ಸೋಮವಾರ, ಏಪ್ರಿಲ್ 12, 2021
31 °C

ವಾಯು ಮಾಲಿನ್ಯ: ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ –ಎನ್‌ಜಿಟಿಗೆ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಟ್ಟಡ ಕಾಮಗಾರಿ ಮತ್ತು ಕಟ್ಟಡ ನೆಲಸಮದ ತ್ಯಾಜ್ಯ ಸಾಗಣೆಯಿಂದ ಹಾಗೂ ತ್ಯಾಜ್ಯಕ್ಕೆ ಬೆಂಕಿ ಇಡುವುದರಿಂದ ಉಂಟಾಗುವ ಮಾಲಿನ್ಯದ ಪ್ರಮಾಣವನ್ನು ಪರಿಶೀಲಿಸುವ ಕಾರ್ಯ ಜಾರಿಯಲ್ಲಿದೆ ಎಂದು ರಾಜ್ಯ ಸರ್ಕಾರವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಗೆ ಮಾಹಿತಿ ನೀಡಿದೆ.

ವಾಯು ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಲಾದ ಕಟ್ಟುನಿಟ್ಟಿನ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಹಸಿರು ಪೀಠ ಎಲ್ಲ ರಾಜ್ಯ ಸರ್ಕಾರಗಳಿಗೂ ನೀಡಿದ್ದ ಸೂಚನೆಯ ಮೇರೆಗೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಈ ಮಾಹಿತಿ ಇರುವ ಹೇಳಿಕೆ ಸಲ್ಲಿಸಿದೆ.

ಕಟ್ಟಡ ಕಾಮಗಾರಿಯಿಂದ ಉಂಟಾಗುವ ಧೂಳು ಮತ್ತು ಮಾಲಿನ್ಯ ನಿವಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಸರ್ಕಾರದ ಪರ ಹಸಿರು ಪೀಠಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ವಿವರಿಸಿದೆ.

ಬಿಬಿಎಂಪಿ ವತಿಯಿಂದ ಮಾಲಿನ್ಯ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಮಂಡಳಿಯ ಗಾಳಿ ಗುಣಮಟ್ಟ ಉಸ್ತುವಾರಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಪೌರಾಡಳಿತ ನಿರ್ದೇಶನಾಲಯವು ರಾಜ್ಯದ ಎಲ್ಲ ಪಾಲಿಕೆ, ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯ್ತಿಗಳಿಗೂ ಮಾಲಿನ್ಯ ನಿಯಂತ್ರಣ ಕ್ರಮ ಅನುಸರಿಸಲು ಸೂಚಿಸಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಈ ಸಂಬಂಧದ ವರದಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಾಲಿನ್ಯ ನಿಯಂತ್ರಣದ ಹಿನ್ನೆಲೆಯಲ್ಲಿ ರಸ್ತೆ ಪಕ್ಕದಲ್ಲಿ ಮತ್ತು ರಸ್ತೆ ವಿಭಜಕದ ನಡುವಿನ ಜಾಗದಲ್ಲಿ ಸಸಿ ನೆಡುವಂತೆಯೂ ನಿರ್ದೇಶನಾಲಯ ಸೂಚಿಸಿದೆ. ಯಾವುದೇ ರೀತಿಯ ತ್ಯಾಜ್ಯಕ್ಕೆ ಬೆಂಕಿ ಇಡುವುದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕೃಷಿ ತ್ಯಾಜ್ಯ ಸುಡದಂತೆ ತಡೆಯಲೆಂದೇ ತ್ಯಾಜ್ಯವನ್ನು ಗೊಬ್ಬರ ಮತ್ತಿತರ ಉಪ ಉತ್ಪನ್ನವನ್ನಾಗಿ ಪರಿವರ್ತಿಸಲು ಕೃಷಿ ಇಲಾಖೆ ನೆರವು ನೀಡುತ್ತಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು ನಗರವೊಂದರಲ್ಲೇ ಸಸಿಗಳಿಗೆ ನೀರು ಸಿಂಪರಣೆ ಯಂತ್ರ ಖರೀದಿಗೆ, ಹಸಿರೀಕರಣಕ್ಕೆ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿಯಂತಹ ಚಟುವಟಿಕೆಗಳಿಗಾಗಿ ₹ 2.22 ಕೋಟಿ ಅನುದಾನವನ್ನು ಬಿಬಿಎಂಪಿಗೆ ಮಂಜೂರು ಮಾಡಲಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಈ ಅನುದಾನ ಬಳಕೆಗಾಗಿಯೇ ಕೈಗೊಳ್ಳಲಾದ ಕಾಮಗಾರಿಯ ಪಟ್ಟಿಯನ್ನು ಬಿಬಿಎಂಪಿಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದೆ. ಮಾಲಿನ್ಯ ನಿಯಂತ್ರಣ, ನಗರದ ಹಸಿರೀಕರಣ ಮತ್ತು ಸಸಿ ವಿತರಣಾ ಆಂದೋಲನವನ್ನೂ ಹಮ್ಮಿಕೊಳ್ಳಲಾಗಿದೆ. ಸಂಸ್ಕರಿಸಲಾದ ಒಳಚರಂಡಿಯ ನೀರು ಬಳಸಿ ಕಾರಂಜಿ ನಿರ್ಮಿಸುವುದಕ್ಕೂ, ಸ್ವಚ್ಛತೆಗೆ ಅಗತ್ಯವಿರುವ ಯಂತ್ರೋಪಕರಣ, ವಾಹನಗಳ ಖರೀದಿಗೂ ಇದೇ ಅನುದಾನ ಬಳಸಲಾಗುತ್ತದೆ ಎಂದು ವಿವರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು