ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ತೆರಳುವ ಮುನ್ನ ತಿಳಿಯಬೇಕಾದ 10 ಮಾಹಿತಿ

Last Updated 5 ಜನವರಿ 2021, 15:03 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾಗೆ ಕೊನೆಗೂ ಲಸಿಕೆ ಸಿದ್ಧವಾಗಿದೆ. ದೇಶದಾದ್ಯಂತ 130 ಕೋಟಿ ಜನರಿಗೆ ಲಸಿಕೆ ತಲುಪಿಸುವ ಸವಾಲು ಸದ್ಯ ಸರ್ಕಾರದ ಮುಂದಿದೆ. ಹಾಗಾಗಿ, ಕೋಟಿ ಕೋಟಿ ಜನರಿಗೆ ಲಸಿಕೆ ನೀಡುವ ಬೃಹತ್ ಲಸಿಕೆ ಅಭಿಯಾನವನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆಗಾಗಿ ಕೋವಿನ್ ಅಪ್ಲಿಕೇಶನ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಈ ಕೋವಿನ್ ಅಪ್ಲಿಕೇಶನ್‌ನಲ್ಲಿ ಆಧಾರ್ ದೃಢೀಕರಣ, 12 ಭಾಷೆಗಳಲ್ಲಿ ಲಸಿಕೆ ದೃಢೀಕರಣ ಎಸ್‌ಎಂಎಸ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳಿವೆ.

ಆಕ್ಸ್‌ಫರ್ಡ್–ಆಸ್ಟ್ರಾಜೆನಿಕಾದ ಕೋವಿಶೀಲ್ಡ್ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಗೆ ಭಾರತದ ಔಷಧ ನಿಯಂತ್ರಣಾಲಯವು ಅನುಮೋದನೆ ನೀಡಿದ್ದು, 10 ದಿನಗಳಲ್ಲಿ ಹಂಚಿಕೆಗೆ ಸಿದ್ಧವಾಗಿದ್ದೇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಸೇರಿದಂತೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ಆದ್ಯತೆ ಮೇರೆಗೆ ಮೊದಲಿಗೆ ಲಸಿಕೆ ಪಡೆಯಲಿದ್ದಾರೆ. ಹಾಗಾದರೆ, ಕೋವಿಡ್ ಲಸಿಕೆ ವಿತರಣಾ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿ ಇಲ್ಲಿದೆ.

1. ಕೋವಿನ್ ವ್ಯವಸ್ಥೆ ಮೂಲಕ ಲಸಿಕೆ ಅಭಿಯಾನವನ್ನು ಸ್ವಯಂಚಾಲಿತವಾಗಿ ನಡೆಸಲಾಗುವುದು ಎಂದು ಆರೋಗ್ಯ ಸಚಿವಾಲಯ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.

2. ಇದಕ್ಕಾಗಿ ವಿಶಿಷ್ಟವಾದ ಆರೋಗ್ಯದ ಗುರುತು ರಚಿಸುವ ಯೋಜನೆ ಇದೆ. ಒಬ್ಬ ವ್ಯಕ್ತಿಯು ಲಸಿಕೆ ಪಡೆದ ನಂತರ ಆಗುವ ಪ್ರತಿಕೂಲ ಪರಿಣಾಮಗಳ ನಿಕಟ ವರದಿ ಮತ್ತು ಟ್ರ್ಯಾಕಿಂಗ್ ಮಾಡಲಾಗುತ್ತದೆ.

3. ಲಸಿಕೆ ಪಡೆಯಲು ಕಾಯುತ್ತಿರುವವರು ಮತ್ತು ಲಸಿಕೆ ಅಭಿಯಾನದಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು 12 ಭಾಷೆಗಳಲ್ಲಿ ಎಸ್‌ಎಂಎಸ್ ಕಳುಹಿಸಲಾಗುವುದು. ಎಲ್ಲ ಹಂತದ ಲಸಿಕೆ ಸ್ವೀಕರಿಸಿದ ಬಳಿಕ ಕ್ಯೂಆರ್ ಕೋಡ್ ಆಧಾರಿತ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದನ್ನು ಜನರು ತಮ್ಮ ಮೊಬೈಲ್ ಫೋನ್‌ನಲ್ಲಿ ಸಂಗ್ರಹಿಸಬಹುದು.

4. ಕ್ಯೂಆರ್ ಕೋಡ್ ಆಧಾರಿತ ಪ್ರಮಾಣಪತ್ರವನ್ನು ಸಂಗ್ರಹಿಸಲು ಸರ್ಕಾರದ ಡಾಕ್ಯುಮೆಂಟ್ ಶೇಖರಣಾ ಅಪ್ಲಿಕೇಶನ್ ಡಿಜಿಲಾಕರ್ ಅನ್ನು ಸಂಯೋಜಿಸಲಾಗುತ್ತದೆ.

5. ಲಸಿಕೆ ಅಭಿಯಾನಕ್ಕೆ 24x7ಸಹಾಯವಾಣಿ ಇರುತ್ತದೆ.

6. ಸದ್ಯ, ಅಧಿಕಾರಿಗಳಿಗೆ ಮಾತ್ರ ಕೋವಿನ್‌ ಅಪ್ಲಿಕೇಶನ್‌ಗೆ ಪ್ರವೇಶವಿದೆ ಹಾಗಾಗಿ, ಸಾರ್ವಜನಿಕರು ಸದ್ಯ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ.

7. 75 ಲಕ್ಷ ಆರೋಗ್ಯ ಕಾರ್ಯಕರ್ತರ ಡೇಟಾವನ್ನು ಈ ಅಪ್ಲಿಕೇಶನ್ ಹೊಂದಿದ್ದು, ಆದ್ಯತೆ ಅನ್ವಯ ಅವರು ಲಸಿಕೆ ಪಡೆಯಲು ಮೊದಲ ಸ್ಥಾನದಲ್ಲಿರುತ್ತಾರೆ.

8. ಅಪ್ಲಿಕೇಶನ್‌ಗೆ ಅಧಿಕೃತ ಚಾಲನೆ ಸಿಕ್ಕ ಬಳಿಕ ಇದರಲ್ಲಿ ನಾಲ್ಕು ಮಾದರಿಗಳಿರುತ್ತವೆ. ಬಳಕೆದಾರನ ನಿರ್ವಾಹಕ ಮಾದರಿ, ಫಲಾನುಭವಿಗಳ ನೋಂದಣಿ, ಲಸಿಕೆ–ಫಲಾನುಭವಿಗಳ ಸ್ವೀಕೃತಿ ಮತ್ತು ಸ್ಟೇಟಸ್ ಅಪ್ಡೇಟ್ ಇರುತ್ತದೆ.

9. ಕೋವಿನ್ ಅಪ್ಲಿಕೇಶನ್‌ಗೆ ಚಾಲನೆ ಸಿಕ್ಕ ಬಳಿಕ ಇದರಲ್ಲಿ ನೀವು ನೋಂದಣಿ ಮಾಡಿಕೊಳ್ಳಲು ಮೂರು ಆಯ್ಕೆಗಳಿರುತ್ತವೆ. - ಸ್ವಯಂ ನೋಂದಣಿ, ವೈಯಕ್ತಿಕ ನೋಂದಣಿ (ಅಧಿಕಾರಿಯು ಡೇಟಾವನ್ನು ಅಪ್‌ಲೋಡ್ ಮಾಡುವ ಮೂಲಕ ಸಹಾಯ ಮಾಡುತ್ತಾರೆ). ಈ ಪ್ರಕ್ರಿಯೆಗೆ ಬಳಸುವ ನಿಖರವಾದ ಲಾಜಿಸ್ಟಿಕ್ಸ್ ಬಗ್ಗೆ ಇನ್ನೂ ಘೋಷಿಸಲಾಗಿಲ್ಲ. ಜನರು ಲಸಿಕೆ ಹಾಕಿಸಿಕೊಳ್ಳಲು ಸರ್ಕಾರ ಶಿಬಿರಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಲಸಿಕೆ ನೀಡಲು ಅಧಿಕಾರಿಗಳು ಜನರನ್ನು ನೋಂದಾಯಿಸಿಕೊಳ್ಳುತ್ತಾರೆ.

10."50 ವರ್ಷ ಮೇಲ್ಪಟ್ಟವರ ದತ್ತಾಂಶಕ್ಕಾಗಿ ನಾವು ಮತದಾರರ ಪಟ್ಟಿಯನ್ನು ಪರಿಗಣಿಸಿದ್ದು, ಅದೇ ಡೇಟಾವನ್ನು ಕೋವಿನ್‌ಗೆ ನೀಡುತ್ತೇವೆ. ನಂತರ ನಾವು ಅದನ್ನು ಸಾರ್ವಜನಿಕರಿಗೆ ಪ್ರವೇಶ ನೀಡುತ್ತೇವೆ. ಯಾವುದೇ ವ್ಯಕ್ತಿ ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ ಎಂದು ಕಂಡುಬಂದರೆ ಅವರು ಜಿಲ್ಲಾಡಳಿತ ಅಥವಾ ಬ್ಲಾಕ್ ಅಧಿಕಾರಿಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸ್ವಯಂ ನೋಂದಾವಣೆ ಸಹ ಮಾಡಿಕೊಳ್ಳಬಹುದು. ಹೃದಯ ಕಾಯಿಲೆಗಳು ಅಥವಾ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ತಮ್ಮ ವೈದ್ಯಕೀಯ ಪ್ರಮಾಣಪತ್ರವನ್ನು ಕೋವಿನ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದು "ಎಂದು ದೆಹಲಿ ಕೋವಿಡ್ 19 ಕಾರ್ಯಪಡೆಯ ಸದಸ್ಯ ಡಾ.ಸುನೀಲಾ ಗಾರ್ಗ್ ಹೇಳಿದ್ದಾರೆ..

ಕೋವಿನ್ ಅಪ್ಲಿಕೇಶನ್ ತಂತ್ರಾಂಶವನ್ನು ಪರೀಕ್ಷಿಸಲು ವಿವಿಧ ಹಂತಗಳಲ್ಲಿ ಲಸಿಕೆ ತಾಲೀಮು ನಡೆಸಲಾಗಿದೆ ಎಂದು ಸರ್ಕಾರ ಹೇಳಿದೆ. 700 ಜಿಲ್ಲೆಗಳಲ್ಲಿ 90,000 ಕ್ಕೂ ಹೆಚ್ಚು ಜನರಿಗೆ ಸಾಫ್ಟ್‌ವೇರ್ ಬಳಸಲು ತರಬೇತಿ ನೀಡಲಾಗಿದೆ ಎಂದು ಅದು ತಿಳಿಸಿದೆ. ಆದ್ಯತೆ ಮೇಲೆ ಲಸಿಕೆ ಪಡೆಯುವ ಜನರಿಗೆ ಸ್ವಯಂಚಾಲಿತವಾಗಿ ಸ್ಥಳ ನಿಗದಿ ಮಾಡಲಾಗುತ್ತದೆ. ಯಾವ ಗುಂಪಿಗೆ ಯಾವ ದಿನ ಲಸಿಕೆ ಅಭಿಯಾನ ನಡೆಸಬೇಕೆಂಬ ನಿರ್ಧಾರವನ್ನು ಜಿಲ್ಲಾಡಳಿತವೇ ಕೈಗೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT