ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad Landslide | ಸುಖದ ನಿದ್ದೆಯಿಂದ ದುಃಖದ ಮಡುವಿಗೆ...

ಪ್ರವಾಹಕ್ಕೆ ಸಿಕ್ಕು ಜಾರಿದ, ಕುಸಿದ ಮನೆ * ಬಯಲಾದ ಚೂರಲ್‌ಮಲ
Published : 30 ಜುಲೈ 2024, 23:23 IST
Last Updated : 30 ಜುಲೈ 2024, 23:23 IST
ಫಾಲೋ ಮಾಡಿ
Comments

ತಿರುವನಂತಪುರ: ಸುಖ ನಿದ್ರೆಯಲ್ಲಿದ್ದ ಕುಟುಂಬ ರಾತ್ರೋರಾತ್ರಿ ದುಃಖದ ಮಡುವಿಗೆ ಜಾರಿತ್ತು. ಭಾರಿ ಶಬ್ದಕ್ಕೆ ಎಚ್ಚೆತ್ತವರಿಗೆ ಕಂಡದ್ದು ಪ್ರಕೃತಿಯ ಮುನಿಸು. ನೋಡುತ್ತಿದ್ದಂತೆ ನುಗ್ಗಿ ಬಂದ ನೀರು ನಿದ್ರೆಗಷ್ಟೇ ತಣ್ಣೀರೆರಚಲಿಲ್ಲ. ಬದುಕಿನ ಭರವಸೆಗಳನ್ನೇ ಮುಳುಗಿಸಿತ್ತು.

ವಯನಾಡ್‌ ಜಿಲ್ಲೆಯಲ್ಲಿ ಭೂಕುಸಿತ, ಪ್ರವಾಹದ ಗಂಭೀರ ಪರಿಣಾಮಗಳಿಗೆ ಕನ್ನಡಿಯಾಗಿರುವ ಚೂರಲ್‌ಮಲ ಪಟ್ಟಣದ ತಂಕಚನ್‌ ಕುಟುಂಬದ ಸ್ಥಿತಿ ಇದು. ಇದು, ಈ ಒಂದು ಕುಟುಂಬದ ಸ್ಥಿತಿಯಷ್ಟೇ ಅಲ್ಲ. ಹಲವು ಕುಟುಂಬಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

‘ನಮ್ಮದು ಆರು ಜನರ ಕುಟುಂಬ. ರಾತ್ರಿ ಶಬ್ದವಾಯಿತು. ಗಾಬರಿಯಿಂದ ಎಚ್ಚೆತ್ತೆವು. 98 ವರ್ಷ ವಯಸ್ಸಿನ ಅತ್ತೆ ಮನೆಯಿಂದ ಹೊರಹೋಗಿದ್ದರು. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಮನೆ ಕುಸಿದಿತ್ತು’ ನೋವಿನಲ್ಲಿಯೇ ಅವಗಢ ನೆನಪಿಸಿ ಕೊಂಡವರು ತಂಕಚಾನ್. ಇವರು ಸೇಂಟ್‌ ಸೆಬಾಸ್ಟಿಯನ್‌ ಚರ್ಚ್‌ನ ಪಾದ್ರಿ.

ಭೂಕುಸಿತ, ಪ್ರವಾಹದ ಅರಿವಾಗುತ್ತಲೇ ಅನೇಕ ಕುಟುಂಬಗಳವರು ಎಲ್ಲವನ್ನೂ ಬಿಟ್ಟು ಕೂಡಲೇ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಹಾಗೇ ‍ಪಾರಾದ ಆ ಎಲ್ಲರ ಪಾಲಿಗೆ ಮಂಗಳವಾರದ ಮಧ್ಯರಾತ್ರಿ ಒಂದು ದುಃಸ್ವಪ್ನ.

ಇದೇ ಗ್ರಾಮದ ವಿಜಯನ್‌ ಅವರಿಗೆ ಮಾತುಗಳು ಬತ್ತಿದ್ದವು. ಎಲ್ಲ ಬೆಳವಣಿಗೆಗಳಿಗೆ ಅವರು ಮೂಕ ಪ್ರೇಕ್ಷಕರಾಗಿದ್ದರು. ‍ಪ್ರವಾಹದ ನೀರಿನಲ್ಲಿ ಅವರ ಕುಟುಂಬದ ಸದಸ್ಯರು ಕೊಚ್ಚಿಹೋಗಿದ್ದರು.

‘ನೀರು ಮನೆಯನ್ನು ಆವರಿಸಿದಂತೆ ತಾಯಿ, ತಂಗಿ ಕೈಹಿಡಿಯಲು ನಾನು ಯತ್ನಿಸಿದೆ. ಈ ಯತ್ನ ಫಲ ನೀಡಲಿಲ್ಲ. ನೀರು ಹರಿವಿನ ವೇಗ ಹೆಚ್ಚಿತ್ತು. ನಮ್ಮವರು ಕೊಚ್ಚಿ ಹೋಗುವುದನ್ನು ಮೌನವಾಗಿ ಗಮನಿಸುವ ನತದೃಷ್ಟನಾಗಿದ್ದೆ’ ಎಂದು ವಿಜಯನ್‌ ನೋವು ತೋಡಿಕೊಂಡರು.

ವೇದನೆಗಳ ನೆಲೆಯಾದ ಆಸ್ಪತ್ರೆ: ಭೂಕುಸಿತ, ಪ್ರವಾಹದಲ್ಲಿ ಸಿಕ್ಕು ಗಾಯಗೊಂಡವರನ್ನು ವಯನಾಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೀಗ ವೇದನೆಗಳಿಗೆ ನೆಲೆಯಾಗಿದೆ. ನಾಪತ್ತೆ ಆಗಿರುವ ತಮ್ಮವರಿಗಾಗಿ ಅರಸುತ್ತಾ ಕುಟುಂಬ ಸದಸ್ಯರ ಹುಡುಕಾಟ ಆಸ್ಪತ್ರೆಯಲ್ಲಿನ ಸಾಮಾನ್ಯ ದೃಶ್ಯವಾಗಿದೆ.

ಸೇಂಟ್‌ ಸೆಬಾಸ್ಟಿಯನ್‌ ಚರ್ಚ್‌ನಲ್ಲೇ ಪಾದ್ರಿ ಆಗಿರುವ ಫಾ। ಜಿಬಿನ್‌ ವಟುವಲತಿಲ್, ರಾತ್ರಿಯ ಚಿತ್ರಣವನ್ನು ವಿವರಿಸಿದ್ದು ಹೀಗೆ: ‘ಕತ್ತಲು ಆವರಿಸಿತ್ತು. ಕೇವಲ ಆಕ್ರಂದನ, ಕೂಗಾಟಗಳ ಧ್ವನಿ. ಜನರು ಕತ್ತಲಲ್ಲೇ ತಮ್ಮವರಿಗೆ ಅರಸುತ್ತಿದ್ದರು. ಹಲವರಿಗೆ ಕೂದಲೆಳೆಯಲ್ಲೇ ಪಾರಾದ ನೆಮ್ಮದಿಯೂ ಇತ್ತು’ ಎಂದರು.

ಅವರ ಪ್ರಕಾರ, ಈ ಭಾಗದಲ್ಲಿ ಎರಡು ದಿನದಿಂದ ಭಾರಿ ಮಳೆ ಇತ್ತು. ಹೆಚ್ಚಿನವರು ಸುರಕ್ಷಿತ ಎನ್ನಲಾದ ಸಂಬಂಧಿಕರ ಮನೆಗೆ ತೆರಳಿದ್ದರು. ‘ಚೂರಲ್‌ಮಲ ಸುರಕ್ಷಿತ, ಏನು ಆಗದು’ ಎಂದು ಭಾವಿಸಿದ್ದವರು ಇಲ್ಲಿಯೇ ಉಳಿದಿದ್ದರು ಎಂದು ಹೇಳಿದರು.

ಮುಖ್ಯಮಂತ್ರಿ ಸಲಹೆ: ಸಿ.ಎಂ ಪಿಣರಾಯಿ ವಿಜಯನ್ ಅವರು, ಜನರು ಆದಷ್ಟೂ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಸ್ಥಳೀಯ ಆಡಳಿತದ ಸಲಹೆ  ಆಲಿಸಬೇಕು. ಪ್ರಕೃತಿ ವಿಕೋಪದ ಕೇಂದ್ರ ಸ್ಥಳ ಮುಂಡಕ್ಕೈ ಗ್ರಾಮವಾಗಿದೆ ಎಂದೂ ತಿಳಿಸಿದ್ದಾರೆ.

‘ನೆರವಿಗೆ ಅಂಗಲಾಚುತ್ತಿರುವ ಜನರು..’

ವಯನಾಡ್‌: ‘ಮಲಗಿದ್ದೆವು. ಏಕಾಏಕಿ ದೊಡ್ಡ ಶಬ್ದ ಅಪ್ಪಳಿಸಿತು. ಬಂಡೆಗಳು ಮರಗಳು ಮನೆಯ ಮೇಲೆ ಬಿದ್ದವು. ಒಮ್ಮೆಗೆ ನೀರು ನುಗ್ಗಿತು. ಬಾಗಿಲು ಒಡೆದು ಹೋಯಿತು. ಯಾರೊ ಬಂದು ಕಾಪಾಡಿ ಆಸ್ಪತ್ರೆಗೆ. ಸೇರಿಸಿದ್ದಾರೆ. ನನ್ನ ಹೆಂಡತಿ ಎಲ್ಲಿದ್ದಾಳೆ ಗೊತ್ತಿಲ್ಲ. ಅವಳನ್ನು ರಕ್ಷಿಸಿ’. ಇದು ಆಸ್ಪತ್ರೆಗೆ ದಾಖಲಾಗಿರುವ ವೃದ್ಧರೊಬ್ಬರ ಕೋರಿಕೆ. ‘ನಮ್ಮನ್ನು ರಕ್ಷಿಸಿ. ಮನೆ ಕಳೆದುಕೊಂಡಿದ್ದೇವೆ. ನೌಶೀನ್‌ ಬದುಕಿದ್ದಾಳೋ ಇಲ್ಲವೊ ಗೊತ್ತಿಲ್ಲ. ಆಕೆ ಕೆಸರಿನಲ್ಲಿ ಸಿಲುಕಿದ್ದಾಳೆ. ನಮ್ಮ ಮನೆ ಸಿಟಿಯಲ್ಲಿಯೇ ಇದೆ’ ಎಂದು ಮಹಿಳೆಯೊಬ್ಬರ ನೋವು.  ಪ್ರಕೃತಿ ವಿಕೋಪಕ್ಕೆ ಗುರಿಯಾಗಿರುವ ಗ್ರಾಮಗಳ ನಿವಾಸಿಗಳ ಬಂಧುಗಳ ಭೀತಿ ಉದ್ವೇಗದ ಮಾತುಗಳು ಈಗ ಕೇರಳದಾದ್ಯಂತ ಮಾರ್ದನಿಸುತ್ತಿದೆ. ಭೂಕುಸಿತದ ಹಿಂದೆಯೇ ಸಹಾಯವಾಣಿಯನ್ನು ಆರಂಭಿಸಿರುವ ಕೇರಳದ ಸುದ್ದಿ ವಾಹಿನಿಗಳು ಇಂತಹ ವೇದನೆಯ ಮಾತುಗಳಿಗೆ ಕಿವಿಯಾಗುತ್ತಿವೆ. ಸುದ್ದಿ ವಾಹಿನಿಗಳಿಗೆ ನಿರಂತರವಾಗಿ ಬರುತ್ತಿರುವ ಕರೆಗಳು ವಾಸ್ತವದ ಚಿತ್ರಣವನ್ನು ತೆರೆದಿಡುತ್ತಿವೆ. ಮೇಪ್ಪಾಡಿ ಚೂರಲ್‌ಮಲ ಹಾಗೂ ಮುಂಡಕ್ಕೈ ಜನರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಬಂಡೆ ಹಿಡಿದು ಬದುಕಿಗಾಗಿ ಹೋರಾಟ

ಭೂಕುಸಿತದ ಪರಿಣಾಮ ಉಂಟಾದ ಪ್ರವಾಹದಲ್ಲಿ ಕೊಚ್ಚಿಹೋಗದಂತೆ ವ್ಯಕ್ತಿಯೊಬ್ಬರು ಬಂಡೆಯೊಂದನ್ನು ಗಟ್ಟಿಯಾಗಿ ಹಿಡಿದು ಹೋರಾಟ ನಡೆಸಿದರು.  ಆಪತ್ತಿನಿಂದ ಪಾರಾಗಲು ವ್ಯಕ್ತಿಯೊಬ್ಬರು ಇನ್ನಿಲ್ಲದ ಹೋರಾಟ ನಡೆಸುವುದನ್ನು ಕಂಡರೂ ಪ್ರವಾಹ ಹಾಗೂ ಭೂಕುಸಿತದ ಕಾರಣದಿಂದ ನಿವಾಸಿಗಳು ಅಸಹಾಯಕರಾಗಿ ವೀಕ್ಷಿಸಬೇಕಾಗಿಯಿತು. ಮುಂಡಕ್ಕೈ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯ ಜೀವನ್ಮರಣ ಹೋರಾಟವನ್ನು ಗ್ರಾಮಸ್ಥರೊಬ್ಬರು ಚಿತ್ರಿಸಿದ್ದು ಸ್ಥಳೀಯ ಟಿ.ವಿ ಚಾನಲ್‌ನಲ್ಲಿ ಅದು ಬಿತ್ತರವಾಗಿದೆ. ವ್ಯಕ್ತಿಯು ಗ್ರಾಮದ ಶಾಲೆಯ ಬಳಿ ಬಂಡೆಯನ್ನು ರಕ್ಷಣೆಗಾಗಿ ಹಿಡಿದು ಅಂಗಲಾಚುವುದು ಬೆಳಿಗ್ಗೆ 7.30ರ ವೇಳೆಗೆ ಗೊತ್ತಾಗಿದೆ. ಕೊಚ್ಚಿಹೋಗದಂತೆ ಅವರು ಪ್ರಯಾಸ ಪಡುತ್ತಿದ್ದರು ಎಂದು ಈ ದೃಶ್ಯವನ್ನು ಮೊಬೈಲ್‌ ಫೋನ್‌ನಲ್ಲಿ ಚಿತ್ರಿಸಿದ್ದ ಬ್ಲಾಕ್‌ ಪಂಚಾಯತ್‌ ಸದಸ್ಯ ರಾಘವನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT