ಶುಕ್ರವಾರ, ಮೇ 27, 2022
31 °C
ಪರಿಸ್ಥಿತಿ ಅವಲೋಕನ

ಗಡಿಯಲ್ಲಿ ಸುರಕ್ಷತೆ ಮತ್ತು ಕಾರ್ಯಾಚರಣೆ: ಎಲ್‌ಒಸಿಗೆ ಸೇನಾ ಮುಖ್ಯಸ್ಥ ನರವಣೆ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಅವರು ಜಮ್ಮುವಿನ ಎಲ್‌ಒಸಿಯ ಮುಂಚೂಣಿ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದರು. ಈ ಪ್ರದೇಶದ ವಾಸ್ತವ ಸ್ಥಿತಿ ಮತ್ತು ಒಳನುಸುಳುವಿಕೆ ತಡೆ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಣಿವೆಯಲ್ಲಿ ಭಯೋತ್ಪಾದಕರು ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಅವಳಿ ಗಡಿ ಜಿಲ್ಲೆಗ
ಳಾದ ಪೂಂಛ್ ಮತ್ತು ರಜೌರಿಯ ಅರಣ್ಯ ವಲಯದಲ್ಲಿ ಎನ್‌ಕೌಂಟರ್ ನಡೆಯುತ್ತಿದೆ. ಈ ಸಮಯದಲ್ಲಿ ನರವಣೆ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ಜಮ್ಮುವಿಗೆ ಬಂದಿದ್ದಾರೆ. 

‘ಜನರಲ್ ನರವಣೆ ಅವರು ವೈಟ್ ನೈಟ್ ಕೋರ್‌ನ ಮುಂಚೂಣಿ ಪ್ರದೇಶಗಳಿಗೆ ಭೇಟಿ ನೀಡಿ, ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿಯ ಪ್ರತ್ಯಕ್ಷ ಮೌಲ್ಯಮಾಪನ ಮಾಡಿದರು’ ಎಂದು ಭಾರತೀಯ ಸೇನೆಯ ಹೆಚ್ಚುವರಿ ಸಾರ್ವಜನಿಕ ನಿರ್ದೇಶನಾಲಯ (ಎಡಿಜಿಪಿಐ) ಟ್ವೀಟ್ ಮಾಡಿದೆ.

ಈ ತಿಂಗಳು ಕಾಶ್ಮೀರ ಕಣಿವೆಯ ವಿವಿಧ ಭಾಗಗಳಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಕಾಶ್ಮೀರದ ಹೊರಗಿನ ಐವರು ಕಾರ್ಮಿಕರು, ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಇಬ್ಬರು ಶಿಕ್ಷಕರು ಮತ್ತು ಒಬ್ಬ ಪ್ರಸಿದ್ಧ ಫಾರ್ಮಾಸಿಸ್ಟ್ ಸೇರಿದ್ದಾರೆ. ಕಣಿವೆಯ ಪ್ರತಿ ಹನಿ ರಕ್ತಕ್ಕೂ ಸೇಡು ತೀರಿಸಿಕೊಳ್ಳುವುದಾಗಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾನುವಾರ ಪ್ರತಿಜ್ಞೆ ಮಾಡಿದ್ದಾರೆ.

ನರವಣೆ ಅವರು ಗಡಿ ಜಿಲ್ಲೆಗಳಾದ ರಜೌರಿ ಮತ್ತು ಪೂಂಛ್‌ಗೆ ಭೇಟಿ ನೀಡಿದರು. ಮೆಂಧರ್, ಸುರಂಕೋಟೆ ಮತ್ತು ಥಾನಮಂಡಿ ಅರಣ್ಯ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಪತ್ತೆ ಮಾಡುವ ಬೃಹತ್ ಕಾರ್ಯಾಚರಣೆ ಅಕ್ಟೋಬರ್ 11ರಿಂದ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅಕ್ಟೋಬರ್ 11ರಂದು ಸುರಂಕೋಟೆ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರೆ, ಗುರುವಾರ ಮೆಂಧರ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮತ್ತಿಬ್ಬರು ಸೈನಿಕರು ಪ್ರಾಣ ಕಳೆದುಕೊಂಡಿದ್ದರು. 

ಭಯೋತ್ಪಾದಕರನ್ನು ಹತ್ತಿಕ್ಕುವ ಕಾರ್ಯಾಚರಣೆ ಮಂಗಳವಾರ 9ನೇ ದಿನಕ್ಕೆ ಕಾಲಿಟ್ಟಿದೆ. ಭಯೋತ್ಪಾದಕರಿಗೆ ನೆರವು ನೀಡಿದ್ದಕ್ಕೆ ಸಂಬಂಧಿಸಿದಂತೆ ಇದುವರೆಗೆ ತಾಯಿ-ಮಗ ಸೇರಿದಂತೆ ಎಂಟು ಜನರನ್ನು ವಿಚಾರಣೆಗಾಗಿ ಬಂಧಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು