ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಸೇರಿ 17 ರಾಜ್ಯಗಳಲ್ಲಿ ಶೇ 25ರಷ್ಟು ಜನರಿಗೆ ಕೋವಿಡ್ ಲಸಿಕೆ

Last Updated 25 ಜೂನ್ 2021, 1:33 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ಜನ ಸಂಖ್ಯೆಯ ಶೇ 25ರಷ್ಟು ಮಂದಿಗೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.

ಗುರುವಾರ ದೇಶದಾದ್ಯಂತ ಸುಮಾರು 60 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೂ ಉಚಿತ ಲಸಿಕೆ ನೀಡುವ ಅಭಿಯಾನದ ಮೊದಲ ದಿನವಾದ ಸೋಮವಾರ ದೇಶದಲ್ಲಿ ದಾಖಲೆಯ ಸುಮಾರು 90 ಲಕ್ಷ ಡೋಸ್ ಲಸಿಕೆ ನೀಡಲಾಗಿತ್ತು. ಆ ದಿನಕ್ಕೆ ಹೋಲಿಸಿದರೆ ಮುಂದಿನ ಮೂರು ದಿನಗಳಲ್ಲಿ ಲಸಿಕೆ ನೀಡಿಕೆ ಪ್ರಮಾಣ ಶೇ 30ಕ್ಕೂ ಹೆಚ್ಚು ಕಡಿಮೆಯಾಗಿದೆ.

ಆದರೆ, ಒಟ್ಟಾರೆಯಾಗಿ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಾಗಿದ್ದು ಕರ್ನಾಟಕ, ಗುಜರಾತ್ ಸೇರಿದಂತೆ 17 ರಾಜ್ಯಗಳು ಕಾಲುಭಾಗ ಜನರಿಗೆ ಈಗಾಗಲೇ ಕನಿಷ್ಠ ಒಂದು ಡೋಸ್ ಲಸಿಕೆ ನೀಡಿವೆ.

ಉಳಿದ 23 ರಾಜ್ಯಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ಈಶಾನ್ಯ ರಾಜ್ಯಗಳು, ಇತರ ಸಣ್ಣ ರಾಜ್ಯಗಳು ಸೇರಿವೆ.

ಉತ್ತರ ಪ್ರದೇಶ ಮತ್ತು ಬಿಹಾರ ಲಸಿಕೆ ನೀಡಿಕೆಯಲ್ಲಿ ತೀರಾ ಹಿಂದುಳಿದಿವೆ. ಈ ರಾಜ್ಯಗಳಲ್ಲಿ ಶೇ 10ರಷ್ಟು ಜನರಿಗೆ ಮಾತ್ರವೇ ಲಸಿಕೆ ನೀಡಲಾಗಿದೆ. ಲಸಿಕೆ ನೀಡಿಕೆಯ ರಾಷ್ಟ್ರೀಯ ಸರಾಸರಿ ಶೇ 20ಕ್ಕಿಂತ ಕೆಳಗಿದೆ.

‘ಈಗಿನ ಮತ್ತು ಭವಿಷ್ಯದ ಕೋವಿಡ್–19 ಅಲೆಗಳಿಂದ ಜನರ ಜೀವ ರಕ್ಷಿಸಲು ಪ್ರತಿಯೊಂದು ರಾಜ್ಯದಲ್ಲಿಯೂ ಲಸಿಕೆ ನೀಡಿಕೆ ಪರಿಸ್ಥಿತಿ ಸುಧಾರಿಸಬೇಕಿದೆ. ಲಸಿಕೆ ನೀಡಿಕೆ ಅಸಮತೋಲನವು ರಾಜ್ಯಗಳಲ್ಲಿ ಕೋವಿಡ್ ಹೊರೆ ಭಿನ್ನವಾಗಿರಲು ಕಾರಣವಾಗಲಿದೆ’ ಎಂದು ಕೋಯಿಕ್ಕೋಡ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಅತಿಥಿ ಪ್ರಾಧ್ಯಾಪಕ, ಆರೋಗ್ಯ ಅರ್ಥಶಾಸ್ತ್ರಜ್ಞ ರಿಜೊ ಜಾನ್ ಹೇಳಿದ್ದಾರೆ.

ದೇಶದಲ್ಲಿ ಈವರೆಗೆ ಒಟ್ಟು 31 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಶೇ 18ರಷ್ಟು ಮಂದಿ ಮೊದಲ ಡೋಸ್ ಪಡೆದಿದ್ದರೆ, ಶೇ 4ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ.

ಗುರುವಾರದ ಮಾಹಿತಿ ಪ್ರಕಾರ, 1.9 ಕೋಟಿ ಡೋಸ್ ಲಸಿಕೆ ರಾಜ್ಯಗಳಿ ಬಳಿ ಲಭ್ಯವಿವೆ. ಮುಂದಿನ ಮೂರು ದಿನಗಳ ಒಳಗಾಗಿ 21 ಲಕ್ಷ ಡೋಸ್ ಲಸಿಕೆಗಳನ್ನು ರಾಜ್ಯಗಳಿಗೆ ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT