ಲಿಯವರೆಗೆ 103 ಮಂದಿ ಮೃತಪಟ್ಟಿದ್ದಾರೆ ಎಂದು ಡೈಲಿ ಪ್ರೊಥೊಮ್ ಅಲೋ ಸುದ್ದಿಪತ್ರಿಕೆ ವರದಿ ಮಾಡಿದೆ. ಹಿಂಸಾಚಾರದಲ್ಲಿ ಸುಮಾರು ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂದು ಢಾಕಾದಲ್ಲಿನ ಅಮೆರಿಕ ರಾಯಭಾರ ಕಚೇರಿಯು ವರದಿ ಮಾಡಿದೆ.