ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಸಂಹಿತೆಗೆ ಸಮ್ಮತಿ: ಮಸೂದೆಗಳಿಗೆ ರಾಜ್ಯಸಭೆ ಅಂಗೀಕಾರ

ವಿರೋಧ ಪಕ್ಷಗಳ ಅನುಪಸ್ಥಿತಿ
Last Updated 23 ಸೆಪ್ಟೆಂಬರ್ 2020, 20:10 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರ ಮತ್ತು ವಿರೋಧ ‍ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾದ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಬುಧವಾರ ಮುಂದೂಡಲಾಗಿದೆ. ಕಾರ್ಮಿಕ ಸಂಹಿತೆಗಳ ಜಾರಿಗೆ ಅನುವು ಮಾಡಿಕೊಡುವ ಮೂರು ಮಸೂದೆಗಳಿಗೆ ರಾಜ್ಯಸಭೆಯು ಇದೇ ದಿನ ಅನುಮತಿ ನೀಡಿದೆ. ರಾಷ್ಟ್ರಪತಿ ಅಂಕಿತವಾದ ಬಳಿಕ ಇದು ಕಾರ್ಯರೂಪಕ್ಕೆ ಬರಲಿದೆ.

ನಿಯಮಬಾಹಿರವಾಗಿ ವರ್ತಿಸಿದ ಆರೋಪ ಹೊತ್ತಿರುವ ರಾಜ್ಯಸಭೆಯ ಎಂಟು ಸದಸ್ಯರ ಅಮಾನತು ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಅಧಿವೇಶನವನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿವೆ. ಹಾಗಾಗಿ, ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿಯೇ ಕಾರ್ಮಿಕ ಸಂಹಿತೆಗೆ ಸಂಬಂಧಿಸಿದ ಮೂರು ಮಸೂದೆಗಳು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡವು.

ನಾಲ್ಕು ಸಂಹಿತೆಗಳ ಭಾಗವಾಗಿದ್ದ ವೇತನಗಳ ಸಂಹಿತೆಗೆ ಕಳೆದ ವರ್ಷವೇ ಅಂಗೀಕಾರ ದೊರಕಿತ್ತು. ಹಾಗಾಗಿ, ಕೇಂದ್ರದ 29 ಕಾರ್ಮಿಕ ಕಾಯ್ದೆಗಳು ಸ್ಥೂಲವಾದ ನಾಲ್ಕು ಸಂಹಿತೆಗಳಾಗಿ ಈಗ ಪರಿವರ್ತನೆಯಾಗಿವೆ.

ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಮಸೂದೆಗಳನ್ನು ಅಂಗೀಕರಿಸಬಾರದು ಎಂದು ಕೋರಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌, ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌ ಸೇರಿ ವಿರೋಧ ಪಕ್ಷಗಳ ಹತ್ತು ನಾಯಕರು, ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದರು.

‘ಈ ಮಸೂದೆಗಳು ಕೋಟ್ಯಂತರ ಕಾರ್ಮಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತವೆ. ಮಸೂದೆಗಳನ್ನು ಏಕಪಕ್ಷೀಯವಾಗಿ ಅಂಗೀಕರಿಸುವುದು ಪ್ರಜಾಪ್ರಭುತ್ವದ ಮೇಲಿನ ದೊಡ್ಡ ಕಪ್ಪು ಚುಕ್ಕೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಆದರೆ, ಈ ಪತ್ರದ ಕೋರಿಕೆಯನ್ನು ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿದ್ದಾರೆ. ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿದ್ದಾಗ ಅಥವಾ ಸಭಾತ್ಯಾಗ ಮಾಡಿದ್ದಾಗ ಮಸೂದೆಗಳನ್ನು ಅಂಗೀಕರಿಸಿದ ನಿದರ್ಶನಗಳಿವೆ ಎಂದು ಅವರು ಹೇಳಿದ್ದಾರೆ.

ಸಮರ್ಥನೆ:ಬದಲಾಗಿರುವ ವ್ಯಾಪಾರ ವಾತಾವರಣಕ್ಕೆ ಹೊಂದಿಕೆಯಾಗುವ ಪಾರದರ್ಶಕ ವ್ಯವಸ್ಥೆಯನ್ನು ಈ ಸಂಹಿತೆಗಳು ಒದಗಿಸಲಿವೆ ಎಂದು ರಾಜ್ಯಸಭೆಯಲ್ಲಿನ ಚರ್ಚೆಗೆ ಉತ್ತರಿಸುತ್ತಾ ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

300ಕ್ಕಿಂತ ಕಡಿಮೆ ಕಾರ್ಮಿಕರಿರುವ ಉದ್ಯಮವನ್ನು ಮುಚ್ಚಲು ಅಥವಾ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಸರ್ಕಾರದ ಒಪ್ಪಿಗೆ ಬೇಕಿಲ್ಲ ಎಂಬನಿಯಮವನ್ನು ಗಂಗ್ವಾರ್‌ ಸಮರ್ಥಿಸಿಕೊಂಡಿದ್ದಾರೆ. ಮೊದಲು 100ಕ್ಕಿಂತ ಕಡಿಮೆ ಕಾರ್ಮಿಕರಿರುವ ಉದ್ಯಮಕ್ಕೆ ಮಾತ್ರ ಈ ಅವಕಾಶ ಇತ್ತು. ಕಾರ್ಮಿಕರ ವಿಷಯವು ಸಮವರ್ತಿ ಪಟ್ಟಿಯಲ್ಲಿದೆ. 16 ರಾಜ್ಯಗಳು ಈ ನಿಯಮವನ್ನು ಈಗಾಗಲೇ ಸಡಿಲಿಸಿವೆ. ಅದಲ್ಲದೆ, ಸಂಸತ್ತಿನ ಸ್ಥಾಯಿ ಸಮಿತಿಯ ವರದಿ ಕೂಡ ಇದೇ ಶಿಫಾರಸು ನೀಡಿತ್ತು ಎಂದು ಗಂಗ್ವಾರ್‌ ಹೇಳಿದ್ದಾರೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಸಂಹಿತೆಯು ಸಾರ್ವತ್ರಿಕ ಸಾಮಾಜಿಕ ಭದ್ರತೆ ಒದಗಿಸುತ್ತದೆ. ಅಸಂಘಟಿತ ವಲಯದ 40 ಕೋಟಿ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತೆ ನಿಧಿಯನ್ನು ಸ್ಥಾಪಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಬಿಎಂಎಸ್‌, ಸಿಐಟಿಯು ವಿರೋಧ
ಈ ಮಸೂದೆಗಳಿಗೆ ಕಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಂದ ಭಾರಿ ಆಕ್ಷೇಪವೂ ವ್ಯಕ್ತವಾಗಿದೆ. ಆರ್‌ಎಸ್‌ಎಸ್‌ನ ಕಾರ್ಮಿಕ ವಿಭಾಗವಾದ ಭಾರತೀಯ ಮಜ್ದೂರ್‌ ಸಂಘವು (ಬಿಎಂಎಸ್‌) ಈ ಮಸೂದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ‘ಇವು ಉದ್ಯೋಗದಾತರು ಮತ್ತು ಅಧಿಕಾರಶಾಹಿಯ ಪರವಾಗಿವೆ’ ಎಂದು ಹೇಳಿದೆ. ತಾನು ಸಲ್ಲಿಸಿದ ಯಾವುದೇ ಸಲಹೆಯನ್ನು ಮಸೂದೆಗಳಲ್ಲಿ ಸೇರಿಸಲಾಗಿಲ್ಲ ಎಂದೂ ತಿಳಿಸಿದೆ. ‘ಕಾರ್ಮಿಕ ವರ್ಗದ ಮೇಲೆ ಗುಲಾಮಗಿರಿಯನ್ನು ಹೇರುವ ಯತ್ನ’ ಎಂದು ಸಿಪಿಎಂ ಬೆಂಬಲದ ಕಾರ್ಮಿಕ ಸಂಘಟನೆ ಸಿಐಟಿಯು ಹೇಳಿದೆ.

4 ತಾಸು 45 ನಿಮಿಷ ಚರ್ಚೆ
ಈ ಮೂರೂ ಮಸೂದೆಗಳ ಬಗ್ಗೆ ರಾಜ್ಯಸಭೆಯಲ್ಲಿ 103 ನಿಮಿಷ ಚರ್ಚೆಯಾಗಿದೆ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್‌ ಸಂಸ್ಥೆ ತಿಳಿಸಿದೆ. ಕಳೆದ ವರ್ಷ, ವೇತನಗಳ ಸಂಹಿತೆಯ ಬಗ್ಗೆ ಏಳು ತಾಸು 30 ನಿಮಿಷ ಚರ್ಚೆ ನಡೆದಿತ್ತು. ಆದರೆ, ಮೂರು ಸಂಹಿತೆಗಳ ಬಗ್ಗೆ ಎರಡೂ ಸದನಗಳಲ್ಲಿ ಚರ್ಚೆ ಆಗಿರುವ ಒಟ್ಟು ಸಮಯ 4.45 ಗಂಟೆ ಮಾತ್ರ. ಈಗ ಅಂಗೀಕಾರವಾಗಿರುವ ಸಂಹಿತೆಗಳಲ್ಲಿ 411 ವಿಧಿಗಳು, 13 ಪರಿಚ್ಛೇದಗಳಿವೆ. ಒಟ್ಟು 350 ಪುಟಗಳಿವೆ. ವೇತನ ಸಂಹಿತೆಯು ಲೋಕಸಭೆಯಲ್ಲಿ ಕಳೆದ ವರ್ಷ ಅಂಗೀಕಾರ ಆದಾಗ ಸುಮಾರು ನಾಲ್ಕು ತಾಸು ಚರ್ಚೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT