ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics 2024: ಮಳೆ ಮಧ್ಯೆ ಒಲಿಂಪಿಕ್ಸ್ ಹೊನಲು

Published 26 ಜುಲೈ 2024, 19:23 IST
Last Updated 26 ಜುಲೈ 2024, 19:23 IST
ಅಕ್ಷರ ಗಾತ್ರ

ಪ್ಯಾರಿಸ್‌ (ಎಎಫ್‌ಪಿ): ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಂಗಣದಿಂದ ಹೊರಗೆ ಉದ್ಘಾಟನೆ ಸಮಾರಂಭ ಆಯೋಜಿಸಿರುವ ಹೆಗ್ಗಳಿಕೆಗೆ ಪ್ಯಾರಿಸ್ ಪಾತ್ರವಾಗಿದೆ. ಆದರೆ ಶುಕ್ರವಾರ ಮುಸ್ಸಂಜೆ ಮಳೆ ಶುರುವಾಯಿತು. 

100 ವರ್ಷಗಳ ನಂತರ ಒಲಿಂಪಿಕ್ಸ್‌ ಆತಿಥ್ಯ ವಹಿಸಿರುವ ಪ್ಯಾರಿಸ್‌ಗೆ ದೇಶ, ವಿದೇಶಗಳ ಸಾವಿರಾರು ಜನ ಕ್ರೀಡಾ ಪ್ರೇಮಿಗಳು ಬಂದಿಳಿದಿದ್ದಾರೆ. ಅಮೆರಿಕದ ರ‍್ಯಾಪ್‌ ಕಲಾವಿದ ಸ್ನೂಪ್ ಡಾಗ್ ಅವರು ಪ್ಯಾರಿಸ್‌ಗೆ ಬಂದ ಕ್ರೀಡಾ ಜ್ಯೋತಿಯನ್ನು ಉದ್ಘಾಟನೆ ಸ್ಥಳಕ್ಕೆ ತೆಗೆದುಕೊಂಡು ಹೋಗುವ ಗೌರವ ‍ಪಡೆದರು. ಅವರು ಟಾರ್ಚ್‌ ಹಿಡಿದು ನರ್ತಿಸುತ್ತ ಸಂಭ್ರಮದಿಂದ ಸಾಗಿದರು. ನೂರಾರು ಜನರು ರೇನ್‌ ಕೋಟ್ ಧರಿಸಿ, ಛತ್ರಿ ಹಿಡಿದುಕೊಂಡು ಕಾರ್ಯಕ್ರಮದ ಆರಂಭಕ್ಕೆ ಕಾದುಕುಳಿತಿದ್ದರು.  ಸಂಗೀತ, ನೃತ್ಯ ಕಲಾವಿದರು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದ್ದರು. ಬೇರೆ ಬೇರೆ ದೇಶಗಳ ತಂಡಗಳು ದೋಣಿ ವಿಹಾರ ಮಾಡುತ್ತ ಉದ್ಘಾಟನೆ ಸ್ಥಳದತ್ತ ಸಾಗಿದವು. 

ಆದರೆ ಸಮಾರಂಭಕ್ಕೆ ಸಾಕ್ಷಿಯಾಗಲು ಬಂದಿದ್ದ ಪ್ರೇಕ್ಷಕರು ಟಿಕೆಟಿಂಗ್
ಅವ್ಯವಸ್ಥೆಯಿಂದಾಗಿ ಉದ್ದನೆಯ ಸರದಿ ಸಾಲುಗಳಲ್ಲಿ ನಿಲ್ಲಬೇಕಾಯಿತು. ಹಲವು ಗೇಟುಗಳನ್ನು ಒಂದು ಗಂಟೆ ತಡವಾಗಿ ತೆರೆಯಲಾಯಿತು. ಅಲ್ಲಿದ್ದ ಸಿಬ್ಬಂದಿಗೆ ಟಿಕೆಟ್‌ಗಳ ತಪಾಸಣೆಗೆ ಬಳಸುವ
ಸ್ಕ್ಯಾನರ್‌ಗಳನ್ನು ತಡವಾಗಿ ನೀಡಿದ್ದು ಈ ಅವ್ಯವಸ್ಥೆಗೆ ಕಾರಣವಾಯಿತು.

‘ಪೊಲೀಸ್‌ ವ್ಯವಸ್ಥೆ ಚೆನ್ನಾಗಿದ್ದು, ಅವರು ಸಹಕರಿಸಿದರು. ಆದರೆ ವ್ಯವಸ್ಥೆ ಸರಿಯಾಗಿಲ್ಲದೇ ತೊಂದರೆಯಾಯಿತು’ ಎಂದು ಜರ್ಮನಿಯ ಚಿತ್ರ ನಿರ್ಮಾಪಕ, 48 ವರ್ಷ ವಯಸ್ಸಿನ ಮೈಕೆಲ್‌ ಒಹೊವೆನ್ ಹೇಳಿದರು. ಪತ್ನಿ ಜೊತೆಗೆ ಬಂದಿದ್ದ ಅವರು ತಲಾ ₹83,700 (2,700 ಯೂರೊ) ನೀಡಿ ಎರಡು ಟಿಕೆಟ್‌ಗಳನ್ನು ಖರೀದಿಸಿದ್ದರು. 

ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಅವರಿಗೆ ಪ್ರಥಮ ಚಿಕಿತ್ಸೆ ನೀಡಬೇಕಾಯಿತು.

‘ನಾನು ಟಿಕೆಟ್‌ಗಾಗಿ ₹1,45,000 ನೀಡಿದ್ದೆ. ನೇರವಾಗಿ ಹೇಳಬೇಕಾದರೆ ಇದು ನಾಚಿಕೆಗೇಡು’ ಎಂದು ಪ್ಯಾರಿಸ್‌ ನಿವಾಸಿ, 57 ವರ್ಷ ವಯಸ್ಸಿನ ಫ್ಯಾಬಿಯನ್ ಗುಯೆಜ್‌ ಹೇಳಿದರು.

ಗೇಟುಗಳನ್ನು ಉದ್ಘಾಟನಾ ಸಮಾರಂಭಕ್ಕೆ ಮುನ್ನ ಸಂಜೆ 5.30ಕ್ಕೆ ತೆರೆದಾಗ ಭಾರಿ ಮಳೆ ಶುರುವಾಯಿತು.

ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ ಸ್ಪೇನ್ ಕ್ರೀಡಾಪಟುಗಳು ತಂಡ

ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ ಸ್ಪೇನ್ ಕ್ರೀಡಾಪಟುಗಳು ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT