ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಹೋರಾಟ| 3 ಗಡಿಗಳಲ್ಲಿ ಟ್ರ್ಯಾಕ್ಟರ್‌ಗಳ ಪ್ರವೇಶಕ್ಕೆ ಅನುಮತಿ

ಜಾಥಾ ನಡೆಸಲು ಪ್ರತಿಭಟನನಿರತ ರೈತರಿಗೆ ಅನುಮತಿ
Last Updated 24 ಜನವರಿ 2021, 18:55 IST
ಅಕ್ಷರ ಗಾತ್ರ

ನವದೆಹಲಿ:ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಟ್ರ್ಯಾಕ್ಟರ್‌ ಜಾಥಾ ನಡೆಸಲು ಪ್ರತಿಭಟನನಿರತ ರೈತರಿಗೆ ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ, ಗಣರಾಜ್ಯೋತ್ಸವ ಪಥಸಂಚಲನ ಪೂರ್ಣಗೊಂಡ ಬಳಿಕವಷ್ಟೇ ಟ್ರ್ಯಾಕ್ಟರ್‌ ಗಳು ದೆಹಲಿ ಪ್ರವೇಶಿಸಲು ಅವಕಾಶ ಸಿಗಲಿದೆ. ಜಾಥಾಕ್ಕೆ ಭಾರಿ ಬಂದೋಬಸ್ತ್‌ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆದರೆ ಆ ಸ್ಥಳಕ್ಕೆ ಅತ್ಯಂತ ತ್ವರಿತವಾಗಿ ತಲುಪಲು ಸಾಧ್ಯವಾಗುವಂತೆ ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿ ಸಜ್ಜಾಗಿ ಇರಬೇಕು ಎಂದು ಸೂಚಿಸಲಾಗಿದೆ.ಟ್ರ್ಯಾಕ್ಟರ್ ಮೆರವಣಿಗೆಯು ಕೇಂದ್ರ ದೆಹಲಿ ಹಾಗೂ ಗಣರಾಜ್ಯೋತ್ಸವ ಪಥಸಂಚಲನ ಮಾರ್ಗದಲ್ಲಿ ಸಂಚರಿಸುವಂತಿಲ್ಲ.

‘ರೈತರಿಗೆ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಗಳಿಂದ ದೆಹಲಿಗೆ ಪ್ರವೇಶಿ ಸಲು ಅವಕಾಶ ನೀಡಿದ್ದೇವೆ. ಜನವರಿ 26ರಂದು ಗಡಿಯಲ್ಲಿರುವ ಬ್ಯಾರಿಕೇಡ್‌ ತೆಗೆದುಹಾಕುತ್ತೇವೆ’ ಎಂದು ಪೊಲೀಸ್ ಗುಪ್ತಚರ ವಿಭಾಗದ ವಿಶೇಷ ಆಯುಕ್ತ ದೀಪೇಂದ್ರ ಪಾಠಕ್ ತಿಳಿಸಿದರು.

ಪ್ರತಿಭಟನಕಾರರನ್ನು ಪ್ರಚೋದಿ ಸುವ ಪ್ರಯತ್ನಗಳ ಬಗ್ಗೆ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಂತಹ ಸಾಧನಗಳನ್ನು ಬಳಸಿಕೊಂಡು ಕೆಲವು ದುಷ್ಕರ್ಮಿಗಳು ರ‍್ಯಾಲಿಯಲ್ಲಿ ಗೊಂದಲ ಸೃಷ್ಟಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಜನವರಿ 13ರಿಂದ 18ರ ಅವಧಿಯಲ್ಲಿ ಪಾಕಿಸ್ತಾನದಲ್ಲಿ 308 ಟ್ವಿಟರ್ ಖಾತೆಗಳನ್ನು ತೆರೆಯಲಾಗಿದೆ. ಸಂದೇಶಗಳನ್ನು ಪೋಸ್ಟ್ ಮಾಡುವ ಮೂಲಕ ರೈತರಲ್ಲಿ ಗೊಂದಲ ಸೃಷ್ಟಿಸು ವುದು ಇದರ ಉದ್ದೇಶ ಎಂದಿದ್ದಾರೆ.

‘ರ‍್ಯಾಲಿಗೆ ಅನುಮತಿ ದೊರೆತಿದೆ. ಮೊದಲೇ ಹೇಳಿದಂತೆ ‘ಕಿಸಾನ್ ಗಣತಂತ್ರ ಮೆರವಣಿಗೆ’ ಶಾಂತಿಯುತವಾಗಿರಲಿದೆ’ ಎಂದು ರೈತ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದರು.

ಬೆಂಗಳೂರಿನಲ್ಲಿಯೂ ನಾಳೆ ಟ್ರ್ಯಾಕ್ಟರ್‌ ಪರೇಡ್‌

ಬೆಂಗಳೂರು: ‘ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸು ತ್ತಿರುವ ಹೋರಾಟ ಬೆಂಬಲಿಸಿ ಗಣರಾಜ್ಯೋತ್ಸವ ದಿನ (ಜ. 26) ಬೆಂಗಳೂರಿನಲ್ಲಿಯೂ ಬೃಹತ್‌ ಟ್ರ್ಯಾಕ್ಟರ್‌ ರ‍್ಯಾಲಿ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ 25 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಗಣರಾಜ್ಯೋತ್ಸವ ದಂದು ಮುಖ್ಯಮಂತ್ರಿ ಕಾರ್ಯಕ್ರಮ ಮುಗಿದ ಬಳಿಕ ಬೆಂಗಳೂರು ಮತ್ತು ನೆಲಮಂಗಲದ ನಡುವೆ ಇರುವ ನೈಸ್ ಜಂಕ್ಷನ್‌ನಿಂದ ನಮ್ಮ ಪರೇಡ್ ಆರಂಭವಾಗಲಿದೆ. ಒಂದು ವೇಳೆ ಹೆದ್ದಾರಿಯಲ್ಲಿ ತಡೆಯುವ ಪ್ರಯತ್ನ ನಡೆಸಿದರೆ ಆ ಹೆದ್ದಾರಿಗಳು ಬಂದ್ ಆಗಲಿವೆ’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರೈತರ ಪರೇಡ್‌ಗೆ ಸಹಕಾರ: ಜನವರಿ 26ರಂದು ರೈತರು ಶಾಂತರೀತಿ ಯಲ್ಲಿ ಪ್ರತಿಭಟಿಸಲು ಅವಕಾಶ ನೀಡಲಾಗುವುದು. ಸರ್ಕಾರ ರೈತಪರವಾಗಿದೆ ಎಂದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ ಶಿವಮೊಗ್ಗದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT