ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಕೋವಿಡ್ ಪ್ರಕರಣ ಹೆಚ್ಚಳ; ಏ.30ರ ವರೆಗೂ ಹಲವು ನಿರ್ಬಂಧ

Last Updated 11 ಏಪ್ರಿಲ್ 2021, 8:07 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ದೆಹಲಿ ಸರ್ಕಾರ ಶನಿವಾರ ಹಲವು ನಿರ್ಬಂಧಗಳನ್ನು ಹೇರಿದೆ. ಮೆಟ್ರೊ, ಬಸ್‌ಗಳಲ್ಲಿ ಗರಿಷ್ಠ ಶೇ 50ರಷ್ಟು ಸೀಟು ಭರ್ತಿ, ಸರ್ಕಾರಿ ಕಚೇರಿಗಳಿಗೆ ಸಿಬ್ಬಂದಿ ಹಾಜರಾತಿ ಕಡಿತ, ಮದುವೆ ಮತ್ತು ಅಂತ್ಯ ಸಂಸ್ಕಾರಗಳಿಗೆ ಭಾಗಿಯಾಗಬಹುದಾದ ಜನರ ಸಂಖ್ಯೆ ಮತ್ತಷ್ಟು ಇಳಿಕೆ ಹಾಗೂ ರಾಜಕೀಯ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.

ದೆಹಲಿಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಏಪ್ರಿಲ್‌ 30ರ ವರೆಗೂ ಮುಚ್ಚಿರಲಿವೆ. ಆದರೆ, 9–12ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಶಾಲೆಗಳಿಗೆ ಕರೆಸಿಕೊಳ್ಳಲು ಶಿಕ್ಷಕರಿಗೆ ಅವಕಾಶ ನೀಡಲಾಗಿದೆ.

ವಿಮಾನದ ಮೂಲಕ ಮಹಾರಾಷ್ಟ್ರದಿಂದ ದೆಹಲಿಗೆ ಬರುವವರು ಕಡ್ಡಾಯವಾಗಿ ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರಬೇಕು, ನೆಗೆಟಿವ್‌ ರಿಪೋರ್ಟ್‌ ಇಲ್ಲದೆಯೇ ಬರುವವರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ದೆಹಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.

ಕೊರೊನಾ ವೈರಸ್ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಜಾರಿ ಮಾಡಲಾಗಿರುವ ಕ್ರಮಗಳು ಏಪ್ರಿಲ್‌ 30ರ ವರೆಗೂ ಮುಂದುವರಿಯಲಿದ್ದು, ಆ ವರೆಗೂ ಎಲ್ಲ ಶಾಲೆ, ಕಾಲೇಜುಗಳು, ತರಬೇತಿ ಸಂಸ್ಥೆಗಳನ್ನು ಮುಚ್ಚಿರುವಂತೆ ಆದೇಶಿಸಲಾಗಿದೆ.

ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಹಬ್ಬಗಳ ಆಚರಣೆಗಾಗಿ ಒಟ್ಟಿಗೆ ಸೇರುವುದನ್ನು ನಿಷೇಧಿಸಲಾಗಿದೆ. ಈಜುಕೊಳಲು ಕಾರ್ಯ ಸ್ಥಗಿತಗೊಳಿಸಲಿವೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಿಗಾಗಿ ತರಬೇತಿ ಪಡೆಯುತ್ತಿರುವವರಿಗೆ ಮಾತ್ರ ಈಜು ಅಭ್ಯಾಸ ಮಾಡಲು ಅವಕಾಶವಿರುತ್ತದೆ.

ಮದುವೆ ಸಮಾರಂಭಗಳಿಗೆ ಗರಿಷ್ಠ 50 ಜನರು ಹಾಗೂ ಅಂತ್ಯ ಸಂಸ್ಕಾರದಲ್ಲಿ 20 ಜನರು ಭಾಗಿಯಾಗಲು ಅವಕಾಶ ನೀಡಲಾಗಿದೆ. ಈ ಹಿಂದೆ, ಹೊರಾಂಗಣ ಕಾರ್ಯಕ್ರಮಗಳಲ್ಲಿ 200 ಜನರು ಹಾಗೂ ಹೊರಾಂಗಣ ಕಾರ್ಯಕ್ರಮಗಳಲ್ಲಿ 100 ಜನರು ಭಾಗಿಯಾಗಲು ಅವಕಾಶ ನೀಡಲಾಗಿತ್ತು.

ಬಾರ್‌ ಮತ್ತು ರೆಸ್ಟೊರೆಂಟ್‌ಗಳು, ಚಿತ್ರ ಮಂದಿರಗಳಲ್ಲಿ ಶೇ 50ರಷ್ಟು ಸೀಟುಗಳ ಭರ್ತಿಗೆ ಅವಕಾಶವಿದೆ. ದೆಹಲಿ ಮೆಟ್ರೊ ಹಾಗೂ ಡಿಟಿಸಿ ಮತ್ತು ಕ್ಲಸ್ಟರ್‌ ಬಸ್‌ಗಳ ಒಟ್ಟು ಸೀಟು ಸಾಮರ್ಥ್ಯದಲ್ಲಿ ಅರ್ಧದಷ್ಟು ಪ್ರಯಾಣಿಕರಿಗೆ ಮಾತ್ರ ಸಂಚಾರ ಮಾಡಲು ಅವಕಾಶವಿರುತ್ತದೆ.

ದೆಹಲಿ ಸರ್ಕಾರದ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಯಲಿದೆ. ಉಳಿದ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT