60ಕ್ಕೂ ಹೆಚ್ಚು ರೈತರು ಬಲಿಯಾದಾಗ ಮುಜುಗರ ಆಗಲಿಲ್ಲವೇ? ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: 60ಕ್ಕೂ ಹೆಚ್ಚು ರೈತರು ಬಲಿಯಾದಾಗ ನರೇಂದ್ರ ಮೋದಿ ಸರ್ಕಾರ ಮುಜುಗರಕ್ಕೊಳಗಾಗಲಿಲ್ಲ. ಆದರೆ ಟ್ರ್ಯಾಕ್ಟರ್ ರ‍್ಯಾಲಿಯಿಂದ ಮುಜುಗರಕ್ಕೊಳಗಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜನವರಿ 26 ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಳ್ಳಲು ರೈತ ಸಂಘಟನೆಗಳು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲು ನಡೆಸಲು ನಿರ್ಧರಿಸಿರುವ ರೈತರು, ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಹೃದಯ ಭಾಗಗಳಲ್ಲಿ ಪ್ರತಿಭಟನೆಯನ್ನು ನಡೆಸಲಿದ್ದಾರೆ.
ಆದರೆ ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ರೈತರು ನಡೆಸುವ ಪ್ರತಿಭಟನೆಯನ್ನು ನಿಷೇಧಿಸಿಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಕೇಂದ್ರ ಸರ್ಕಾರವು ತನ್ನ ಅರ್ಜಿಯಲ್ಲಿ, ಗಣರಾಜ್ಯೋತ್ಸವ ಮೆರವಣಿಗೆಗೆ ಅಡ್ಡಿಪಡಿಸುವುದು ದೇಶಕ್ಕೆ ಎದುರಾಗಲಿರುವ ಮುಜುಗರ ಎಂದು ಉಲ್ಲೇಖಿಸಿತ್ತು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, '60ಕ್ಕೂ ಹೆಚ್ಚು ರೈತರು ಬಲಿಯಾದಾಗ ನರೇಂದ್ರ ಮೋದಿ ಸರ್ಕಾರವು ಮುಜುಗರಕ್ಕೊಳಗಾಗಿಲ್ಲ. ಆದರೆ ಟ್ರ್ಯಾಕ್ಟರ್ ರ‍್ಯಾಲಿ ಆಯೋಜನೆಯಿಂದ ಮುಜುಗರಕ್ಕೊಳಗಾಗುತ್ತಿದೆ' ಎಂದು ಆರೋಪಿಸಿದರು.
ಇದನ್ನೂ ಓದಿ: ಸುಪ್ರೀಂ ತೀರ್ಪು ಸ್ವಾಗತಾರ್ಹ, ಆದರೆ ಪ್ರತಿಭಟನೆ ಮುಂದುವರಿಯಲಿದೆ: ರೈತ ಮುಖಂಡರು
ಪ್ರತಿಭಟನಾ ನಿರತ ರೈತರ ಪ್ರಕಾರ, ನವೆಂಬರ್ 26ರಿಂದ ಆರಂಭವಾಗಿರುವ ಪ್ರತಿಭಟನೆಯಲ್ಲಿ ಇದುವರೆಗೆ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದರೆ ಇನ್ನು ಕೆಲವರು ವಿಪರೀತ ಚಳಿಯನ್ನು ತಡೆಯಲಾರದೆ ಸಾವಿಗೆ ಶರಣಾಗಿದ್ದಾರೆ.
ವಿವಾದಿದ ಕೃಷಿ ಕಾಯ್ದೆ ಸಂಬಂಧ ಕೇಂದ್ರ ಸರ್ಕಾರ ಹಾಗೂ ರೈತರ ನಡುವಣ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ. ಈ ಮಧ್ಯೆ ಮೂರು ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನು ನೀಡಿದೆ. ಅಲ್ಲದೆ ಬಿಕ್ಕಟ್ಟು ಬಗೆ ಹರಿಸಲು ಸಮಿತಿಯೊಂದನ್ನು ರಚಿಸಲು ನಿರ್ಧರಿಸಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.