ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರ, ಗಲಭೆಯಲ್ಲಿ ಕಾಂಗ್ರೆಸ್ ರಾಜಸ್ಥಾನವನ್ನು ಅಗ್ರಸ್ಥಾನಕ್ಕೇರಿಸಿದೆ:ಮೋದಿ

Published 18 ನವೆಂಬರ್ 2023, 10:04 IST
Last Updated 18 ನವೆಂಬರ್ 2023, 10:04 IST
ಅಕ್ಷರ ಗಾತ್ರ

ಜೈಪುರ: ಕಾಂಗ್ರೆಸ್‌ ಸರ್ಕಾರ ತನ್ನ ತುಷ್ಟೀಕರಣದ ನೀತಿಯಿಂದಾಗಿ ಸಮಾಜ ವಿರೋಧಿ ಚಟುವಟಿಕೆಗಳನ್ನು ಸಡಿಲಗೊಳಿಸುವ ಮೂಲಕ ರಾಜಸ್ಥಾನವನ್ನು ಅಪರಾಧ ಮತ್ತು ಗಲಭೆಗಳಲ್ಲಿ ಅಗ್ರಸ್ಥಾನಕ್ಕೇರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಭರತ್‌ಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ‘ಜಾದೂಗಾರ’ರಿಗೆ ಮತ ನೀಡದಿರಲು ಜನರು ನಿರ್ಧರಿಸಿದ್ದಾರೆ. ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಕಣ್ಮರೆಯಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಸೆಂಬರ್ 3ರಂದು ಕಾಂಗ್ರೆಸ್ ‘ಛೂ ಮಂತರ್’ ಆಗಲಿದೆ. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ವೃತ್ತಿಪರ ಜಾದೂಗಾರನ ಮಗನಾದ ಗೆಹಲೋತ್ ಅವರು ಮ್ಯಾಜಿಕ್ ಟ್ರಿಕ್ಸ್ ಪ್ರದರ್ಶಿಸುವ ಮೂಲಕ ದೇಶದಾದ್ಯಂತ ಸುತ್ತಾಟ ನಡೆಸಿದ್ದರು ಎಂದು ಮೋದಿ ಲೇವಡಿ ಮಾಡಿದ್ದಾರೆ.

‘ಒಂದೆಡೆ ಭಾರತ ವಿಶ್ವ ನಾಯಕನಾಗುತ್ತಿದೆ. ಮತ್ತೊಂದೆಡೆ ಕಳೆದ ಐದು ವರ್ಷಗಳಲ್ಲಿ ರಾಜಸ್ಥಾನದಲ್ಲಿ ಏನಾಯಿತು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ರಾಜಸ್ಥಾನವನ್ನು ಭ್ರಷ್ಟಾಚಾರ, ಗಲಭೆಗಳು ಮತ್ತು ಅಪರಾಧಗಳಲ್ಲಿ ನಾಯಕನನ್ನಾಗಿ ಮಾಡಿದೆ. ಅದಕ್ಕಾಗಿಯೇ ಈ ಬಾರಿ ರಾಜಸ್ಥಾನ ಮಾಂತ್ರಿಕ ಜೀ... (ಅಶೋಕ್ ಗೆಹಲೋತ್) ನೀವು ಬಹುಮತ ಪಡೆಯಲು ಸಾಧ್ಯವಿಲ್ಲ’ ಎಂದು ಮೋದಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ತನ್ನ ತುಷ್ಟೀಕರಣ ನೀತಿಯಿಂದಾಗಿ ಅಪರಾಧಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಿದೆ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ಎಲ್ಲೇ ಅಧಿಕಾರಕ್ಕೆ ಬಂದರೂ ಭಯೋತ್ಪಾದಕರು, ಕ್ರಿಮಿನಲ್‌ಗಳು ಮತ್ತು ಗಲಭೆಕೋರರನ್ನು ಮುಕ್ತವಾಗಿ ಓಡಾಡುತ್ತಿರುತ್ತಾರೆ. ಕಾಂಗ್ರೆಸ್‌ಗೆ ಓಲೈಕೆಯೇ ಸರ್ವಸ್ವ. ಜನರ ಪ್ರಾಣವನ್ನು ಪಣಕ್ಕಿಟ್ಟಾದರೂ ಸರಿ ಕಾಂಗ್ರೆಸ್ ಓಲೈಕೆಗಾಗಿ ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಮೋದಿ ಹರಿಹಾಯ್ದಿದ್ದಾರೆ.

ನವೆಂಬರ್ 25ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT