ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಗ್ನಿ ಅನಾಹುತ: ರಾಜ್‌ಕೋಟ್‌ ಪಾಲಿಕೆಗೆ ಹೈಕೋರ್ಟ್‌ ತರಾಟೆ

ರಾಜ್ಯದ ಆಡಳಿತ ಯಂತ್ರದ ಮೇಲೆ ವಿಶ್ವಾಸವಿಲ್ಲ ಎಂದ ಕೋರ್ಟ್‌
Published : 27 ಮೇ 2024, 14:20 IST
Last Updated : 27 ಮೇ 2024, 14:20 IST
ಫಾಲೋ ಮಾಡಿ
Comments

ಅಹಮದಾಬಾದ್: 27 ಜನರ ಸಾವಿಗೆ ಕಾರಣವಾದ ಟಿಆರ್‌ಪಿ ಗೇಮ್‌ ಜೋನ್‌ ಅಗ್ನಿ ಅನಾಹುತದ ವಿಚಾರವಾಗಿ ರಾಜ್‌ಕೋಟ್‌ ನಗರ ಸ್ಥಳೀಯ ಸಂಸ್ಥೆಯ ವಿರುದ್ಧ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಗುಜರಾತ್ ಹೈಕೋರ್ಟ್, ರಾಜ್ಯದ ಆಡಳಿತ ಯಂತ್ರದಲ್ಲಿ ತನಗೆ ವಿಶ್ವಾಸ ಇಲ್ಲ ಎಂದು ಹೇಳಿದೆ.

ರಾಜ್ಯದ ಆಡಳಿತ ಯಂತ್ರವು ಮುಗ್ಧ ಜನರ ಜೀವ ಹಾನಿಯಾದ ನಂತರವಷ್ಟೇ ಕ್ರಿಯಾಶೀಲವಾಗುತ್ತದೆ ಎಂದು ಅದು ಕಿಡಿಕಾರಿದೆ.

ಟಿಆರ್‌ಪಿ ಗೇಮ್‌ ಜೋನ್‌ ಅಗತ್ಯವಿರುವ ಅನುಮತಿ ಪಡೆದಿರಲಿಲ್ಲ ಎಂದು ರಾಜ್‌ಕೋಟ್‌ ಮಹಾನಗರ ಪಾಲಿಕೆಯ ವಕೀಲರು ತಿಳಿಸಿದಾಗ, ಅಷ್ಟು ದೊಡ್ಡ ಕಟ್ಟಡವು ತನ್ನ ವ್ಯಾಪ್ತಿಯಲ್ಲಿ ತಲೆ ಎತ್ತುತ್ತಿದ್ದಾಗ ಪಾಲಿಕೆಯು ಕಣ್ಣು ಮುಚ್ಚಿ ಕುಳಿತಿತ್ತೇ ಎಂದು ಪ್ರಶ್ನಿಸಿತು.

‘ನೀವು ಕಣ್ಣು ಮುಚ್ಚಿ ಕುಳಿತಿದ್ದಿರಿ. ಈ ದೊಡ್ಡ ಕಟ್ಟಡ ಇದ್ದಿದ್ದು ನಿಮಗೆ ಗೊತ್ತಿರಲಿಲ್ಲವೇ? ಈ ಜೋನ್‌ ಕಳೆದ ಎರಡೂವರೆ ವರ್ಷಗಳಿಂದ ಇದ್ದಿದ್ದಕ್ಕೆ ಪಾಲಿಕೆಯ ವಿವರಣೆ ಏನು? ಯಾವ ಅಗ್ನಿ ಸುರಕ್ಷತೆಗೆ ಅವರು ಅರ್ಜಿ ಸಲ್ಲಿಸಿದ್ದರು? ಟಿಕೆಟ್‌ ನೀಡುತ್ತಿದ್ದಾಗ ಮನರಂಜನಾ ತೆರಿಗೆ ಬಗ್ಗೆ ನಿಮಗೆ ಅರಿವು ಇತ್ತೇ? ಇಡೀ ವಿಷಯದ ಬಗ್ಗೆ ನೀವು ಸಂಪೂರ್ಣವಾಗಿ ಕುರುಡಾಗಿದ್ದಿರಿ ಎಂದು ನಾವು ಭಾವಿಸಬಹುದೇ?’ ಎಂದು ಪೀಠವು ಹೇಳಿತು.

ಅಗ್ನಿ ಅನಾಹುತದ ಬಗ್ಗೆ ಗುಜರಾತ್ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ನ್ಯಾಯಮೂರ್ತಿಗಳಾದ ಬಿರೇನ್ ವೈಷ್ಣವ್ ಮತ್ತು ದೇವನ್ ದೇಸಾಯಿ ಅವರು ಇರುವ ವಿಶೇಷ ಪೀಠವು ಅದರ ವಿಚಾರಣೆ ನಡೆಸುತ್ತಿದೆ.

ಈ ಮನರಂಜನಾ ಕೇಂದ್ರ ಇದ್ದಿದ್ದರ ಬಗ್ಗೆ ಪಾಲಿಕೆಗೆ ಮೊದಲು ಗೊತ್ತಾಗಿದ್ದು ಯಾವಾಗ ಎಂದು ಪೀಠವು ಪ್ರಶ್ನಿಸಿತು. ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ಈ ನ್ಯಾಯಾಲಯವು ಅಗ್ನಿ ಸುರಕ್ಷತೆ ಕುರಿತು ನೀಡಿದ್ದ ಆದೇಶದ ಬಗ್ಗೆ ನಿಮಗೆ ಗೊತ್ತಿರಲಿಲ್ಲವೇ? ಆ ಮನರಂಜನಾ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ನಿಮ್ಮ ಆಯುಕ್ತರು ಅಲ್ಲಿಗೆ ಹೋಗಿದ್ದರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. 18 ತಿಂಗಳು ಪಾಲಿಕೆ ಏನು ಮಾಡುತ್ತಿತ್ತು?’ ಎಂದು ಕೂಡ ಪೀಠವು ಕೇಳಿತು.

ಟಿಆರ್‌ಪಿ ಗೇಮ್‌ ಜೋನ್ ಸ್ಥಾಪನೆಯಾದ 2021ರಿಂದ ಅಗ್ನಿ ಅನಾಹುತ ಸಂಭವಿಸಿದ 2024ರ ಮೇ 25ರವರೆಗೆ ಪಾಲಿಕೆಗೆ ಆಯುಕ್ತರಾಗಿದ್ದ ಎಲ್ಲರೂ ‘ಈ ದುರಂತಕ್ಕೆ ಹೊಣೆಗಾರರಾಗಬೇಕು’ ಎಂದು ಪೀಠವು ಕೆಂಡಾಮಂಡಲವಾಗಿ ಹೇಳಿತು. ಅವರೆಲ್ಲ ಪ್ರತ್ಯೇಕವಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿತು.

ಟಿಆರ್‌ಪಿ ಗೇಮ್‌ ಜೋನ್‌ ನಿರಾಕ್ಷೇಪಣಾ ಪತ್ರವನ್ನು ಪಡೆದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಈ ನ್ಯಾಯಾಲಯದ ಸೂಚನೆಗಳನ್ನು ಪಾಲಿಸದೆ ಇದ್ದುದಕ್ಕೆ ಹಾಗೂ ಕರ್ತವ್ಯಲೋಪ ಎಸಗಿದ್ದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸೂಚಿಸುವ ಯಾವುದೇ ಆದೇಶವನ್ನು ನಾವು ಈ ಹಂತದಲ್ಲಿ ಹೊರಡಿಸುತ್ತಿಲ್ಲ. ಆದರೆ ಆ ರೀತಿಯ ಆದೇಶ ಹೊರಡಿಸುವ ಬಯಕೆ ಇದೆ. ಅಧಿಕಾರಿಗಳಿಗೆ ಒಂದು ಅವಕಾಶ ನೀಡುವ ಬಯಕೆಯೊಂದಿಗೆ ಅಂತಹ ಆದೇಶ ನೀಡುತ್ತಿಲ್ಲ’ ಎಂದು ಪೀಠ ಹೇಳಿತು.

ಅಹಮದಾಬಾದ್, ವಡೋದರಾ, ಸೂರತ್ ಮತ್ತು ರಾಜ್‌ಕೋಟ್‌ನ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಗ್ನಿಶಾಮಕ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗ್ನಿ ಸುರಕ್ಷತೆಯ ದೃಷ್ಟಿಯಿಂದ ಕೈಗೊಂಡ ಕ್ರಮಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ಸೂಚಿಸಿದೆ.

‘ಜೀವ ಹೋಗುವುದು ಅವರಿಗೆ ಬೇಕಾಗಿದೆ...’

ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದ ವಕೀಲರೊಬ್ಬರು, ಈಗ ನಡೆದಿರುವ ದುರದೃಷ್ಟಕರ ಘಟನೆಯ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಪೀಠಕ್ಕೆ ತಿಳಿಸಿದರು. ಘಟನೆಗೆ ಯಾರು ಹೊಣೆ ಎಂಬುದನ್ನು ಗುರುತಿಸಲು ರಾಜ್ಯ ಸರ್ಕಾರ ಮುಂದೆ ಬರಬೇಕಾಗುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಪೀಠವು, ‘ಅಂತಹ ತೀವ್ರವಾದ ಕ್ರಮಗಳನ್ನು ಕೈಗೊಳ್ಳುವವರು ಯಾರು? ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈಗ ನಮಗೆ ರಾಜ್ಯದ ಆಡಳಿತ ಯಂತ್ರದಲ್ಲಿ ನಂಬಿಕೆ ಇಲ್ಲ. ಈ ನ್ಯಾಯಾಲಯದ ಆದೇಶವೊಂದು ಬಂದು ನಾಲ್ಕು ವರ್ಷ ಆಗಿದ್ದರೂ, ಈಗ ನಡೆದಿರುವುದು ಆರನೆಯ ಘಟನೆ. ಜೀವ ಹೋಗುವುದು ಅವರಿಗೆ ಬೇಕಾಗಿದೆ, ನಂತರ ಅವರು ಆಡಳಿತ ಯಂತ್ರ ಸಕ್ರಿಯವಾಗುವಂತೆ ಮಾಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿತು.

ಅಗ್ನಿ ದುರಂತ: ಏಳು ಅಧಿಕಾರಿಗಳ ಅಮಾನತು

ರಾಜ್‌ಕೋಟ್‌: ರಾಜ್‌ಕೋಟ್‌ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಏಳು ಮಂದಿ ಅಧಿಕಾರಿಗಳ ಅಮಾನತಿಗೆ ಗುಜರಾತ್ ಸರ್ಕಾರ ಸೋಮವಾರ ಆದೇಶಿಸಿದೆ. ‘ಅಗತ್ಯ ಅನುಮತಿಗಳನ್ನು ಪಡೆಯದಿದ್ದರೂ ಗೇಮ್‌ ಜೋನ್‌ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟು ನಿರ್ಲಕ್ಷ್ಯ ತೋರಿದ್ದಕ್ಕಾಗಿ’ ಅಧಿಕಾರಿಗಳನ್ನು ಹೊಣೆ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ರಾಜ್‌ಕೋಟ್‌ ಮಹಾನಗರ ಪಾಲಿಕೆಯ ನಗರ ಯೋಜನಾ ಇಲಾಖೆಯ ಸಹಾಯಕ ಎಂಜಿನಿಯರ್ ಜೈದೀಪ್ ಚೌಧರಿ, ಪಾಲಿಕೆಯ ಸಹಾಯಕ ನಗರ ಯೋಜಕ ಗೌತಮ್ ಜೋಷಿ, ರಾಜ್‌ಕೋಟ್‌ ರಸ್ತೆ ಮತ್ತು ಕಟ್ಟಡಗಳ ಇಲಾಖೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಎಂ.ಆರ್. ಸುಮಾ ಮತ್ತು ಪಾರಸ್ ಕೋಥಿಯಾ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವಿ.ಆರ್. ಪಟೇಲ್ ಮತ್ತು ಎನ್‌.ಐ. ರಾಥೋಡ್, ಪಾಲಿಕೆಯ ಕಲಾವಾದ್ ರಸ್ತೆ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ರೋಹಿತ್ ವಿಗೋರಾ ಅವರನ್ನು ಅಮಾನನತು ಮಾಡಲಾಗಿದೆ.

ಟಿಆರ್‌‍ಪಿ ಗೇಮ್‌ ಜೋನ್ ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಪಡೆಯದೆ ಕಾರ್ಯ ನಿರ್ವಹಿಸುತ್ತಿದ್ದರೂ ವಿಗೋರಾ ಅವರು ಆ ಮನರಂಜನಾ ಕೇಂದ್ರದ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಬೇಜವಾಬ್ದಾರಿಯಿಂದ ವರ್ತಿಸಿದರು ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT