ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಹಸಿರು ನಿಶಾನೆ

ತನಿಖೆ ರದ್ದುಕೋರಿದ್ದ ಅರ್ಜಿ ವಜಾ
Published 19 ಅಕ್ಟೋಬರ್ 2023, 6:04 IST
Last Updated 19 ಅಕ್ಟೋಬರ್ 2023, 6:04 IST
ಅಕ್ಷರ ಗಾತ್ರ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್‌, ತನಿಖೆ ಮುಂದುವರಿಸಲು ಅನುಮತಿ ನೀಡಿದೆ. 

ಎಫ್‌ಐಆರ್‌ ರದ್ದು ಕೋರಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿದೆ. ವಿಚಾರಣೆ ಹಂತದಲ್ಲಿ ಸಿಬಿಐ ತನಿಖೆಯ ಮುಂದುವರಿಕೆಗೆ ನೀಡಲಾಗಿದ್ದ ಮಧ್ಯಂತರ ತಡೆ ಆದೇಶವನ್ನು ತೆರವುಗೊಳಿಸಿದೆ.

‘ಈ ತೀರ್ಪು ಸ್ವೀಕರಿಸಿದ ಮೂರು ತಿಂಗಳ ಒಳಗೆ ಸಿಬಿಐ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು. ತನಿಖಾಧಿಕಾರಿ ದೋಷಾರೋಪ ಪಟ್ಟಿ ಸಲ್ಲಿಸಿದರೆ ಆರೋಪ ಮುಕ್ತಿ ಕೋರಿ ಅಥವಾ ಆರೋಪ ಪಟ್ಟಿಯನ್ನು ವಜಾಗೊಳಿಸುವಂತೆ ಕೋರುವ ಸ್ವಾತಂತ್ರ್ಯ ಡಿ.ಕೆ.ಶಿವಕುಮಾರ್ ಅವರಿಗೆ ಇರಲಿದೆ’ ಎಂದು ನ್ಯಾಯಪೀಠ ಹೇಳಿದೆ.

‘ಅರ್ಜಿದಾರರು ಈಗಾಗಲೇ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಿ ಸಾಕಷ್ಟು ವಿವರಣೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಸಂಪುಟಗಟ್ಟಲೆ ದಾಖಲೆಗಳೆಲ್ಲಾ ತನಿಖಾಧಿಕಾರಿಯ ಪರಿಶೀಲನೆಯಲ್ಲಿವೆ. ಸಿಬಿಐ ತನ್ನ ತನಿಖೆಯನ್ನು ಬಹುತೇಕ ಸಮಾಪ್ತಿಯ ಹಂತಕ್ಕೆ ತಂದು ನಿಲ್ಲಿಸಿದೆ. ಹೀಗಾಗಿ, ಅರ್ಜಿದಾರರು ಎಫ್‌ಐಆರ್‌ ರದ್ದುಪಡಿಸುವಂತೆ ಕೋರುವಲ್ಲಿ ವಿಳಂಬವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ತನಿಖೆಯ ಈ ಹಂತದಲ್ಲಿ, ನ್ಯಾಯಾಲಯ ಎಫ್ಐಆರ್‌ ರದ್ದು ಕೋರಿದ ಮನವಿಯನ್ನು ಪುರಸ್ಕರಿಸಲು ಆಗದು. ಅಂತಿಮ ವರದಿ ಸಲ್ಲಿಸುವ ಮೊದಲೇ ಇಂತಹ ಮನವಿಯನ್ನು ಮಾನ್ಯ ಮಾಡಿದರೆ ಅದು ಮತ್ತೊಂದು ಮಿನಿ ವಿಚಾರಣೆಯೇ ಆಗಿಬಿಡುತ್ತದೆ. ಒಂದು ವೇಳೆ ಸಿಬಿಐ ತನಿಖೆ ವಿಳಂಬವಾಗುತ್ತಿದೆ ಎನ್ನಿಸಿದರೆ ಅರ್ಜಿದಾರರು ಅದಕ್ಕೆ ಕಾಲಮಿತಿ ಕೋರಿಕೆ ಸಲ್ಲಿಸಬಹುದು‘ ಎಂದು ತಿಳಿಸಿದೆ.

ಪ್ರಕರಣವೇನು?: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಕಲಂಗಳ ಅಡಿಯಲ್ಲಿ 2020ರ ಅ. 3ರಂದು ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

‘ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು’ ಎಂದು ಕೋರಿ‌ ಶಿವಕುಮಾರ್, 2022ರ ಜುಲೈನಲ್ಲಿ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, 2023ರ ಫೆಬ್ರುವರಿ 10ರಂದು ತನಿಖೆಗೆ ಮಧ್ಯಂತರ ತಡೆ ನೀಡಿತ್ತು.‌ ಈ ತಡೆ ಆದೇಶವನ್ನು ಈ ತನಕ ವಿಸ್ತರಿಸಿಕೊಂಡು ಬರಲಾಗಿತ್ತು. ವಿಚಾರಣೆಯನ್ನು 2023ರ ಜುಲೈ 31ರಂದು ಪೂರ್ಣಗೊಳಿಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು. ಸಿಬಿಐ ಪರ ಪಿ. ಪ್ರಸನ್ನಕುಮಾರ್‌ ವಾದ ಮಂಡಿಸಿದ್ದರು.

ಮತ್ತೊಂದು ಅರ್ಜಿ: ‘ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು‘ ಎಂದು ಕೋರಿ‌‌ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ನಾಲ್ಕು ತಿಂಗಳ ಹಿಂದಷ್ಟೇ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಈ ಆದೇಶಕ್ಕೆ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠವು 2023ರ ಜೂನ್‌ 12ರಂದು ಮಧ್ಯಂತರ ತಡೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT