ಗುರುವಾರ , ಮೇ 19, 2022
21 °C

ನಾಲ್ವರಲ್ಲಿ ಕೋವಿಡ್-19ರ ದಕ್ಷಿಣ ಆಫ್ರಿಕಾ ತಳಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದೇಶಗಳಿಂದ ಹಿಂತಿರುಗಿದ ನಾಲ್ವರಿಗೆ ಕೋವಿಡ್‌-19ರ ದಕ್ಷಿಣ ಆಫ್ರಿಕಾ ತಳಿ ಮತ್ತು ಒಬ್ಬ ಪ್ರಯಾಣಿಕನಿಗೆ ಬ್ರೆಜಿಲ್‌ನ ತಳಿಯ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಐವರನ್ನೂ ತೀವ್ರ ಪರೀಕ್ಷೆಗೆ ಒಳಪಡಿಸಿದ್ದು, ಅವರ ಗಂಟಲ ದ್ರವದ ಮಾದರಿಯನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ.

ಅಂಗೋಲಾ, ತಾಂಜಾನಿಯಾದಿಂದ ಬಂದಿರುವ ತಲಾ ಒಬ್ಬರು ಮತ್ತು ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿರುವ ಇಬ್ಬರಲ್ಲಿ ಕೋವಿಡ್‌-19ನ ದಕ್ಷಿಣ ಆಫ್ರಿಕಾ ತಳಿ ಪತ್ತೆಯಾಗಿದೆ. ಇವರೆಲ್ಲರೂ ಜನವರಿಯಲ್ಲಿ ಭಾರತಕ್ಕೆ ಹಿಂತಿರುಗಿದ್ದರು. ಬ್ರೆಜಿಲ್‌ನಿಂದ ಫೆಬ್ರುವರಿಯಲ್ಲಿ ಹಿಂತಿರುಗಿದ ಒಬ್ಬರಲ್ಲಿ ಬ್ರೆಜಿಲ್ ತಳಿಯ ಸೋಂಕು ಇರುವುದು ಪತ್ತೆಯಾಗಿದೆ. ಇವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ, ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್ ಅವರು ಮಾಹಿತಿ ನೀಡಿದ್ದಾರೆ.

ಇವರ ದೇಹಗಳಿಂದ ಸಂಗ್ರಹಿಸಿರುವ ಸೋಂಕಿನ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈಗ ಬಳಸುತ್ತಿರುವ ಕೋವಿಡ್-19 ಲಸಿಕೆಗಳು ಈ ಎರಡೂ ತಳಿಗಳ ಮೇಲೆ ಪರಿಣಾಮ ಬೀರುತ್ತವೆಯೇ ಎಂದೂ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೋವಿಡ್‌-19ರ ಬ್ರಿಟನ್‌ ತಳಿಯು ಭಾರತದಲ್ಲಿ ಹರಡುವುದನ್ನು ತಡೆಯಲು ಬ್ರಿಟನ್‌ಗೆ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಿಂದ ಬರುವ ವಿಮಾನಗಳನ್ನೂ ಸ್ಥಗಿತಗೊಸುವ ಬಗ್ಗೆ ಚರ್ಚೆ ನಡೆದಿದೆ. ಈ ದೇಶಗಳಿಂದ ಬರುವವರನ್ನು ಕಡ್ಡಾಯ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

* ದಕ್ಷಿಣ ಆಫ್ರಿಕಾ ತಳಿಯು ಕ್ಷಿಪ್ರವಾಗಿ ಹರಡುವ ಗುಣ ಹೊಂದಿದೆ. ಈ ತಳಿಯು 44 ದೇಶಗಳಿಗೆ ಹರಡಿದೆ.
* ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಬಹುಪಾಲು ಜನರು ಈ ತಳಿಯ ಸೋಂಕಿಗೆ ತುತ್ತಾಗಿದ್ದಾರೆ.
* ಬ್ರೆಜಿಲ್ ತಳಿ ಸಹ ಬಹಳ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. 15 ದೇಶಗಳಿಗೆ ಇದು ಹರಡಿದೆ.
* ಬ್ರೆಜಿಲ್‌ನಲ್ಲಿ ಕೋವಿಡ್‌-19ರ ಮೂರನೇ ಅಲೆ ತೀವ್ರಗೊಳ್ಳಲು ಬ್ರೆಜಿಲ್ ತಳಿಯೇ ಕಾರಣವಾಗಿದೆ.
* ಭಾರತದಲ್ಲಿ ಕೋವಿಡ್‌-19ರ ಬ್ರಿಟನ್‌ ತಳಿಯ ಸೋಂಕಿಗೆ ತುತ್ತಾದವರ ಸಂಖ್ಯೆ ಈಗ 187.
* ಈ ಮೂರು ತಳಿಗೆ ತುತ್ತಾದ ಭಾರತೀಯರಲ್ಲಿ ಸಾವು ಸಂಭವಿಸಿಲ್ಲ

***

ದೇಶದ ಶೇ 70ರಷ್ಟು ಜನರು ಈಗಲೂ ಕೊರೊನಾ ತಗಲುವ ಅಪಾಯದಲ್ಲಿ ಇದ್ದಾರೆ. ಹೀಗಾಗಿ ಕೋವಿಡ್ ತಡೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಬೇಕು.
-ಬಲರಾಮ್ ಭಾರ್ಗವ್, ಐಸಿಎಂಆರ್ ಪ್ರಧಾನ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು