ಮಂಗಳವಾರ, ಮಾರ್ಚ್ 28, 2023
26 °C
ಸರ್ಕಾರದ ನಿಯೋಗದಿಂದ ದ್ರೌಪದಿ ಮುರ್ಮು ಭೇಟಿ: ಸದನದಲ್ಲಿ ನಡೆದ ಬೆಳವಣಿಗೆ ಕುರಿತು ಮಾಹಿತಿ

ತಮಿಳುನಾಡು ಸರ್ಕಾರದೊಂದಿಗೆ ತಿಕ್ಕಾಟ: ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ಹಾಗೂ ರಾಜ್ಯಪಾಲ ಆರ್‌.ಎನ್‌.ರವಿ ನಡುವಣ ತಿಕ್ಕಾಟ ಮತ್ತೊಂದು ಮಗ್ಗುಲಿಗೆ ಹೊರಳಿದೆ.

ಸಂಸದರಾದ ಟಿ.ಆರ್‌.ಬಾಲು, ಎ.ರಾಜಾ, ಪಿ.ವಿಲ್ಸನ್‌ ಹಾಗೂ ತಮಿಳುನಾಡಿನ ಕಾನೂನು ಸಚಿವ ಎಸ್‌.ರಘುಪತಿ ಅವರನ್ನೊಳಗೊಂಡ ನಿಯೋಗವು ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ರಾಜ್ಯಪಾಲರ ವಿರುದ್ಧ ದೂರು ಸಲ್ಲಿಸಿದೆ. ರವಿ ಅವರು ಜನವರಿ 9ರಂದು ಸದನವನ್ನು ಉದ್ದೇಶಿಸಿ ಮಾತನಾಡುವಾಗ ಸಂವಿಧಾನದ ನಡಾವಳಿಗಳು ಹಾಗೂ ಸದನದ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ನಿಯೋಗವು ರಾಷ್ಟ್ರಪತಿಯವರಿಗೆ ತಿಳಿಸಿದೆ.

‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ರಾಷ್ಟ್ರಪತಿಯವರಿಗೆ ಬರೆದಿದ್ದ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ಆ ಪತ್ರದಲ್ಲಿ ಏನಿದೆ ಎಂಬುದು ಮುಖ್ಯಮಂತ್ರಿಯವರಿಗಷ್ಟೇ ಗೊತ್ತು’ ಎಂದು ಟಿ.ಆರ್‌.ಬಾಲು ತಿಳಿಸಿದ್ದಾರೆ.

‘ಸ್ಟಾಲಿನ್‌ ಅವರು ಹಂಚಿಕೊಂಡಿದ್ದ ಮಾಹಿತಿಯನ್ನೆಲ್ಲಾ ರಾಷ್ಟ್ರಪತಿಯವರಿಗೆ ವಿವರಿಸಿದ್ದೇವೆ. ಪತ್ರದಲ್ಲಿ ಉಲ್ಲೇಖಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯನ್ನೂ ಮಾಡಿದ್ದೇವೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದಾರೆ.

ರವಿ ಅವರನ್ನು ರಾಜ್ಯಪಾಲ ಹುದ್ದೆಯಿಂದ ವಜಾಗೊಳಿಸುವಂತೆ ಡಿಎಂಕೆ ಮೈತ್ರಿಕೂಟವು ಕಳೆದ ವರ್ಷದ ನವೆಂಬರ್‌ನಲ್ಲಿ ದ್ರೌಪದಿ ಮುರ್ಮು ಅವರನ್ನು ಒತ್ತಾಯಿಸಿತ್ತು. ರವಿ ವಿರುದ್ಧ ಅನೇಕ ಆರೋಪಗಳನ್ನೂ ಮಾಡಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಬಾಲು, ‘ನವೆಂಬರ್‌ನಲ್ಲಿ ಸಲ್ಲಿಸಿದ್ದ ಪತ್ರ ರಾಜಕೀಯ ಹಿತಾಸಕ್ತಿಯದ್ದಾಗಿತ್ತು. ಆದರೆ ಈಗ ಸರ್ಕಾರದಿಂದಲೇ ಪತ್ರ ರವಾನಿಸಲಾಗಿದೆ’ ಎಂದಿದ್ದಾರೆ.

‘ರವಿ ಅವರು ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ನ ಸನಾತನ ನೀತಿಗಳನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಇ.ವಿ.ರಾಮಸ್ವಾಮಿ ಪೆರಿಯಾರ್‌, ಕೆ.ಕಾಮರಾಜ್‌, ಸಿ.ಎನ್‌.ಅಣ್ಣಾದೊರೈ ಹಾಗೂ ಎಂ.ಕರುಣಾನಿಧಿ ಅವರಂತಹ ದ್ರಾವಿಡ ನೇತಾರರು ಜನಿಸಿದ್ದ ನೆಲದಲ್ಲಿ ರವಿ ಅವರ ಪ್ರಯತ್ನ ಫಲಿಸುವುದಿಲ್ಲ. ರಾಜ್ಯಪಾಲರು ರಾಷ್ಟ್ರಗೀತೆಗೂ ಮುನ್ನವೇ ಸದನ ತೊರೆಯುವ ಮೂಲಕ ಅದಕ್ಕೆ ಅಪಮಾನ ಮಾಡಿದ್ದಾರೆ. ತಮಿಳುನಾಡಿನ ಜನರನ್ನೂ ಅವಮಾನಿಸಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.

‘ರವಿ ಅವರು ಉದ್ದೇಶಪೂರ್ವಕವಾಗಿಯೇ ತಮಿಳುನಾಡು ಬದಲು ತಮಿಳಗಂ ಎಂಬ ಪದ ಪ್ರಯೋಗಿಸುತ್ತಿದ್ದಾರೆ. ಅದನ್ನು ನಾವು ಒಪ್ಪುವುದಿಲ್ಲ’ ಎಂದಿದ್ದಾರೆ.

ರವಿ ಅವರು ಇದೇ 13ರಂದು ನವದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು