ನವದೆಹಲಿ: ದೆಹಲಿ ಬಜೆಟ್‌ಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದ ಕೆಲವೇ ಹೊತ್ತಿನಲ್ಲಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ದೊಡ್ಡಣ್ಣ' ಎಂದು ಕರೆದಿದ್ದು, ಜೊತೆಯಾಗಿ ಕೆಲಸ ಮಾಡಲು ಬಯಸುವುದಾಗಿ ತಿಳಿಸಿದ್ದಾರೆ.
ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವನ್ನುದ್ದೇಶಿಸಿ ಮಾತನಾಡಿರುವ ಕೇಜ್ರಿವಾಲ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಯಾವುದೇ ತಿಕ್ಕಾಟ ಇಲ್ಲದೇ ಇದ್ದಿದ್ದರೆ, ದೆಹಲಿಯು ಹತ್ತು ಪಟ್ಟು ಅಧಿಕ ಪ್ರಗತಿ ಕಾಣುತ್ತಿತ್ತು ಎಂದಿದ್ದಾರೆ.
'ದೆಹಲಿ ಸರ್ಕಾರವು ಕೆಲಸ ಮಾಡಲು ಬಯಸುತ್ತದೆ. ಜಗಳವಾಡುವುದಕ್ಕಲ್ಲ. ನಾವು ಹೋರಾಟ ನಡೆಸಿ ಸುಸ್ತಾಗಿದ್ದೇವೆ. ಅದು ಯಾರಿಗೂ ಉಪಕಾರಿಯಲ್ಲ. ನಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ. ನಮಗೆ ಸೆಣಸಾಟ ಬೇಕಾಗಿಲ್ಲ' ಎಂದು ಹೇಳಿದ್ದಾರೆ.
ಮುಂದುವರಿದು, ಪ್ರಧಾನಿ ಮೋದಿ ಅವರು ದೆಹಲಿಯನ್ನು ಗೆಲ್ಲಬೇಕೆಂದು ಬಯಸುವುದಾದರೆ, ಅವರು ಮೊದಲು ಇಲ್ಲಿನ ಜನರ ಹೃದಯ ಗೆಲ್ಲಬೇಕಾಗುತ್ತದೆ. 'ಇದೇ ಅವರಿಗೆ ನನ್ನ ಮಂತ್ರ' ಎಂದಿದ್ದಾರೆ.
'ನೀವು (ಮೋದಿಯವರನ್ನು ಉದ್ದೇಶಿಸಿ) ದೊಡ್ಡಣ್ಣ ಮತ್ತು ನಾನು ತಮ್ಮ. ನೀವು ನನಗೆ ಬೆಂಬಲ ನೀಡಿದರೆ ನಾನೂ ನಿಮಗೆ ಬೆಂಬಲ ಕೊಡುತ್ತೇನೆ. ನೀವು ನಿಮ್ಮ ಕಿರಿಯ ಸಹೋದರನ ಹೃದಯ ಗೆಲ್ಲಲು ಬಯಸುವುದಾದರೆ, ಅವನನ್ನು ಪ್ರೀತಿಸಿ' ಎಂದು ಕಿವಿಮಾತು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.