ಮಂಗಳವಾರ, ಜೂನ್ 22, 2021
23 °C

ಜ.3ಕ್ಕೆ ಬೆಂಬಲಿಗರ ಜೊತೆ ಅಳಗಿರಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಡಿಎಂಕೆ ಸಂಸ್ಥಾಪಕ, ದಿವಂಗತ ಎಂ.ಕರುಣಾನಿಧಿಯವರ ಪುತ್ರ ಎಂ.ಕೆ.ಅಳಗಿರಿ ಅವರು ಜನವರಿ 3 ರಂದು ಮದುರೈಯಲ್ಲಿ ಬೆಂಬಲಿಗರ ಸಭೆ ನಡೆಸಲು ನಿರ್ಧರಿಸಿದ್ದಾರೆ.

ಗೋಪಾಲಪುರಂನಲ್ಲಿರುವ ನಿವಾಸದಲ್ಲಿ ತಮ್ಮ ತಾಯಿ ದಯಾಳು ಅಮ್ಮಾಲ್‌ ಅವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜನವರಿ 3ರಂದು ಬೆಂಬಲಿಗರ ಸಭೆ ಕರೆದಿದ್ದೇನೆ. ಅವರೊಂದಿಗೆ ಚರ್ಚಿಸಿ ನನ್ನ ರಾಜಕೀಯ ನಡೆಯನ್ನು ನಿರ್ಧರಿಸಲಿದ್ದೇನೆ’ ಎಂದು ಹೇಳಿದ್ದಾರೆ.

ಹೊಸ ರಾಜಕೀಯ ಪಕ್ಷವನ್ನು ಆರಂಭಿಸುತ್ತೀರಾ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಬೆಂಬಲಿಗರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ’ ಎಂದರು.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪರ ಕೆಲಸ ಮಾಡುವ ಯೋಚನೆ ಏನಾದರೂ ಇದೆಯೇ ಎಂಬ ಪ್ರಶ್ನೆಗೆ ನಕಾರಾತ್ಮಾಕ ಪ್ರತಿಕ್ರಿಯೆ ನೀಡಿದರು.

‘ನಟ ರಜನಿಕಾಂತ್‌ ಜನ್ಮದಿನದಂದು ಅವರನ್ನು ಭೇಟಿಯಾಗಲು ಆಗಿರಲಿಲ್ಲ. ಹೀಗಾಗಿ ಶೀಘ್ರವೇ ಅವರನ್ನು ಭೇಟಿಯಾಗಬೇಕೆಂದುಕೊಂಡಿದ್ದೇನೆ’ ಎಂದೂ ಅವರು ತಿಳಿಸಿದ್ದಾರೆ.

ಈ ಹಿಂದೆ ಕೇಂದ್ರ ಸಚಿವರಾಗಿದ್ದ ಅಳಗಿರಿಯವರನ್ನು 2014ರಲ್ಲಿ ಅವರ ತಂದೆಯೇ ಪಕ್ಷದಿಂದ ಉಚ್ಛಾಟಿಸಿದ್ದರು. ಕರುಣಾನಿಧಿಯವರು ಎಂ.ಕೆ.ಸ್ಟಾಲಿನ್‌ ಅವರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ಪಕ್ಷದಲ್ಲಿ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಕಲ್ಪಿಸಿದ್ದರಿಂದ ಸಹೋದರರ ನಡುವೆ ವೈರತ್ವ ಬೆಳೆದಿತ್ತು.

ಈ ಬಾರಿಯ ಚುನಾವಣೆಯಲ್ಲಿ ಸಹೋದರನನ್ನು ಹಣಿಯಲು ನಿರ್ಧರಿಸಿರುವ ಅಳಗಿರಿ, ಸ್ವಂತ ಪಕ್ಷ ಸ್ಥಾಪಿಸಿ ಅದನ್ನು ಬಿಜೆಪಿ ಜೊತೆ ವಿಲೀನ ಮಾಡುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಇದನ್ನು ಅವರು ಅಲ್ಲಗಳೆದಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು