ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯ: ದೆಹಲಿಯಲ್ಲಿ ಶೇ 50ರಷ್ಟು ಸಿಬ್ಬಂದಿಗೆ ವರ್ಕ್ ಫ್ರಮ್ ಹೋಂ ಜಾರಿ

Last Updated 4 ನವೆಂಬರ್ 2022, 11:02 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ದಿನೇ ದಿನೇ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಶೇ 50ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಂ) ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರ ಸಚಿವ ಗೋಪಾಲ್ ರೈ, ‘ಶೇ 50ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವ ಆದೇಶವನ್ನು ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳು ಕಡ್ಡಾಯವಾಗಿ ಅನುಸರಿಸಬೇಕು’ ಎಂದು ಹೇಳಿದರು.

ಮಕ್ಕಳ ಸುರಕ್ಷತೆ ಉದ್ದೇಶದಿಂದ ಶನಿವಾರದಿಂದ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದು, ಮಕ್ಕಳ ಹೊರಾಂಗಣ ಚಟುವಟಿಕೆಗಳನ್ನು ನಿರ್ಬಂಧಿಸಲು ಶಾಲಾ ಆಡಳಿತ ಮಂಡಳಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ರೈ ಹೇಳಿದರು.

‘ಬಿಎಸ್ VI’ ಅಲ್ಲದ ಡೀಸೆಲ್ ಚಾಲಿತ ಲಘು ಮೋಟಾರು ವಾಹನಗಳ ನಿಷೇಧ ಸೇರಿದಂತೆ ಗಾಳಿ ಗುಣಮಟ್ಟ ನಿರ್ವಹಣೆಗಾಗಿ ಆಯೋಗವು ಶಿಫಾರಸು ಮಾಡಿದ ನಿರ್ಬಂಧಗಳನ್ನು ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದರು.

ಮಾಲಿನ್ಯಕಾರಕ ಚಟುವಟಿಕೆಗಳ ಮೇಲಿನ ನಿರ್ಬಂಧಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಆರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ರೈ ಹೇಳಿದರು.

ನೋಯ್ಡಾ ಮತ್ತು ಗ್ರೇಟರ್‌ ನೋಯ್ಡಾದಲ್ಲಿನ ಎಲ್ಲ ಶಾಲೆಗಳು ನ.8ರ ತನಕ 8ನೇ ತರಗತಿ ವರೆಗೆ ಆನ್‌ಲೈನ್‌ ಮೂಲಕ ಬೋಧನೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

9ರಿಂದ 12ನೇ ತರಗತಿ ವರೆಗಿನ ಬೋಧನೆಯನ್ನು ಸಾಧ್ಯವಾದಷ್ಟು ಆನ್‌ಲೈನ್‌ ಮೂಲಕವೇ ನಡೆಸುವಂತೆಯೂ ಸೂಚಿಸಲಾಗಿದೆ.

‘ದೆಹಲಿ ನಗರ ವ್ಯಾಪ್ತಿಯ ಗಾಳಿಯ ಗುಣಮಟ್ಟ ಗುರುವಾರ ಮತ್ತಷ್ಟು ಬಿಗಡಾಯಿಸಿದೆ’ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ನಿಷೇಧ: ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡಿರುವ ಕಮಿಷನ್‌ ಫಾರ್‌ ಏರ್‌ ಕ್ವಾಲಿಟಿ ಮ್ಯಾನೇಜ್‌ಮೆಂಟ್‌ (ಸಿಎಕ್ಯೂಎಂ) ನಗರದೊಳಗೆ ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಡೀಸೆಲ್‌ ಚಾಲಿತ ಲಘು ವಾಹನಗಳ ಸಂಚಾರವನ್ನೂ ನಿಷೇಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT