ಶುಕ್ರವಾರ, ಆಗಸ್ಟ್ 12, 2022
21 °C

ಅಫ್ಗನ್ ಮಣ್ಣು ಭಾರತ ವಿರೋಧಿ ಚಟುವಟಿಕೆಗಳಿಗೆ ಎಂದಿಗೂ ಬಳಕೆಯಾಗಬಾರದು: ಜೈಶಂಕರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಅಫ್ಗಾನಿಸ್ತಾನದ ಮಣ್ಣು ಭಾರತ ವಿರೋಧಿ ಚಟುವಟಿಕೆಗಳಿಗೆ ಎಂದಿಗೂ ಬಳಕೆಯಾಗಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ತಿಳಿಸಿದ್ದಾರೆ.

ಕತಾರ್‌ ರಾಷ್ಟ್ರದ ರಾಜಧಾನಿ ದೋಹಾದಲ್ಲಿ ಅಫ್ಗಾನಿಸ್ತಾನ ಹಾಗೂ ತಾಲಿಬಾನ್‌ ನಡೆಸಿದ ಅಫ್ಗನ್ ಶಾಂತಿ ಮಾತುಕತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಫ್ಗಾನಿಸ್ತಾನವು ಶಾಂತಿ ಸ್ಥಾಪನೆ ಪ್ರಕ್ರಿಯೆಯಲ್ಲಿ ಮುಂದಾಳುವಾಗಿರಬೇಕು ಮತ್ತು ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಹಿತಾಸಕ್ತಿಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಪುನರುಚ್ಚರಿಸಿದ್ದಾರೆ.

ಮುಂದುವರಿದು, ‘ಅಫ್ಗಾನಿಸ್ತಾನದ ಮಣ್ಣನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಯಾವತ್ತೂ ಬಳಸಬಾರದು ಎಂಬುದು ನಮ್ಮ ನಿರೀಕ್ಷೆ’ ಎಂದಿದ್ದಾರೆ. ಭಾರತವು ಅಫ್ಗಾನಿಸ್ತಾನದ ಪ್ರಮುಖ ಅಭಿವೃದ್ಧಿ ಪಾಲುದಾರ ಎಂದು ಒತ್ತಿಹೇಳಿದ ಅವರು, ಇತ್ತೀಚಿನ ವರ್ಷಗಳಲ್ಲಿ ಯುದ್ಧದಿಂದ ಹಾನಿಗೊಳಗಾದ ಈ ದೇಶಕ್ಕೆ ಭಾರತವು ಹತ್ತು ಲಕ್ಷ ಟನ್‌ನಷ್ಟು ಆಹಾರಧಾನ್ಯಗಳನ್ನು ಪೂರೈಸಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಸಚಿವ, ‘ದೋಹಾದಲ್ಲಿ ನಡೆದ ಅಫ್ಗನ್ ಶಾಂತಿ ಮಾತುಕತೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದೆ. ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಯು ಅಫ್ಗಾನಿಸ್ತಾನದ ಮುಂದಾಳತ್ವದಲ್ಲಿ, ಅಫ್ಗನ್ ಒಡೆತನದಲ್ಲಿ, ಅಫ್ಗನ್ ನಿಯಂತ್ರಣದಲ್ಲಿರಲಿ. ರಾಷ್ಟ್ರೀಯ ಸಾರ್ವಭೌಮತೆ ಮತ್ತು ಅಫ್ಗಾನಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಮಾನವ ಹಕ್ಕು ಹಾಗೂ ಪ್ರಜಾಪ್ರಭುತ್ವನ್ನು ಉತ್ತೇಜಿಸಬೇಕು. ಅಲ್ಪಸಂಖ್ಯಾತರು, ದುರ್ಬಲರು ಮತ್ತು ಮಹಿಳೆಯರ ಹಿತಾಸಕ್ತಿಯನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ದೇಶದಾದ್ಯಂತ ಹಿಂಸಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು’ ಎಂದು ತಿಳಿಸಿದ್ದಾರೆ.

ಅಫ್ಗಾನಿಸ್ತಾನ ನಾಗರಿಕರು ವೈದ್ಯಕೀಯ ಚಿಕಿತ್ಸೆ ಸಲುವಾಗಿ ಭಾರತಕ್ಕೆ ಪ್ರಯಾಣಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದೂ ಹೇಳಿರುವ ಜೈಶಂಕರ್‌, ‘ಇದು ಅಫ್ಗನ್ ದೇಶದ ಕಲ್ಯಾಣ, ಸಮೃದ್ಧಿ ಮತ್ತು ಸ್ಥಿರತೆಗಾಗಿ ಭಾರತ ಹೊಂದಿರುವ ಆಳವಾದ ಬದ್ಧತೆಗೆ ಉದಾಹರಣೆಯಾಗಿದೆ’ ಎಂದು ತಿಳಿಸಿದ್ದಾರೆ.

‘ನಮ್ಮ ಜನರ ಸ್ನೇಹವು ಅಫ್ಗಾನಿಸ್ತಾನದೊಂದಿಗೆ ನಾವು ಹೊಂದಿರುವ ಐತಿಹಾಸಿಕ ಸಂಬಂಧಕ್ಕೆ ಸಾಕ್ಷಿಯಾಗಿದೆ. ಇದು ಪ್ರಬಲ ಮತ್ತು ಸ್ಥಿರವಾದದ್ದಾಗಿದೆ. ನಾವು ಯಾವಾಗಲೂ ಉತ್ತಮ ನೆರೆ–ಹೊರೆಯವರಾಗಿದ್ದು, ಯಾವಾಗಲೂ ಹಿಗೆಯೇ ಇರುತ್ತೇವೆ’ ಎಂದಿದ್ದಾರೆ.

ಎರಡು ದಶಕದ ಯುದ್ಧದ ಬಳಿಕ ಶಾಂತಿ ಮಾತುಕತೆ
ಸುಮಾರು ಎರಡು ದಶಕಗಳ ಯುದ್ಧದ ಬಳಿಕ ಶಾಂತಿ, ಸ್ಥಿರತೆ ಸ್ಥಾಪನೆ ಸಲುವಾಗಿ ಅಫ್ಗಾನಿಸ್ತಾನ ಸರ್ಕಾರ ಮತ್ತು ತಾಲಿಬಾನ್‌ ದೋಹಾದಲ್ಲಿ ಇಂದು ಮಾತುಕತೆ ನಡೆಸಿದವು.

ಮಾತುಕತೆ ವೇಳೆ ಅಫ್ಗಾನ್ ಸರ್ಕಾರದ ಪರ 21 ಸದಸ್ಯರ ಸಮಾಲೋಚನಾ ತಂಡದ ನೇತೃತ್ವವನ್ನು ಮಾಜಿ ಗುಪ್ತಚರ ಮುಖ್ಯಸ್ಥ ಮಸೂಮ್ ಸ್ಟಾನೆಕ್‌ಜೈ ವಹಿಸಿದ್ದರು. ಇನ್ನೊಂದೆಡೆ ತಾಲಿಬಾನ್ ಪಡೆಯ ನೇತೃತ್ವವನ್ನು ಸಶಸ್ತ್ರ ಗುಂಪಿನ ಮುಖ್ಯ ನ್ಯಾಯಾದೀಶ ಹಾಗೂ ಗುಂಪಿನ ಮುಖ್ಯಸ್ಥ ಹೈಬತುಲ್ಲಾ ಅಖುನ್‌ಜಾದಾ ಅವರ ಆಪ್ತ ಮಾವ್ಲವಿ ಅಬ್ದುಲ್ ಹಕೀಮ್ ವಹಿಸಿದ್ದರು ಎಂದು ಅಲ್‌ ಜಜೀರಾ ವರದಿ ಮಾಡಿದೆ.

ಶಾಂತಿ ಮಾತುಕತೆಗಳು ಮಾರ್ಚ್‌ನಲ್ಲಿಯೇ ನಡೆಯುವ ನಿರೀಕ್ಷೆಯಿತ್ತು. ಆದರೆ, ಫೆಬ್ರವರಿಯಲ್ಲಿ ಯುಎಸ್‌ ಮತ್ತು ತಾಲಿಬಾನ್ ನಡುವೆ ನಡೆದ ಮಾತುಕತೆಯ ಭಾಗವಾಗಿ ಕೈದಿಗಳ ವಿನಿಮಯ ಒಪ್ಪಂದದಿಂದಾಗಿ ಪದೇ ಪದೇ ವಿಳಂಬವಾಗಿತ್ತು.

ಒಪ್ಪಂದದ ಪ್ರಕಾರ, 5 ಸಾವಿರ ತಾಲಿಬಾನ್‌ ಕೈದಿಗಳನ್ನು ಬಿಡುಗಡೆ ಮಾಡಲು ಅಫ್ಗನ್ ಸರ್ಕಾರ ಮತ್ತು 1 ಸಾವಿರ ಅಫ್ಗಾನ್ ಸೈನಿಕರನ್ನು ಬಿಡುಗಡೆ ಮಾಡಲು ತಾಲಿಬಾನ್‌ ಒಪ್ಪಿಕೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು