ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೂಕ ನಿರ್ವಹಣೆ ಅಥ್ಲೀಟ್‌, ಕೋಚ್ ಜವಾಬ್ದಾರಿ: ಐಒಎ ಅಧ್ಯಕ್ಷೆ ಪಿ.ಟಿ. ಉಷಾ

Published : 12 ಆಗಸ್ಟ್ 2024, 2:53 IST
Last Updated : 12 ಆಗಸ್ಟ್ 2024, 2:53 IST
ಫಾಲೋ ಮಾಡಿ
Comments

ನವದೆಹಲಿ: ಕುಸ್ತಿ, ವೇಟ್ ಲಿಫ್ಟಿಂಗ್, ಬಾಕ್ಸಿಂಗ್ ಮತ್ತು ಜೂಡೊ ಕ್ರೀಡೆಗಳಿಗೆ ಸಂಬಂಧಿಸಿದಂತೆ ದೇಹದ ತೂಕ ನಿರ್ವಹಣೆಯು ಆಯಾ ಅಥ್ಲೀಟ್ ಮತ್ತು ಅವರ ಕೋಚ್‌ ಜವಾಬ್ದಾರಿಯಾಗಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ(ಐಒಎ) ಅಧ್ಯಕ್ಷೆ ಡಾ. ಪಿ.ಟಿ ಉಷಾ ಸ್ಪಷ್ಟಪಡಿಸಿದ್ದಾರೆ. ಐಒಎ ನೇಮಕ ಮಾಡಿರುವ ಮುಖ್ಯ ವೈದ್ಯಾಧಿಕಾರಿ ಇದಕ್ಕೆ ಜವಾಬ್ದಾರರಲ್ಲ ಎಂದೂ ಅವರು ಹೇಳಿದ್ದಾರೆ.

ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಂಡಿರುವ ಭಾರತದ ಪ್ರತಿಯೊಬ್ಬ ಅಥ್ಲೀಟ್‌ಗೂ ಪ್ರತ್ಯೇಕ ಸಹಾಯಕ ಸಿಬ್ಬಂದಿ ಇದ್ದಾರೆ. ಹಲವು ವರ್ಷಗಳಿಂದ ಅವರ ಜೊತೆ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ ಎಂದು ಉಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಐಒಎ ವೈದ್ಯಕೀಯ ತಂಡವನ್ನು ನೇಮಕ ಮಾಡಿದೆ. ಅಥ್ಲೀಟ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಮತ್ತು ಸ್ಫರ್ಧೆಯ ನಂತರ ಅಥ್ಲೀಟ್‌ಗಳ ಚೇತರಿಕೆ ಮತ್ತು ಗಾಯಗಳ ನಿರ್ವಹಣೆಗೆ ಆ ತಂಡ ನೆರವಾಗುತ್ತದೆ. ತಮ್ಮ ವೈಯಕ್ತಿಕ ನ್ಯೂಟ್ರಿಶಿಯನಿಸ್ಟ್ ಮತ್ತು ಪಿಸಿಯೊಥೆರಪಿಸ್ಟ್ ಇಲ್ಲದ ಅಥ್ಲೀಟ್‌ಗಳಿಗೂ ನೆರವಾಗುವಂತೆ ಈ ವೈದ್ಯಕೀಯ ತಂಡವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ವಿನೇಶ್‌ ಫೋಗಟ್, ಫೈನಲ್ (ಆಗಸ್ಟ್‌ 7) ದಿನ ಬೆಳಿಗ್ಗೆ ತೂಕ ನೋಡುವ ವೇಳೆ ನಿಗದಿ (50ಕೆ.ಜಿ)ಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಸ್ಪರ್ಧೆಯಿಂದ ಅನರ್ಹಗೊಂಡಿದ್ದರು.

ಈ ಘಟನೆ ಬಳಿಕ ಭಾರತದ ವೈದ್ಯಕೀಯ ತಂಡದ ವಿರುದ್ಧ, ಅದರಲ್ಲೂ ಡಾ. ಪರ್ಧಿವಾಲಾ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಸ್ವೀಕಾರಾರ್ಹವಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ರೀಡಾ ನ್ಯಾಯಮಂಡಳಿಯತ್ತ ಚಿತ್ತ

ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ವಿನೇಶ್‌ ಫೋಗಟ್, ಫೈನಲ್‌ನಲ್ಲಿ ಅನರ್ಹಗೊಂಡ ಹಿನ್ನೆಲೆ ತಮಗೆ ಬೆಳ್ಳಿ ಪದಕ ನೀಡುವಂತೆ ಕ್ರೀಡಾ ನ್ಯಾಯಮಂಡಳಿ (ಸಿಎಎಸ್‌) ಮೊರೆ ಹೋಗಿದ್ದಾರೆ. ನ್ಯಾಯಮಂಡಳಿ ನಿರ್ಧಾರಕ್ಕೆ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಈ ಮಧ್ಯೆ ವಿಶ್ವ ಕುಸ್ತಿ ಆಡಳಿತ ನಿರ್ವಹಿಸುವ ಯುನೈಟೆಡ್‌ ರೆಸ್ಲಿಂಗ್‌ ಫೆಡರೇಷನ್‌ (ಯುಡಬ್ಲ್ಯುಡಬ್ಲ್ಯು) ಅಧ್ಯಕ್ಷ ನೆನಾದ್‌ ಲಾಲೊವಿಕ್ ಅವರು ದೇಹತೂಕ ವಿವಾದಕ್ಕೆ ಸಂಬಂಧಿಸಿ ಮಾತನಾಡಿದ್ದು, ವಿನೇಶ್ ಬಗ್ಗೆ ಅನುಕಂಪವನ್ನೂ ವ್ಯಕ್ತಪಡಿಸಿದ್ದಾರೆ.

ಆದರೆ ಫಲಿತಾಂಶ ಬದಲಾಗುವ ಸಾಧ್ಯತೆ ಕಡಿಮೆ. ಏನು ನಿಯಮಗಳಿವೆಯೊ ಅದನ್ನಷ್ಟೇ ಯುಡಬ್ಲ್ಯುಡಬ್ಲ್ಯು ಪಾಲಿಸುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT