ಭಾನುವಾರ, ಜುಲೈ 3, 2022
27 °C

ಉತ್ತರ ಪ್ರದೇಶ ವಿರೋಧ ಪಕ್ಷದ ನಾಯಕನಾಗಿ ಅಖಿಲೇಶ್‌ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್‌ ಅವರು ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಶನಿವಾರ ಆಯ್ಕೆ ಆದರು.

ಶನಿವಾರ ನಡೆದ ಎಸ್‌ಪಿ ಶಾಸಕರ ಸಭೆಯಲ್ಲಿ ಅಖಿಲೇಶ್‌ ಅವರನ್ನು ಎಸ್‌ಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಕುರಿತು ಉತ್ತರ ಪ್ರದೇಶ ಎಸ್‌ಪಿ ಅಧ್ಯಕ್ಷ ನರೇಶ್‌ ಉತ್ತಮ್‌ ಅವರು ಘೋಷಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅಖಿಲೇಶ್‌ ಅವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಆಗಿರುವುದನ್ನು ಘೋಷಿಸಲಾಯಿತು. 

ಉತ್ತರ ಪ್ರದೇಶ ವಿಧಾನಸಭೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ಕುಮಾರ್‌ ದುಬೆ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಅಖಿಲೇಶ್‌ ಯಾದವ್‌ ಅವರನ್ನು ನೇಮಿಸಲಾಗಿದೆ. ಮಾರ್ಚ್‌ 26ರಿಂದಲೇ ಅಖಿಲೇಶ್‌ ಅವರ ಕರ್ತವ್ಯ ಅವಧಿ ಜಾರಿಗೆ ಬಂದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕರ್ಹಾಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಖಿಲೇಶ್‌ ಅವರು, ಬಿಜೆಪಿ ಸಂಸದ ಎಸ್‌.ಪಿ. ಬಘೆಲ್‌ ಎದುರು ಭಾರಿ ಅಂತರದಿಂದ ಗೆದ್ದಿದ್ದರು. ರಾಜ್ಯ ರಾಜಕಾರಣದಲ್ಲಿ ಉಳಿಯುವ ಸಲುವಾಗಿ ಆಜಂಗಡದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

‘ಅಖಿಲೇಶ್‌ ಅವರ ನಾಯಕತ್ವದಲ್ಲಿ ಸಮಾಜವಾದಿ ಪಕ್ಷವು ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿದೆ. ಸರ್ಕಾರದ ತಪ್ಪು ಮಾಹಿತಿ ಮತ್ತು ತಪ್ಪು ನೀತಿಗಳನ್ನು ವಿರೋಧಿಸಲಿದೆ’ ಎಂದು ನರೇಶ್‌ ಉತ್ತಮ್‌ ಹೇಳಿದರು.

ಶಿವಪಾಲ್‌ ಯಾದವ್‌ಗೆ ಆಹ್ವಾನ ಇಲ್ಲ
ಸಮಾಜವಾದಿ ಪಕ್ಷದ ಶಾಸಕಾಂಗ ಪಕ್ಷದ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಎಸ್‌ಪಿ ಮಿತ್ರಪಕ್ಷವಾದ ಪ್ರಗತಿಶೀಲ ಸಮಾಜವಾದಿ ಪಕ್ಷ–ಲೋಹಿಯ (ಪಿಎಸ್‌ಪಿ–ಎಲ್‌)  ಮುಖ್ಯಸ್ಥ, ಅಖಿಲೇಶ್‌ ಯಾದವ್‌ ಅವರ ಚಿಕ್ಕಪ್ಪ ಶಿವಪಾಲ್‌ ಸಿಂಗ್‌ ಯಾದವ್‌ ಅವರು ಆರೋಪಿಸಿದ್ದಾರೆ.

‘ಸಭೆಯ ಕುರಿತು ನನಗೆ ಮಾಹಿತಿ ಇಲ್ಲ. ಎಸ್‌ಪಿ ನಾಯಕರನ್ನು ಸಂಪರ್ಕಿಸಲು ನಾನು ಪ್ರಯತ್ನಿಸಿದೆ. ಆದರೂ ನನಗೆ ಯಾವುದೇ ಮಾಹಿತಿ ದೊರಕಲಿಲ್ಲ’ ಎಂದು ಅವರು ಮಾಧ್ಯಮಗಳ ಎದುರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಎಸ್‌ಪಿ ಅಧ್ಯಕ್ಷ ನರೇಶ್‌ ಉತ್ತಮ್‌, ಶನಿವಾರ ನಡೆದ ಸಭೆಗೆ ಎಸ್‌ಪಿ ಶಾಸಕರನ್ನು ಮಾತ್ರ ಆಹ್ವಾನಿಸಲಾಗಿತ್ತು. ಶಿವಪಾಲ್‌ ಅವರು ಸ್ವಂತ ಪಕ್ಷವನ್ನು ಹೊಂದಿದ್ದಾರೆ. ಮಾರ್ಚ್‌ 28ರಂದು ಮತ್ತೊಂದು ಸಭೆ ಆಯೋಜಿಸಲಾಗಿದೆ. ಆ ಸಭೆಗೆ ಎಸ್‌ಪಿಯ ಎಲ್ಲಾ ಮಿತ್ರಪಕ್ಷಗಳನ್ನೂ ಆಹ್ವಾನಿಸಲಾಗುತ್ತದೆ. ಆಗ ಶಿವಪಾಲ್‌ ಅವರಿಗೂ ಆಹ್ವಾನ ಇರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು