ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಕೆದಾಟು ಯೋಜನೆಗೆ ಕೇಂದ್ರದಿಂದ ಎಚ್.ಡಿ.ಕೆ. ಅನುಮತಿ ಕೊಡಿಸಲಿ: ಸಿದ್ದರಾಮಯ್ಯ

Published : 29 ಜುಲೈ 2024, 10:09 IST
Last Updated : 29 ಜುಲೈ 2024, 10:09 IST
ಫಾಲೋ ಮಾಡಿ
Comments

ಮಂಡ್ಯ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಯೋಜನೆಯಡಿ ಅಣೆಕಟ್ಟೆ ನಿರ್ಮಿಸಲು ಕೇಂದ್ರ ಸಚಿವ ಹಾಗೂ ಮಂಡ್ಯ ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟೆ ನಿರ್ಮಾಣವಾದರೆ ಕರ್ನಾಟಕಕ್ಕಿಂತ ಹೆಚ್ಚು ತಮಿಳುನಾಡಿಗೆ ಉಪಯೋಗವಾಗಲಿದೆ. ಈ ಅಣೆಕಟ್ಟೆಯಿಂದ 65 ಟಿಎಂಸಿ ನೀರು ಸಂಗ್ರಹ ಮಾಡಬಹುದಾಗಿದೆ. ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ, ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗುತ್ತದೆ. ಮಳೆ ಕಡಿಮೆಯಾದ ಸಂಕಷ್ಟದ ವರ್ಷದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಾಗಲಿದೆ ಎಂದರು.

ಸರ್ಕಾರ ದುರ್ಬಲಗೊಳಿಸಲು ವಿಪಕ್ಷಗಳದ ಸುಳ್ಳು ಆರೋಪ

ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುವ ಬಿಜೆಪಿ-ಜೆಡಿಎಸ್ ಪಕ್ಷದ ನಾಯಕರು ರಾಜ್ಯದ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಒಟ್ಟು 10 ದಿನಗಳ ವಿಧಾನ ಮಂಡಲ ಅಧಿವೇಶನದಲ್ಲಿ ಸಂಪೂರ್ಣ 8 ದಿನ ಅಧಿವೇಶನವನ್ನು ಹಾಳು ಮಾಡುವುದಕ್ಕಾಗಿಯೇ ಬಳಕೆ ಮಾಡಿಕೊಂಡರು. ಇದರಿಂದ ರಾಜ್ಯದ ನೆರೆ ಸಮಸ್ಯೆ, ರೈತರ ಸಮಸ್ಯೆ, ಕೃಷ್ಣ ಮೇಲ್ದಂಡೆ ಯೋಜನೆ ಮಂತಾದವುಗಳ ಬಗ್ಗೆ ಧ್ವನಿಯೆತ್ತದೇ ತಪ್ಪಿಸಿಕೊಂಡರು‌. ಸತ್ಯ ಮತ್ತು ಸುಳ್ಳುಗಳ ನಡುವಿನ ವ್ಯತ್ಯಾಸವನ್ನು ರಾಜ್ಯದ ಜನರು ಅರ್ಥಮಾಡಿಕೊಳ್ಳಬೇಕು ಎಂದರು.

ಬಜೆಟ್ ಅನ್ಯಾಯದ ಬಗ್ಗೆ ಮಾತಾಡುತ್ತಿಲ್ಲ

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ನಯಾಪೈಸೆ ಅನುದಾನ ಬಂದಿಲ್ಲ, ಇದರ ಬಗ್ಗೆ ಬಿಜೆಪಿ-ಜೆಡಿಎಸ್ ಸಂಸದರು ಯಾವತ್ತು ಧ್ವನಿಯೆತ್ತಿಲ್ಲ. ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಎರಡು ಪಕ್ಷಗಳು ಪ್ರತಿಭಟನೆ ಮಾಡುವ ಮೂಲಕ ರಾಜ್ಯದ ಜನರನ್ನು ದಾರಿತಪ್ಪಿಸಲು ಹೊರಟಿದ್ದಾರೆ. ಆದರೆ ರಾಜ್ಯದ ಜನತೆ ಪ್ರಬುದ್ಧರಾಗಿದ್ದು ಇವರ ನಾಟಕಕ್ಕೆ ಮರಳಾಗುವುದಿಲ್ಲ ಎಂದರು.

ಬಿಜೆಪಿ-ಜೆಡಿಎಸ್ ದಲಿತ ವಿರೋಧಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಸ್.ಇ.ಪಿ, ಟಿ.ಎಸ್.ಪಿ. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಇದುವರೆಗೆ ದಲಿತರಿಗೆ ಕಾಂಗ್ರೆಸ್ ಪಕ್ಷವು  ಮಾಡಿರುವಷ್ಟು ಅನುಕೂಲಗಳನ್ನು ಬಿಜೆಪಿ-ಜೆಡಿಎಸ್ ಪಕ್ಷಗಳು ಮಾಡಿಲ್ಲ, ಕರ್ನಾಟಕದಲ್ಲಿ ಮಾತ್ರ ಎಸ್.ಇ.ಪಿ ಟಿ.ಎಸ್.ಪಿ ಜಾರಿ ಇದೆ. ಬಿಜೆಪಿ ಅಧಿಕಾರಲ್ಲಿರುವ ಯಾವ ರಾಜ್ಯದಲ್ಲಾದರೂ ಈ ಯೋಜನೆ ಜಾರಿ ಇದೆಯೇ ? ಎಂದು ಪ್ರಶ್ನಿಸಿದರು.

ವಿರೋಧ ಪಕ್ಷಗಳು ಗಾಂಧಿ, ಅಂಬೇಡ್ಕರ್, ಬಸವಣ್ಣ ಅವರ ಸಿದ್ಧಾಂತಕ್ಕೆ ವಿರುದ್ದವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದರು.

ವೇದಿಕೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎನ್.ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ಎಚ್.ಎ. ವೆಂಕಟೇಶ್, ಮಂಡ್ಯ ಜಿಲ್ಲೆಯ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ರವಿಕುಮಾರ್ ಗಣಿಗ, ಕೆ.ಎಂ.ಉದಯ್‌, ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಹಾಗೂ ಜಿಲ್ಲಾಧಿಕಾರಿ ಕುಮಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT