ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜ್ ಸ್ಟಾರ್ ಎಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದ ಪವನ್ ಕಲ್ಯಾಣ್‌

Last Updated 18 ಅಕ್ಟೋಬರ್ 2022, 14:28 IST
ಅಕ್ಷರ ಗಾತ್ರ

ಅಮರಾವತಿ: ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ)ದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ ಮತ್ತು ನಟ ಪವನ್ ಕಲ್ಯಾಣ್, ‘ಯಾರಾದರೂ ನನ್ನನ್ನು 'ಪ್ಯಾಕೇಜ್ ಸ್ಟಾರ್' ಎಂದು ಕರೆದರೆ ಅವರನ್ನು ಚಪ್ಪಲಿಯಲ್ಲಿ ಹೊಡೆಯುತ್ತೇನೆ’ ಎಂದು ಚಪ್ಪಲಿ ತೋರಿಸುತ್ತಲೇ ಎಚ್ಚರಿಕೆ ನೀಡಿದ್ದಾರೆ.

ವೈಎಸ್‌ಆರ್‌ಸಿಪಿ ಮುಖಂಡರ ವಿರುದ್ಧ ಅಬ್ಬರಿಸುತ್ತಲೇ ಚಪ್ಪಲಿ ಕೈಗೆತ್ತುಕೊಂಡ ಪವನ್‌, ತಮ್ಮ ಮೇಲಿನ ವೈಯಕ್ತಿಕ ದಾಳಿ, ಟೀಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದರು.

ಯಾವುದೇ ಸಭೆಯನ್ನು ನಡೆಸದಂತೆ ಪೊಲೀಸರು ತಡೆದ ನಂತರ ಸೋಮವಾರ ವಿಶಾಖಪಟ್ಟಣದಿಂದ ಹಿಂದಿರುಗಿದ ಪವನ್ ಕಲ್ಯಾಣ್, ಮಂಗಳವಾರ ಮಂಗಳಗಿರಿಯ ಪಕ್ಷದ ಕಚೇರಿಯಲ್ಲಿ ಜೆಎಸ್‌ಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಟಾಲಿವುಡ್ ನಲ್ಲಿ ಪವರ್ ಸ್ಟಾರ್ ಎಂದೇ ಖ್ಯಾತರಾಗಿರುವ ಪವನ್ ಅವರನ್ನು ಮುಖ್ಯಮಂತ್ರಿ ವೈ.ಎಸ್ ಜಗನ್‌ ಮೋಹನ ರೆಡ್ಡಿ ಸೇರಿದಂತೆ ವೈಎಸ್‌ಆರ್‌ಸಿಪಿ ಪಕ್ಷದ ಹಲವು ನಾಯಕರು ‘ಪ್ಯಾಕೇಜ್‌ ಸ್ಟಾರ್‌’ ಎಂದು ಮೂದಲಿಸಿದ್ದಾರೆ. ಬಿಜೆಪಿ ಮತ್ತು ಟಿಡಿಪಿಯಿಂದ ಪವನ್‌ ಕಲ್ಯಾಣ್‌ ‘ಪ್ಯಾಕೇಜ್‌’ ಪಡೆದಿರುವುದಾಗಿ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪವನ್‌ ಕಲ್ಯಾಣ್‌ ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ವಿರುದ್ಧ ಬಹಿರಂಗ ಹೋರಾಟಕ್ಕೆ ಮುಂದಾಗಿರುವ ಪವನ್, ಆಧಾರ ರಹಿತ ಆರೋಪಗಳಿಗೆ ಇನ್ನು ಮುಂದೆ ಸುಮ್ಮನಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವೈಎಸ್‌ಆರ್‌ಸಿಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪವನ್, ತನ್ನ ತಾಳ್ಮೆಯೇ ತನ್ನನ್ನು ಉಳಿಸಿದೆ ಎಂದರು.

‘ನೀವು ಇಲ್ಲಿಯವರೆಗೆ ನನ್ನ ತಾಳ್ಮೆಯನ್ನು ಮಾತ್ರ ನೋಡಿದ್ದೀರಿ. ರಾಡು, ಹಾಕಿ ಸ್ಟಿಕ್‌ಗಳೊಂದಿಗೆ ಬರುತ್ತೀರಾ? ಬನ್ನಿ ನೋಡೇ ಬಿಡುತ್ತೇನೆ’ ಎಂದು ಅವರು ಸಿನಿಮಾ ಶೈಲಿಯಲ್ಲಿ ಗುಡುಗಿದರು. ಪವನ್‌ ಕಲ್ಯಾಣ್‌ ಅಬ್ಬರ ಕಂಡ ಜೆಎಸ್‌ಪಿ ಮುಖಂಡರು ಮತ್ತು ಕಾರ್ಯಕರ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು.

‘ನಾನು ಸ್ಕಾರ್ಪಿಯೊ ಕಾರು ಖರೀದಿಸಿದಾಗ, ನನಗೆ ಹಣ ಕೊಟ್ಟವರು ಯಾರು ಎಂದು ಕೇಳಿದರು. ಕಳೆದ ಎಂಟು ವರ್ಷಗಳಲ್ಲಿ ನಾನು ಆರು ಚಿತ್ರಗಳನ್ನು ಮಾಡಿದ್ದೇನೆ. ₹100 ಕೋಟಿಯಿಂದ ₹120 ಕೋಟಿ ಗಳಿಸಿದ್ದೇನೆ. 33 ಕೋಟಿ ತೆರಿಗೆ ಪಾವತಿಸಿದ್ದೇನೆ. ನಾನು ನನ್ನ ಮಕ್ಕಳ ನಿಶ್ಚಿತ ಠೇವಣಿ (ಫಿಕ್ಸ್ಡ್‌ ಡೆಪಾಸಿಟ್‌) ಅನ್ನು ಪಕ್ಷಕ್ಕೆ ನೀಡಿದ್ದೇನೆ. ಎರಡೂ ರಾಜ್ಯಗಳಲ್ಲಿ (ಆಂಧ್ರಪ್ರದೇಶ ಮತ್ತು ತೆಲಂಗಾಣ) ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ₹12 ಕೋಟಿ ನೀಡಿದ್ದೇನೆ. ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ₹30 ಲಕ್ಷ ನೀಡಿದ್ದೇನೆ’ ಎಂದು ಅವರು ಹೇಳಿದರು.

‘ಜೆಎಸ್‌ಪಿ ಸ್ಥಾಪನೆಯಾದಾಗಿನಿಂದ ಪಕ್ಷಕ್ಕೆ ₹15.54 ಕೋಟಿ ದೇಣಿಗೆಯಾಗಿ ಬಂದಿದೆ. ‘ರೈತ ಭರೋಸಾ ಯಾತ್ರೆ’ಗೆ ₹3.50 ಕೋಟಿ ಹಾಗೂ ’ನಾ ಸೇನಾ ಕೋಸಂ ನಾ ವಂತು’ ಕಾರ್ಯಕ್ರಮಕ್ಕೆ ₹4 ಕೋಟಿ ಬಂದಿದೆ’ ಎಂದರು.

‘ನನಗೆ ಮೂರು ಮದುವೆಯಾಗಿದೆ ಎಂದು ಅವರು (ವೈಎಸ್‌ಆರ್‌ಸಿಪಿ ನಾಯಕರು) ಪದೇ ಪದೇ ಹೇಳುತ್ತಿದ್ದಾರೆ. ಮೂರು ಮದುವೆಯಾಗಲು ನಿಮ್ಮನ್ನು ತಡೆದವರು ಯಾರು? ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದೇನೆ, ಎರಡನೇ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಮೂರನೇ ಪತ್ನಿಯನ್ನು ವಿವಾಹವಾಗಿದ್ದೇನೆ. ಕಾನೂನು ಪ್ರಕಾರ ಮೊದಲ ಮತ್ತು ಎರಡನೇ ಪತ್ನಿಯರಿಗೆ ಜೀವನಾಂಶ ನೀಡಿದ್ದೇನೆ. ಮೊದಲ ಪತ್ನಿಗೆ ₹5 ಕೋಟಿ ಹಣ ನೀಡಿದ್ದೇನೆ. ಎರಡನೇ ಪತ್ನಿಗೆ ಆಸ್ತಿ ನೀಡಿದ್ದೇನೆ’ ಎಂದು ಪವನ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಎಸ್‌ಪಿ ಸ್ಪರ್ಧಿಸಲಿದೆ ಎಂದು ಪವನ್ ಘೋಷಿಸಿದ್ದಾರೆ. ಎರಡರಿಂದ ಏಳು ಲೋಕಸಭಾ ಸ್ಥಾನಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಅವರು ಹೇಳಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT