ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಶಾಸಕ ಸೋಮನಾಥ್‌ ಭಾರ್ತಿ ಬಂಧನ: ಶಾಸಕರ ಮುಖಕ್ಕೆ ಮಸಿ ಎರಚಿದ ಯುವಕ

Last Updated 11 ಜನವರಿ 2021, 15:11 IST
ಅಕ್ಷರ ಗಾತ್ರ

ಲಖನೌ: ಆಮ್‌ ಆದ್ಮಿ ಪಕ್ಷದ (ಎಎಪಿ) ದೆಹಲಿ ಶಾಸಕ ಸೋಮನಾಥ್‌ ಭಾರ್ತಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಉತ್ತರ ಪ್ರದೇಶ ಸರ್ಕಾರದ ಆರೋಗ್ಯ ಸೇವೆಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸೋಮನಾಥ್‌ ವಿರುದ್ಧ ಅಮೇಥಿಯಲ್ಲಿ ಪ್ರಕರಣ ದಾಖಲಾಗಿದೆ. ಅದರ ಆಧಾರದಲ್ಲಿ ಅವರನ್ನು ವಶಕ್ಕೆ ಪಡೆದು ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಅವರನ್ನು ಈಗ ಜೈಲಿನಲ್ಲಿ ಇರಿಸಲಾಗಿದೆ. ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಸೋಮನಾಥ್‌ ಅವರು ಸೋಮವಾರ ಬೆಳಿಗ್ಗೆ ರಾಯ್‌ಬರೇಲಿಯ ಆಸ್ಪತ್ರೆಯೊಂದಕ್ಕೆ ತೆರಳುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರೊಬ್ಬರು ಅವರ ಮೇಲೆ ಕಪ್ಪು ಮಸಿ (ಇಂಕ್‌) ಎರಚಿದ್ದಾರೆ. ಸೋಮನಾಥ್‌, ಬೆನ್ನಟ್ಟಿ ಹೋದರೂ ಶಾಯಿ ಎರಚಿದ ಯುವಕ ಕೈಗೆ ಸಿಗಲಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಉತ್ತರ ಪ್ರದೇಶದ ಆಸ್ಪತ್ರೆಗಳಲ್ಲಿ ಮನುಷ್ಯರ ಬದಲು ನಾಯಿಗಳ ಜನನವಾಗುತ್ತಿದೆ. ಇಲ್ಲಿನ ಆಸ್ಪತ್ರೆ ಹಾಗೂ ಶಾಲೆಗಳ ಸ್ಥಿತಿ ಶೋಚನೀಯವಾಗಿವೆ ಎಂದು ಸೋಮನಾಥ್‌ ಹೇಳಿದ್ದರು’ ಎಂದು ಮೂಲಗಳು ತಿಳಿಸಿವೆ.

ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ರಾಯ್‌ಬರೇಲಿ ಹಾಗೂ ಅಮೇಥಿ ಜಿಲ್ಲೆಗಳ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಲು ಸೋಮನಾಥ್‌ ನಿರ್ಧರಿಸಿದ್ದು, ಇದಕ್ಕಾಗಿ ಎರಡು ದಿನಗಳ ಉತ್ತರ ಪ್ರದೇಶ ಪ್ರವಾಸ ಕೈಗೊಂಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಎಪಿ ಈಗಾಗಲೇ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT