ಕೋಲ್ಕತ್ತ: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಟ್ರಕ್‌ಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಬುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು (ಅಪರ್ಣಾ ಬ್ಯಾಗ್) ಖಿರ್ಪೈ ಆಸ್ಪತ್ರೆಯಿಂದ ಮೇದಿನಿಪುರ ವೈದ್ಯಕೀಯ ಕಾಲೇಜಿಗೆ ಸಾಗಿಸುತ್ತಿದ್ದಾಗ ಕೇಶ್‌ಪುರ ಮೂಲಕ ಹಾದುಹೋಗುವ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ರೋಗಿಯ ಕುಟುಂಬ ಸದಸ್ಯರು ಮತ್ತು ಚಾಲಕ ಸೇರಿದಂತೆ ಎಂಟು ಜನರನ್ನು ಹೊತ್ತ ಆಂಬುಲೆನ್ಸ್ ಸಿಮೆಂಟ್ ತುಂಬಿದ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ರೋಗಿಯು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರನ್ನು ಅಪರ್ಣಾ ಅವರ ತಾಯಿ ಅನಿಮಾ ಮಲ್ಲಿಕ್, ತಂದೆ ಶ್ಯಾಮಪಾದ ಬ್ಯಾಗ್, ಚಿಕ್ಕಪ್ಪ ಶ್ಯಾಮಲ್ ಭುನಿಯಾ ಮತ್ತು ಚಿಕ್ಕಮ್ಮ ಚಂದನಾ ಭುನಿಯಾ ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಚಾಲಕರು ಮದ್ಯದ ಅಮಲಿನಲ್ಲಿದ್ದರೇ ಅಥವಾ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಅಪಘಾತ ಸಂಭವಿಸಿತೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.