ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಸೋಮವಾರ ಒಂದೇ ದಿನ 150 ಓಮೈಕ್ರಾನ್ ಪ್ರಕರಣ ಪತ್ತೆ

600ರ ಗಡಿಯಲ್ಲಿ ಸೋಂಕು; ದೆಹಲಿ, ಮುಂಬೈ ಅಧಿಕ ಪ್ರಕರಣ
Last Updated 27 ಡಿಸೆಂಬರ್ 2021, 17:44 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 150ಕ್ಕೂ ಹೆಚ್ಚು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಗೋವಾ ಮತ್ತು ಮಣಿಪುರದಲ್ಲಿ ಮೊದಲ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 600ರ ಸನಿಹಕ್ಕೆ ಬಂದಿದೆ.

ಆರೋಗ್ಯ ಸಚಿವಾಲಯವು ಸೋಮವಾರ ಬೆಳಿಗ್ಗೆ ನೀಡಿದ ಮಾಹಿತಿ ಪ್ರಕಾರ, 156 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 578ಕ್ಕೆ ತಲುಪಿದೆ. ಈ ಪೈಕಿ 151 ಜನರು ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ಮಾಹಿತಿ
ನೀಡಿದೆ.

ಮುಂಬೈನಲ್ಲಿ 11 ಸೇರಿದಂತೆ ಮಹಾರಾಷ್ಟ್ರದಲ್ಲಿ 26, ಹರಿಯಾಣದಲ್ಲಿ 2, ಉತ್ತರಾಖಂಡದಲ್ಲಿ ಮೂರು, ಗುಜರಾತಿನಲ್ಲಿ 24 ಪ್ರಕರಣಗಳು ವರದಿಯಾಗಿವೆ.ತಾಂಜಾನಿಯಾದಿಂದ ಮಣಿಪುರಕ್ಕೆ ಬಂದಿದ್ದ 48 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.ಇದು ಈಶಾನ್ಯ ರಾಜ್ಯಗಳಲ್ಲಿ ದಾಖಲಾದ ಮೊದಲ ಓಮೈಕ್ರಾನ್ ಪ್ರಕರಣವಾಗಿದೆ. ಬ್ರಿಟನ್‌ನಿಂದ ಗೋವಾದ ಪಣಜಿಗೆ ಬಂದ 8 ವರ್ಷದ ಬಾಲಕನಲ್ಲಿ ಓಮೈಕ್ರಾನ್ ಇದೆ ಎಂಬುದು
ಖಚಿತಪಟ್ಟಿದೆ.

19 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಕಂಡುಬಂದಿದೆ. ಈವರೆಗೆ ದೆಹಲಿಯಲ್ಲಿ ಅತಿಹೆಚ್ಚು (142) ಪ್ರಕರಣಗಳು ವರದಿಯಾಗಿವೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದ್ದು, ಇಲ್ಲಿ 141 ಸೋಂಕಿತರು ಇದ್ದಾರೆ. ಕೇರಳದಲ್ಲಿ 57, ಗುಜರಾತಿನಲ್ಲಿ 59, ರಾಜಸ್ಥಾನದಲ್ಲಿ 43, ತೆಲಂಗಾಣದಲ್ಲಿ 41 ಮಂದಿಗೆ ಓಮೈಕ್ರಾನ್ ತಗುಲಿದೆ.

ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳದಲ್ಲಿ 1,824 ಮತ್ತು ಮಹಾರಾಷ್ಟ್ರದಲ್ಲಿ 1,648 ಕೋವಿಡ್‌ ಪ್ರಕರಣಗಳು ಸೋಮವಾರ ದೃಢಪಟ್ಟಿವೆ. ಈ ಎರಡು ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಬೂಸ್ಟರ್‌ ಗೊಂದಲ

ಕೋವಿಡ್‌ ತಡೆಗೆ ನೀಡಲಾಗುವ ಲಸಿಕೆಯ ಮೂರನೇ ಡೋಸ್‌ ಅನ್ನು ಕೇಂದ್ರ ಸರ್ಕಾರವು ‘ಮುನ್ನೆಚ್ಚರಿಕೆ ಡೋಸ್‌’ ಎಂದು ಕರೆದಿರುವುದು ಗೊಂದಲ ಮೂಡಿಸಿದೆ. ಬೇರೆ ದೇಶಗಳಲ್ಲಿ ಇದನ್ನು ಬೂಸ್ಟರ್‌ ಡೋಸ್‌ ಎಂದು ಕರೆಯಲಾಗುತ್ತಿದೆ. ಆದರೆ, ಮೂಲ ಲಸಿಕೆಗಿಂತ ಭಿನ್ನವಾದ ಲಸಿಕೆಯನ್ನು ಮಾತ್ರ ಬೂಸ್ಟರ್‌ ಡೋಸ್‌ ಎಂದು ಹೇಳುತ್ತಾರೆ. ಲಸಿಕೆ ಪೋರ್ಟಲ್‌ ಕೋವಿನ್‌ನಲ್ಲಿ ಸರ್ಕಾರ ಸೂಚಿಸಿದ ಹೆಸರನ್ನೇ ಬಳಸಲಾಗುವುದು ಎಂದು ಕೋವಿನ್‌ ಮುಖ್ಯಸ್ಥ ಆರ್‌.ಎಸ್‌. ಶರ್ಮಾ ಹೇಳಿದ್ದಾರೆ.

‘ಸರ್ಕಾರವು ಮುನ್ನೆಚ್ಚರಿಕೆ ಡೋಸ್ ಎಂದರೆ, ಕೋವಿನ್‌ನಲ್ಲಿ ಕೂಡ ಅದು ಹಾಗೆಯೇ ಇರುತ್ತದೆ. ಆದರೆ, 4 ಮತ್ತು 5ನೇ ಡೋಸ್‌ಗೆ ಏನು ಹೇಳಬಹುದು ಎಂಬುದನ್ನು ನನಗೆ ಊಹೆ ಮಾಡಲು ಆಗುತ್ತಿಲ್ಲ’ ಎಂದು ಶರ್ಮಾ ಹೇಳಿದ್ದಾರೆ. ‘ಮೊದಲ ಎರಡು ಡೋಸ್‌ಗಳಂತೆಯೇ ಮೂರನೇ ಡೋಸ್‌ ಕೂಡ ಇರುತ್ತದೆಯೇ ಎಂಬುದು ನನಗೆ ತಿಳಿದಿಲ್ಲ’ ಎಂದು ಅವರು ಹೇಳಿದ್ದಾರೆ.

15–18 ವರ್ಷದವರಿಗೆ ಲಸಿಕೆ: ಮಾರ್ಗಸೂಚಿ ಬಿಡುಗಡೆ

ಈಗಾಗಲೇ ಕೋವಿಡ್‌ ಲಸಿಕೆಯ ಎರಡೂ ಡೋಸ್‌ ಪಡೆದುಕೊಂಡಿರುವವರಿಗೆ ಮುನ್ನೆಚ್ಚರಿಕಾ ಡೋಸ್‌ ನಿಡುವ ಮತ್ತು ಇನ್ನಷ್ಟೇ ಲಸಿಕೆ ಹಾಕಿಸಿಕೊಳ್ಳಬೇಕಿರುವ 15–18 ವರ್ಷದ ಯುವಜನರ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ಬಿಡುಗಡೆ ಮಾಡಿದೆ. ಅಗತ್ಯಕ್ಕೆ ತಕ್ಕಂತೆ ಈ ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಸಚಿವಾಲಯವು ಹೇಳಿದೆ.

l15–18 ವರ್ಷದವರಿಗೆ ಲಸಿಕೆ ನೀಡುವ ಕಾರ್ಯಕ್ರಮವು ಜನವರಿ 3ರಿಂದ ಆರಂಭವಾಗಲಿದೆ. ಇದಕ್ಕಾಗಿ ಕೋವಿನ್ ಪೋರ್ಟಲ್‌ನಲ್ಲಿ ಜನವರಿ 1ರಿಂದಲೇ ನೋಂದಣಿ ಆರಂಭಿಸಬಹುದು. ಈ ವರ್ಗದ ಫಲಾನುಭವಿಗಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ

lವೈದ್ಯಕೀಯ ಸಿಬ್ಬಂದಿ ಮತ್ತು ಮುಂಚೂಣಿಯ ಕೋವಿಡ್‌ ಹೋರಾಟಗಾರರಿಗೆ ಮುನ್ನೆಚ್ಚರಿಕೆ ಡೋಸ್‌ ಆಗಿ, ಮೂರನೇ ಡೋಸ್‌ ನೀಡುವ ಕಾರ್ಯಕ್ರಮವು ಜನವರಿ 10ರಿಂದ ಆರಂಭವಾಗಲಿದೆ. ಯಾವುದೇ ಲಸಿಕೆಯ ಎರಡನೇ ಡೋಸ್‌ ಹಾಕಿಸಿಕೊಂಡು 9 ತಿಂಗಳು ಆಗಿರುವವರಿಗೆ ಆದ್ಯತೆ
ನೀಡಲಾಗುತ್ತದೆ

l60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್‌ ಆಗಿ, ಮೂರನೇ ಡೋಸ್‌ ನೀಡುವ ಕಾರ್ಯಕ್ರಮವು ಜನವರಿ 10ರಿಂದ ಆರಂಭವಾಗಲಿದೆ. ಆದರೆ ವೈದ್ಯರ ಸಲಹೆಯ ಆಧಾರದ ಮೇಲಷ್ಟೇ ಇವರಿಗೆ ಮುನ್ನೆಚ್ಚರಿಕೆ ಡೋಸ್‌ ನೀಡಲಾಗುತ್ತದೆ. ಯಾವುದೇ ಲಸಿಕೆಯ ಎರಡನೇ ಡೋಸ್‌ ಹಾಕಿಸಿಕೊಂಡು 9 ತಿಂಗಳು ಆಗಿರುವವರಿಗೆ ಆದ್ಯತೆ ನೀಡಲಾಗುತ್ತದೆ

****

lವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್‌ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಕೋವಿಡ್‌ ಲಸಿಕೆ ಕಾರ್ಯಕ್ರಮಕ್ಕೆ ವೇಗ ತುಂಬಬೇಕು ಎಂದು ಚುನಾವಣಾ ಆಯೋಗವು ಸೂಚಿಸಿದೆ

lಕೇರಳದಲ್ಲಿ ಡಿಸೆಂಬರ್‌ 31ರಂದು ರಾತ್ರಿ 10ರ ನಂತರ ಹೊಸ ವರ್ಷಾಚರಣೆಗೆ ಅವಕಾಶ ನಿಷೇಧಿಸಲಾಗಿದೆ. ಡಿ.30ರಿಂದ 2022ರ ಜನವರಿ 2ರ ವರೆಗೆ ಈ ನಿರ್ಬಂಧ ಇರಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT