ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಸ್‌ಐ ನೇಮಕಾತಿ ಹಗರಣ: ಆರೋಪಿ ರುದ್ರಗೌಡ ಆಕ್ಷೇಪ ತಳ್ಳಿ ಹಾಕಿದ ಪ್ರಾಸಿಕ್ಯೂಷನ್‌

Published : 30 ಆಗಸ್ಟ್ 2023, 16:12 IST
Last Updated : 30 ಆಗಸ್ಟ್ 2023, 16:12 IST
ಫಾಲೋ ಮಾಡಿ
Comments

ಬೆಂಗಳೂರು: ‘ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಒಂದೇ ಆರೋಪದಡಿ ವಿವಿಧೆಡೆ ಪ್ರಕರಣ ದಾಖಲಿಸಲಾಗಿದೆ‘ ಎಂದು ಪ್ರಮುಖ ಆರೋಪಿ ರುದ್ರಗೌಡ ಡಿ.ಪಾಟೀಲ ಆಕ್ಷೇಪಿಸಿರುವುದನ್ನು ರಾಜ್ಯ ಪ್ರಾಸಿಕ್ಯೂಷನ್‌ ತಳ್ಳಿಹಾಕಿದೆ.

ಈ ಸಂಬಂಧ ರುದ್ರಗೌಡ ಪಾಟೀಲ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ಕಲಬುರಗಿ ಪೀಠದಲ್ಲಿನ ನ್ಯಾಯಮೂರ್ತಿ ವೆಂಕಟೇಶ್ ಟಿ.ನಾಯಕ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಸ್‌ಪಿಪಿ–1) ಬಿ.ಎ.ಬೆಳ್ಳಿಯಪ್ಪ ವಾದ ಮಂಡಿಸಿ, ‘ಪರೀಕ್ಷೆಗಳು ಎಲ್ಲಾ ಕಡೆ ಒಂದೇ ದಿನ ನಡೆದಿವೆ. ಹೀಗಾಗಿ, ತನಿಖೆ ವೇಳೆ ಎಲ್ಲೆಲ್ಲಿ ಅಕ್ರಮ ನಡೆದಿದೆ ಎಂಬುದು ದೃಢಪಟ್ಟಿದೆಯೋ ಅಲ್ಲೆಲ್ಲಾ ಎಫ್‌ಐಆರ್‌ ದಾಖಲಾಗಿದೆ. ರುದ್ರಗೌಡ 3ನೇ ಸಂಖ್ಯೆಯ ಆರೋಪಿಯಾದರೂ ಇಡೀ ಹಗರಣದ ಪ್ರಮುಖ ಸೂತ್ರಧಾರ ಎನಿಸಿದ್ದಾರೆ. ಆದ ಕಾರಣಕ್ಕಾಗಿಯೇ ವಿವಿಧೆಡೆ ಪ್ರಕರಣ ದಾಖಲಿಸಲಾಗಿದೆ‘ ಎಂದು ಪ್ರಾಸಿಕ್ಯೂಷನ್‌ ನಡೆಯನ್ನು ಬಲವಾಗಿ ಸಮರ್ಥಿಸಿದರು.

’ಎಫ್‌ಐಆರ್ ದಾಖಲಿಸುವ ಮುನ್ನವೇ ತನಿಖೆ ನಡೆಸಲಾಗಿದೆ‘ ಎಂಬ ಅರ್ಜಿದಾರರ ಮತ್ತೊಂದು ಆಕ್ಷೇಪಣೆಯನ್ನೂ ತಳ್ಳಿ ಹಾಕಿದ ಬೆಳ್ಳಿಯಪ್ಪ, ‘ಆ ರೀತಿ ಯಾವುದೇ ತನಿಖೆ ನಡೆಸಲಾಗಿಲ್ಲ. ಪ್ರಕರಣ ದಾಖಲಿಸಿಕೊಂಡ ಬಳಿಕವೇ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಅಂತೆಯೇ, ಒಟ್ಟು ಹನ್ನೊಂದು ಕೇಸುಗಳಲ್ಲಿ ಏಳು ಪ್ರಕರಣಗಳನ್ನು ಮ್ಯಾಜಿಸ್ಟ್ರೇಟ್‌ ವಿಚಾರಣಾ ಪರಿಧಿಯಿಂದ ವಿಶೇಷ ಕೋರ್ಟ್‌ಗೆ ವರ್ಗಾಯಿಸಿ ವಿಶೇಷ ಕೋರ್ಟ್‌ನಲ್ಲಿಯೂ ಇರುವ ಪ್ರಕರಣಗಳ ಜೊತೆಗೆ ಜಂಟಿಯಾಗಿ ವಿಚಾರಣೆ ಮುಂದುವರಿಸುವುದರಲ್ಲಿ ಅಭ್ಯಂತರವಿಲ್ಲ‘ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT