ಸೋಮವಾರ, ಜನವರಿ 17, 2022
20 °C

ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನಗಳ ಕ್ವಾರಂಟೈನ್‌ ಕಡ್ಡಾಯ: ಆರೋಗ್ಯ ಸಚಿವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತಕ್ಕೆ ಬಂದಿಳಿಯುವ ಅಂತರರಾಷ್ಟ್ರೀಯ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಕಾಲ ‘ಹೋಂ ಕ್ವಾರಂಟೈನ್‌’ಗೆ ಒಳಗಾಗಬೇಕು. ಎಂಟನೇ ದಿನ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ದೇಶದಲ್ಲಿ ಓಮೈಕ್ರಾನ್‌ ತಳಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯವು ಪ್ರಯಾಣಕ್ಕೆ ಸಂಬಂಧಿಸಿ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೊಸ ಮಾರ್ಗಸೂಚಿಗಳು ಜ.11ರಿಂದ ಜಾರಿಗೆ ಬರಲಿವೆ.

ಪ್ರಯಾಣಿಕರು ಆರ್‌ಟಿಪಿಸಿಆರ್‌ ವರದಿಯನ್ನು ‘ಏರ್ ಸುವಿಧಾ’ ಪೋರ್ಟ್‌ಲ್‌ಗೆ ಅಪ್‌ಲೋಡ್‌ ಮಾಡಬೇಕು. ಒಂದು ವೇಳೆ ವರದಿಯು ನೆಗೆಟಿವ್‌ ಆಗಿದ್ದರೆ, ಪ್ರಯಾಣಿಕರು ತಮ್ಮ ಆರೋಗ್ಯದ ಮೇಲೆ ಮುಂದಿನ ಏಳು ದಿನಗಳ ಕಾಲ ಸ್ವಯಂ ನಿಗಾ ವಹಿಸಬೇಕು ಎಂದೂ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಆರ್‌ಟಿಪಿಸಿಆರ್‌ ವರದಿ ‘ಪಾಸಿಟಿವ್‌’ ಆಗಿದ್ದರೆ, ಚಿಕಿತ್ಸೆ ಆರಂಭಿಸುವ ಜೊತೆಗೆ, ಅವರ ಗಂಟಲು, ಮೂಗಿನ ದ್ರವ ಮಾದರಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುವುದು.

‘ಹೆಚ್ಚು ಅಪಾಯ’ದ ದೇಶಗಳಿಂದ ಬರುವ ಪ್ರಯಾಣಿಕರಿಗೂ ಇವೇ ಮಾರ್ಗಸೂಚಿಗಳು ಅನ್ವಯಿಸುತ್ತವೆ. ಆದರೆ, ಇಲ್ಲಿ ಬಂದಿಳಿದ ನಂತರ ಪ್ರಯಾಣಿಕರು ಪರೀಕ್ಷೆಗೆ ಒಳಗಾಗುವ ಜೊತೆಗೆ, ಪರೀಕ್ಷಾ ವರದಿ ಬರುವವರೆಗೆ ವಿಮಾನ ನಿಲ್ದಾಣದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಇರುವುದು ಕಡ್ಡಾಯ.

150 ಕೋಟಿಗೂ ಅಧಿಕ ಡೋಸ್‌ ನೀಡಿಕೆ

ನವದೆಹಲಿ (ಪಿಟಿಐ) ‘ಶುಕ್ರವಾರದವರೆಗೆ ನೀಡಲಾದ ಕೋವಿಡ್‌ ಲಸಿಕೆಯ ಒಟ್ಟು ಡೋಸ್‌ಗಳು 150 ಕೋಟಿ ಗಡಿ ದಾಟಿದ್ದು, ಭಾರತ ಹೊಸ  ಮೈಲುಗಲ್ಲು ಸಾಧಿಸಿದಂತಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಡಿ ಆರೋಗ್ಯ ಕಾರ್ಯಕರ್ತರು ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದ್ದರಿಂದ ಈ ಐತಿಹಾಸಿಕ ಸಾಧನೆ ಸಾಧ್ಯವಾಯಿತು’ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ 21ರಂದು ದೇಶದಲ್ಲಿ ನೀಡಿದ ಲಸಿಕೆಯ ಪ್ರಮಾಣ 100 ಕೋಟಿ ಡೋಸ್‌ ಗಡಿ ದಾಟಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು