ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಿಕ್‌ನಲ್ಲಿ ದುರಂತ: ಆಮ್ಲಜನಕ ವ್ಯತ್ಯಯದಿಂದ 24 ಕೊರೊನಾ ಸೋಂಕಿತರು ಸಾವು

ನಾಸಿಕ್‌ ಸರ್ಕಾರಿ ಆಸ್ಪತ್ರೆಯಲ್ಲಿ ದುರಂತ: ಉಸಿರಾಟ ಸಾಧ್ಯವಾಗದೆ ಕೋವಿಡ್‌ ರೋಗಿಗಳ ಮರಣ
Last Updated 21 ಏಪ್ರಿಲ್ 2021, 19:04 IST
ಅಕ್ಷರ ಗಾತ್ರ

ನಾಸಿಕ್‌/ಮುಂಬೈ: ನಾಸಿಕ್‌ನ ಡಾ. ಝಾಕಿರ್‌ ಹುಸೇನ್‌ ಸರ್ಕಾರಿ ಆಸ್ಪತ್ರೆಯ ಆಮ್ಲಜನಕ ಘಟಕದಲ್ಲಿ ಬುಧವಾರ ಸೋರಿಕೆಯಾಗಿದೆ. ಇದರಿಂದಾಗಿ, ಕೋವಿಡ್‌ ರೋಗಿಗಳಿಗೆ ಅತ್ಯಗತ್ಯವಾದ ಆಮ್ಲಜನಕ ಪೂರೈಕೆ ಯಲ್ಲಿ ವ್ಯತ್ಯಯವಾಗಿದ್ದು ಉಸಿರಾಡಲು ಸಾಧ್ಯವಾಗದೆ 24 ರೋಗಿಗಳು ಮೃತಪಟ್ಟಿದ್ದಾರೆ. ದೇಶವು ಕೋವಿಡ್‌ ಬಾಧೆಗೆ ಒಳಗಾದ ಬಳಿಕ ಆಸ್ಪತ್ರೆಯಲ್ಲಿ ನಡೆದ ಬಹುದೊಡ್ಡ ದುರಂತ ಇದು.

‘ಟ್ಯಾಂಕ್‌ನಲ್ಲಿ ಸೋರಿಕೆಯಾಗಿದ್ದರಿಂದ ರೋಗಿಗಳಿಗೆ ಆಮ್ಲಜನಕದ ಸರಬರಾಜು ಕಡಿಮೆಯಾಯಿತು. ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್‌ ಟೋಪೆ ತಿಳಿಸಿದ್ದಾರೆ. ಸೋರಿಕೆಯಾದ ಸಂದರ್ಭದಲ್ಲಿ 22 ಮಂದಿ ಮೃತಪಟ್ಟಿದ್ದರು. ವೆಂಟಿಲೇಟರ್‌ ಬೆಂಬಲದಲ್ಲಿ ಇದ್ದ ಇಬ್ಬರು ಸಂಜೆಯ ಹೊತ್ತಿಗೆ ಮೃತಪಟ್ಟರು. ಈ ಆಸ್ಪತ್ರೆಯು ಕೋವಿಡ್‌ ರೋಗಿಗಳಿಗಾಗಿಯೇ ಮೀಸಲಾಗಿತ್ತು.

‘ಟ್ಯಾಂಕ್‌ನ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯೊಂದು ನೋಡಿ ಕೊಳ್ಳುತ್ತಿತ್ತು. ಸೋರಿಕೆ ಆದಾಗ ಟ್ಯಾಂಕ್‌ನ ವಾಲ್ವ್‌ನ ಸಮೀಪದಲ್ಲಿದ್ದ ತಂತ್ರಜ್ಞರು ಕೂಡಲೇ ಕಾರ್ಯಪ್ರವೃತ್ತರಾಗಿ ಹೆಚ್ಚಿನ ಸಾವು–ನೋವುಗಳನ್ನು ತಡೆದಿದ್ದಾರೆ’ ಎಂದು ಜಿಲ್ಲಾಧಿಕಾರಿ ಸೂರಜ್ ಮನಧರೆ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಒಟ್ಟು 150 ರೋಗಿಗಳಿದ್ದರು. ಅವರಲ್ಲಿ 23 ಮಂದಿಗೆ ವೆಂಟಿಲೇಟರ್‌ ನೆರವು ಒದಗಿಸಲಾಗಿತ್ತು. ಉಳಿದವರಿಗೆ ಆಮ್ಲಜನಕ ನೀಡಲಾಗುತ್ತಿತ್ತು. ಬೆಳಿಗ್ಗೆ 10.30ರ ಸುಮಾರಿಗೆ ಆಮ್ಲಜನಕ ಸಂಗ್ರಹ ಟ್ಯಾಂಕ್‌ನ ಒಂದು ಕಡೆ ಬಿರುಕಾಗಿ ಸೋರಿಕೆ ಆರಂಭವಾಗಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ದೊಡ್ಡ ಸಿಲಿಂಡರ್‌ಗಳನ್ನು ಅಳವಡಿಸಿ ರೋಗಿಗಳಿಗೆ ಆಮ್ಲಜನಕ ಸರಬರಾಜು ಮಾಡುವ ಪ್ರಯತ್ನ ಆರಂಭಿಸಲಾಯಿತು. ಜತೆಯಲ್ಲೇ ಕೆಲವು ರೋಗಿಗಳನ್ನು ಸ್ಥಳಾಂತರಿಸುವ ಕೆಲಸವನ್ನೂ ಮಾಡಲಾಗಿತ್ತು. ಇದೇ ಸಮಯದಲ್ಲಿ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡುವ ಟ್ಯಾಂಕರ್‌ ಸಹ ಬಂದಿತ್ತು. ಅದರಲ್ಲಿದ್ದ ತಂತ್ರಜ್ಞರು ಟ್ಯಾಂಕ್‌ನ ಬೀಗ
ಒಡೆದು, ವಾಲ್ವ್ ಅನ್ನು ಮುಚ್ಚಿ, ಸೋರಿಕೆ ಯನ್ನು ತಡೆದರು ಎಂದು ಅಧಿಕಾರಿ ತಿಳಿಸಿದ್ದಾರೆ.

‘ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ ರೂಪಾಯಿ ಆರ್ಥಿಕ ನೆರವು ಒದಗಿಸಲಾಗುವುದು’ ಎಂದು ಸಚಿವ ಟೋಪೆ ತಿಳಿಸಿದ್ದಾರೆ.

‘ಮುಂದಿನ ಎರಡು ತಿಂಗಳಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನಾವು ಕೊರತೆ ಬಿಕ್ಕಟ್ಟು ಸರಿಪಡಿಸುತ್ತೇವೆ’ ಎಂದು ಪೂನವಾಲಾ ಹೇಳಿದ್ದಾರೆ.

‘ತಯಾರಿಕೆಯ ಶೇ 50ರಷ್ಟನ್ನು ಭಾರತ ಸರ್ಕಾರದ ಲಸಿಕೆ ಕಾರ್ಯಕ್ರಮಕ್ಕೆ ನೀಡಲಾಗುವುದು. ಉಳಿದ ಶೇ 50ರಷ್ಟನ್ನು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮೀಸಲಿಡಲಾಗುವುದು’ ಎಂದು ಹೇಳಿದ್ದಾರೆ.

ಜಾಗತಿಕವಾಗಿ ಲಭ್ಯವಿರುವ ಲಸಿಕೆಗಳ ದರದ ಜೊತೆ ಹೋಲಿಸಿದರೆ, ಸೀರಂ ಸಂಸ್ಥೆ ಒದಗಿಸುತ್ತಿರುವ ಲಸಿಕೆಗಳ ದರ ಕೈಗೆಟುಕುವಂತಿದೆ ಎಂದು ದರವನ್ನು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಪ್ರತಿ ಡೋಸ್‌ಗೆ ₹1,500, ರಷ್ಯಾ ಮತ್ತು ಚೀನಾದಲ್ಲಿ ₹750 ಇದೆ ಎಂದು ಪೂನಾವಾಲಾ ವಿವರಿಸಿದ್ದಾರೆ.

ಆಕ್ಷೇಪ: ಕೇಂದ್ರ ಸರ್ಕಾರಕ್ಕೆ ₹150 ವಿಶೇಷ ದರದಲ್ಲಿ ಲಸಿಕೆ ಪೂರೈಸಲಾಗುತ್ತಿದ್ದು, ರಾಜ್ಯಗಳಿಗೇಕೆ ₹400 ದರ ಎಂದು ಆಕ್ಷೇಪ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೂನಾವಾಲಾ, ಒಪ್ಪಂದದ ಪ್ರಕಾರ, ಮೊದಲ 10 ಕೋಟಿ ಡೋಸ್‌ ಪೂರೈಸಿದ ಬಳಿಕ ಕೇಂದ್ರ ಸರ್ಕಾರಕ್ಕೂ ಪ್ರತಿ ಡೋಸ್‌ಗೆ ₹400ರಂತೆ ಮಾರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.

‘ಕೇಂದ್ರ ಸರ್ಕಾರಕ್ಕೆ ಮೊದಲ 10 ಕೋಟಿ ಡೋಸ್‌ಗಳನ್ನು ₹200ರ ವಿಶೇಷ ಬೆಲೆಗೆ ನೀಡಲಾಗುವುದು. ಖಾಸಗಿ ಮಾರುಕಟ್ಟೆಗೆ ಪ್ರತಿ ಡೋಸ್‌ಗೆ ₹1,000 ದರದಲ್ಲಿ ಪೂರೈಸಲಾಗುವುದು’ ಎಂದು ಕಳೆದ ಜನವರಿಯಲ್ಲಿ ಪೂನಾವಾಲಾ ಹೇಳಿದ್ದರು.

ತುಂಬಿಸುತ್ತಿದ್ದಾಗ ಘಟನೆ

ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ಆಮ್ಲಜನಕದ 2 ಟ್ಯಾಂಕ್‌ಗಳನ್ನು ಅಳವಡಿಸಿ ಅದರ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿತ್ತು. ಟ್ಯಾಂಕರ್‌ನಿಂದ ಒಂದು ಟ್ಯಾಂಕ್‌ಗೆ ಆಮ್ಲಜನಕವನ್ನು ತುಂಬಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ಯಾಂಕ್‌ನಲ್ಲಿ ತುಂಬಿದ್ದ ದ್ರವೀಕೃತ ಆಮ್ಲಜನಕದ ತಾಪಮಾನವು ಸುಮಾರು –180 (ಮೈನಸ್‌)ಡಿಗ್ರಿ ಸೆಲ್ಸಿಯಸ್‌ ಇತ್ತು. ಇದನ್ನು ಸಂಗ್ರಹಿಸಿಡುವ ಟ್ಯಾಂಕ್‌ನ ಗೋಡೆಗಳ ಮೇಲೆ ವಿಪರೀತವಾದ ಒತ್ತಡವಿರು ತ್ತದೆ. ಸೋರಿಕೆ ಶುರುವಾದಾಗ ಟ್ಯಾಂಕ್‌ನಲ್ಲಿ ಸುಮಾರು ಕಾಲುಭಾಗದಷ್ಟು ಆಮ್ಲಜನಕ ತುಂಬಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಶೀಲ್ಡ್ ದರ: ರಾಜ್ಯಗಳಿಗೆ ₹400, ಖಾಸಗಿಗೆ ₹600

ನವದೆಹಲಿ: ಕೋವಿಶೀಲ್ಡ್ ಲಸಿಕೆ ಮಾರಾಟ ದರವನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಬುಧವಾರ ಪ್ರಕಟಿಸಿದೆ. ರಾಜ್ಯ ಸರ್ಕಾರಗಳಿಗೆ ಪ್ರತೀ ಡೋಸ್‌ಗೆ ₹400 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹600ಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದೆ.

ನಾಲ್ಕೈದು ತಿಂಗಳ ನಂತರ ಲಸಿಕೆಗಳು ಚಿಲ್ಲರೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ ಎಂದು ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 18 ವರ್ಷ ದಾಟಿದ ದೇಶದ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಸೀರಂ ಸಂಸ್ಥೆಯು ದರಗಳನ್ನು ಪ್ರಕಟಿಸಿದೆ. ಜನವರಿಯಲ್ಲಿ ಲಸಿಕೆ ಅಭಿಯಾನ ಪ್ರಾರಂಭವಾದಾಗ ಪುಣೆಯ ಲಸಿಕೆ ತಯಾರಕ ಸಂಸ್ಥೆಯು ಪ್ರತಿ ಡೋಸ್‌ಗೆ ₹150 ವಿಶೇಷ ದರದಲ್ಲಿ ಕೇಂದ್ರ ಸರ್ಕಾರಕ್ಕೆ ಲಸಿಕೆಗಳನ್ನು ಒದಗಿಸಿತ್ತು.

ತಾಳಿ ಅಡವಿಡಲು ಮುಂದಾದ ಮಗಳು

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ತಂದೆಯ ಶವ ಸಾಗಿಸಿದ್ದ ಖಾಸಗಿ ಆಂಬುಲೆನ್ಸ್‌ ಮಾಲೀಕ ಕೇಳಿದಷ್ಟು ಹಣ ನೀಡಲು ಸಾಧ್ಯವಾಗದೇ, ಮೃತ ವ್ಯಕ್ತಿಯ ಮಗಳು ತನ್ನ ತಾಳಿಯನ್ನೇ ಅಡವಿಡಲು ಮುಂದಾಗಿದ್ದರು.

‘ಕೋವಿಡ್‌ನಿಂದಾಗಿ ನನ್ನ ತಂದೆ ಗಂಭೀರ ಸ್ಥಿತಿಯಲ್ಲಿದ್ದರು. ಮಂಗಳವಾರ ಸಂಜೆ ಜೈ ಹನುಮಾನ್‌ ಆಂಬುಲೆನ್ಸ್‌ನವರಿಗೆ ಕರೆ ಮಾಡಿದೆವು. ಮತ್ತಿಕೆರೆ
ಯಿಂದ ಸುಬ್ಬಯ್ಯ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಪ್ರಾಣ ಬಿಟ್ಟಿದ್ದರು. ಆಂಬುಲೆನ್ಸ್‌ನ ಸಿಬ್ಬಂದಿ ₹60 ಸಾವಿರ ಕೊಟ್ಟರೆ ಮಾತ್ರ ಶವ ಕೊಡುವುದಾಗಿ ಹೇಳಿದರು. ಅದಕ್ಕೆ ಅನಿವಾರ್ಯವಾಗಿ ಮಾಂಗಲ್ಯ ಅಡವಿಡಲು ಮುಂದಾಗಿದ್ದೆ’ ಎಂದು ಮೃತರ ಮಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT