ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ | ಎರಡನೇ ಅವಧಿಗೆ ಯೋಗಿ ಮುಖ್ಯಮಂತ್ರಿ: ಇಂದು ಪ್ರಮಾಣವಚನ ಸ್ವೀಕಾರ

Last Updated 24 ಮಾರ್ಚ್ 2022, 19:03 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿದ ಯೋಗಿ ಆದಿತ್ಯನಾಥ ಅವರು ಶಾಸಕಾಂಗ ಪಕ್ಷದ ಸಭೆಯ ನಾಯಕರಾಗಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಉತ್ತರ ಪ್ರದೇಶದಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕೇಂದ್ರದ ವೀಕ್ಷಕರಾಗಿ ನೇಮಕರಾಗಿದ್ದ ಗೃಹಸಚಿವ ಅಮಿತ್ ಶಾ ಅವರು ಯೋಗಿ ಅವರ ಆಯ್ಕೆಯನ್ನು ಪ್ರಕಟಿಸಿದರು. ಸಹವೀಕ್ಷಕರಾಗಿದ್ದ ಹಿರಿಯ ಮುಖಂಡ ರಘುಬರ ದಾಸ್ ಅವರು ಉಪಸ್ಥಿತರಿದ್ದರು.

ಶುಕ್ರವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಯೋಗಿ ಅವರ ಜೊತೆಗೆ ಬಿಜೆಪಿ ಹಾಗೂ ಮಿತ್ರಪಕ್ಷಗಳ ಎಷ್ಟು ಶಾಸಕರು ಸಚಿವ ಸಂಪುಟ ಸೇರಲಿದ್ದಾರೆ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಕೇಂದ್ರೀಯ ನಾಯಕರ ಜೊತೆ ಮಾತುಕತೆ ನಡೆಯುತ್ತಿದೆ.

ಗೋರಖಪುರ ನಗರ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಯೋಗಿ ಅವರ ಹೆಸರನ್ನು ಪಕ್ಷದ ಹಿರಿಯ ನಾಯಕ ಸುರೇಶ್ ಕುಮಾರ್ ಖನ್ನಾ ಅವರು ಪ್ರಸ್ತಾಪಿಸಿದರು. ಈ ಪ್ರಸ್ತಾವವನ್ನು ಬಿಜೆಪಿ, ಅಪ್ನಾದಳ ಹಾಗೂ ನಿಷಾದ್ ಪಕ್ಷದ ಶಾಸಕರು ಅನುಮೋದಿಸಿದರು.

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಯೋಗಿ ಅವರು ರಾಜಭವನಕ್ಕೆ ತೆರಳಿದರು. 273 ಶಾಸಕರ ಪಟ್ಟಿಯನ್ನು ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್ ಅವರಿಗೆ ಹಸ್ತಾಂತರಿಸಿ, ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯೋಗಿ, ಚುನಾವಣೆಯಲ್ಲಿ ಪಕ್ಷದ ಗೆಲುವಿನ ಶ್ರೇಯವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದರು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ವಾಗ್ದಾನ ಮಾಡಿದರು.

37 ವರ್ಷಗಳ ಬಳಿಕ, ಎರಡನೇ ಅವಧಿಗೆ ಆಯ್ಕೆಯಾಗುತ್ತಿರುವ ಮೊದಲ ಮುಖ್ಯಮಂತ್ರಿ ಇವರು.

*
ಅಂಬಾನಿ, ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕರಿಗೆ ಆಹ್ವಾನ
ಆದಿತ್ಯನಾಥ ಅವರು ಲಖನೌದ ಇಕಾನಾ ಮೈದಾನದಲ್ಲಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ನಾಯಕರು ಭಾಗಿಯಾಗಲಿದ್ದಾರೆ. ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ.

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ಇತರ 60 ಮಂದಿ ಉದ್ಯಮಿಗಳಿಗೆ ಆಹ್ವಾನ ನೀಡಲಾಗಿದೆ.ಯೋಗಗುರು ಬಾಬಾ ರಾಮದೇವ್, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಟ ಅನುಪಮ್ ಖೇರ್ ಭಾಗಿಯಾಗಲಿದ್ದಾರೆ.ಯೋಗಿ ಅವರು ಅಯೋಧ್ಯೆ, ಮಥುರಾ, ವಾರಾಣಸಿಯ 50ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ವೈಯಕ್ತಿಕವಾಗಿ ಆಹ್ವಾನಿಸಿದ್ದಾರೆ. ಅಖಿಲೇಶ್ ಯಾದವ್, ಜಯಂತ್ ಚೌಧರಿ ಅವರು ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

ಮೈದಾನವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಮೋದಿ, ಶಾ, ಆದಿತ್ಯನಾಥ ಅವರ ಕಟೌಟ್‌ಗಳನ್ನು ಅಳವಡಿಸಲಾಗಿದೆ. ಮೈದಾನವು 50 ಸಾವಿರ ಜನರ ಸಾಮರ್ಥ್ಯ ಹೊಂದಿದೆ. ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಸಂಜೆ 4 ಗಂಟೆ ಬಳಿಕ ಸಮಾರಂಭ ನಡೆಯಲಿದೆ.

*

ಕಾರ್ಯಕ್ರಮಕ್ಕೆ ಬೊಮ್ಮಾಯಿ
ಬೆಂಗಳೂರು:
ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಅವರು ಪ್ರಮಾಣ ಸ್ವೀಕರಿಸುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಬೊಮ್ಮಾಯಿ ಶುಕ್ರವಾರ ಬೆಳಿಗ್ಗೆ ಲಖನೌಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT