ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಸಂದರ್ಶನ: ತಮಿಳುನಾಡಿನ ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆ ಸಾಧ್ಯವಿಲ್ಲ- ಅಣ್ಣಾಮಲೈ

ಇ.ಟಿ.ಬಿ ಶಿವಪ್ರಿಯನ್‌ Updated:

ಅಕ್ಷರ ಗಾತ್ರ : | |

ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅವರಿಗೆ ತಮಿಳುನಾಡು ಬಿಜೆಪಿ ಘಟಕದ ಚುಕ್ಕಾಣಿ ನೀಡಲಾಗಿದೆ. ತಮ್ಮ ನೇಮಕ, ಕರ್ನಾಟಕ–ತಮಿಳುನಾಡು ನಡುವಣ ನೀರಿನ ಸಂಘರ್ಷ ಇತ್ಯಾದಿ ಬಗ್ಗೆ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

*ಬಿಜೆಪಿ ಸೇರಿ ವರ್ಷವೂ ಆಗಿಲ್ಲ. ಆಗಲೇ ನಿಮ್ಮನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ತಮಿಳುನಾಡಿಗೆ ಬಿಜೆಪಿ ಆದ್ಯತೆ ನೀಡಿರುವ ಈ ಸಂದರ್ಭದಲ್ಲಿ ತಮಗೆ ಸಿಕ್ಕ ಈ ಅವಕಾಶವನ್ನು ಹೇಗೆ ನೋಡುತ್ತೀರಿ?

ದಕ್ಷಿಣ ಭಾರತದಲ್ಲಿ ಬೆಳೆಯಬೇಕಿದ್ದರೆ ತಮಿಳುನಾಡು ಬಹಳ ಮುಖ್ಯ ಎಂದು ನಮ್ಮ ಪಕ್ಷವು ಭಾವಿಸಿದೆ. ಕೇಂದ್ರದ ಈ ಸಾಲಿನ ಬಜೆಟ್‌ನಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಹಲವು ಯೋಜನೆಗಳಲ್ಲಿ ತಮಿಳುನಾಡಿಗೆ ಸಿಂಹ ಪಾಲು ಸಿಕ್ಕಿದೆ ಎಂಬುದು ಬಹಳ ಮುಖ್ಯ. ತಮಿಳರು, ತಮಿಳು ಸಂಸ್ಕೃತಿ ಮತ್ತು ತಮಿಳರ ಸೋಲರಿಯದ ಸ್ಫೂರ್ತಿಯು ಪ್ರಧಾನಿಗೆ ವೈಯಕ್ತಿಕವಾಗಿ ಇಷ್ಟ. ಹಾಗಾಗಿ, ನನಗೆ ಕೊಟ್ಟಿರುವ ಹೊಣೆಯು ಬಹಳ ದೊಡ್ಡದು. 

* ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆಲ್ಲಲು ಎಐಎಡಿಎಂಕೆಯ ಜತೆಗಿನ ಮೈತ್ರಿಯೇ ಕಾರಣ ಎನ್ನಲಾಗುತ್ತಿದೆಯಲ್ಲ...

ಬಿಜೆ‍ಪಿ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದದ್ದು ಹೇಗೆ ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಕೊಡು–ಕೊಳುವಿಕೆಯು ಯಾವುದೇ ಮೈತ್ರಿಯ ಲಕ್ಷಣವಾಗಿದೆ. ನಮ್ಮ ಮತಗಳು ಮತ್ತು ಇಲ್ಲಿ ದೊಡ್ಡ ಪಕ್ಷವಾಗಿರುವ ಎಐಎಡಿಎಂಕೆಯ ಮತಗಳು ಒಟ್ಟಾಗಿವೆ.  

* ಮೇಕೆದಾಟು ಜಲಾಶಯ ಯೋಜನೆಯನ್ನು ಜಾರಿ ಮಾಡಿಯೇ ತೀರುವುದಾಗಿ ಕರ್ನಾಟಕದ ಬಿಜೆಪಿ ನೇತೃತ್ವದ ಸರ್ಕಾರ ಹೇಳುತ್ತಿದೆ. ತಮಿಳುನಾಡು ಬಿಜೆಪಿಯ ನಿಲುವು ಏನು?

ತಮಿಳುನಾಡು ಬಿಜೆಪಿಯ ನಿಲುವು ಸ್ಪಷ್ಟ. ಈ ವಿಚಾರವು 2017ರಿಂದಲೂ ಸುಪ್ರೀಂ ಕೋರ್ಟ್ ಮುಂದೆ ಇದೆ. ನದಿಹರಿವಿನ ಕೆಳಭಾಗದ ರಾಜ್ಯಗಳ ಅನುಮತಿ ಇಲ್ಲದೆ ಜಲಾಶಯ ನಿರ್ಮಾಣ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳು ಸ್ಪಷ್ಟವಾಗಿ ಹೇಳಿವೆ. ತಮಿಳುನಾಡು ಕೆಳಭಾಗದ ರಾಜ್ಯವಾಗಿರುವ ಕಾರಣ ಜಲಾಶಯ ನಿರ್ಮಾಣಕ್ಕೆ ತಮಿಳುನಾಡಿನ ಅನುಮತಿ ಅಗತ್ಯ. ಅದೂ ಅಲ್ಲದೆ, ಅಣೆಕಟ್ಟೆ ನಿರ್ಮಾಣ ಕರ್ನಾಟಕದ ಕೈಯಲ್ಲಿ ಇಲ್ಲ. ಕೇಂದ್ರವು ಅನುಮತಿ ನೀಡಬೇಕಾಗುತ್ತದೆ. 

* ಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡು ಬಿಜೆಪಿ ಘಟಕವು ಆಗಸ್ಟ್‌ 5ರಂದು ನಡೆಸಲಿರುವ ನಿರಶನಕ್ಕೆ ಕರ್ನಾಟಕದ ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ...

ತಮಿಳುನಾಡು ಬಿಜೆಪಿಯ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ಈ ವಿಚಾರದಲ್ಲಿ ಬೇರೆ ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ.‌

* ತಮಿಳುನಾಡು ಬಿಜೆಪಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ಎಲ್‌. ಮುರುಗನ್‌ ಅವರು ‘ಕೊಂಗುನಾಡಿನವರು’ ಎಂದು ಬಿಜೆಪಿ ಉಲ್ಲೇಖಿಸಿತ್ತು. ತಮಿಳುನಾಡು ವಿಭಜನೆಯ ಉದ್ದೇಶ ಇಲ್ಲ ಎಂದು ಆಕ್ಷೇಪ ವ್ಯಕ್ತವಾದ ಬಳಿಕ ಸ್ಪಷ್ಟಪ‍ಡಿಸಿದೆ. ಬಿಜೆಪಿಯು ಈ ವಿಚಾರದಲ್ಲಿ ಪರೀಕ್ಷಿಸಿ ನೋಡುವ ಪ್ರಯತ್ನ ಮಾಡಿತೇ?

ಕಳೆದ ತಿಂಗಳು ಪ್ರಮಾಣವಚನ ಸ್ವೀಕರಿಸಿದ 43 ಸಚಿವರಲ್ಲಿ ಕನಿಷ್ಠ ಎಂಟು ಮಂದಿ ತಮ್ಮ ಸಾಮಾಜಿಕ ಅಸ್ಮಿತೆಯನ್ನು ಉಲ್ಲೇಖಿಸಿದ್ದಾರೆ– ಬುಂದೇಲ್‌ಖಂಡ, ಪೂರ್ವಾಂಚಲ, ಘರ್ವಾಲ್‌, ಕೊಂಕಣ ಮಹಾರಾಷ್ಟ್ರ, ದಕ್ಷಿಣ ಕನ್ನಡ ಮತ್ತು ಕೊಂಗನಾಡು ಎಂದು ಹೇಳಿದ್ದಾರೆ. ಇದು ಸಾಮಾಜಿಕ ಅಸ್ಮಿತೆಯ ಉಲ್ಲೇಖವಲ್ಲದೆ ಬೇರೇನೂ ಅಲ್ಲ. 

* ಜಲಾಶಯ ನಿರ್ಮಾಣಕ್ಕೆ ತಮಿಳುನಾಡಿನ ಅನುಮತಿ ಬೇಕಿಲ್ಲ ಎಂದು ಕರ್ನಾಟಕ ಹೇಳುತ್ತಿದೆ...

ಕಾನೂನಿನ ದೃಷ್ಟಿಯಿಂದ ನೋಡುವುದಾದರೆ ಕರ್ನಾಟಕಕ್ಕೆ ತಮಿಳುನಾಡಿನ ಅನುಮತಿ ಬೇಕು. ಕೆಳಭಾಗದ ರಾಜ್ಯದ ಅನುಮತಿ ಇಲ್ಲದೆ ಅಣೆಕಟ್ಟೆ ನಿರ್ಮಿಸಲಾಗದು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವೂ ಹೇಳಿದೆ. ಪರಿಸ್ಥಿತಿ ಹೀಗೆ ಇದೆ. ಕೇಂದ್ರವು ತಮಿಳುನಾಡನ್ನು ಕೈಬಿಡುವುದಿಲ್ಲ ಎಂಬ ಭರವಸೆಯನ್ನು ನಾನು ನೀಡಬಲ್ಲೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು