ಲಸಿಕೆ ಹಾಕಿಸಿಕೊಂಡರೆ 20 ಕೆ.ಜಿ ಅಕ್ಕಿ ಉಚಿತ: ವರ್ಕ್ ಆಯ್ತು ಅಧಿಕಾರಿ ಕಾರ್ಯತಂತ್ರ

ಇಟಾನಗರ: ಅರುಣಾಚಲಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಕೋವಿಡ್ ಲಸಿಕೆ ಪಡೆಯುವುದನ್ನು ಉತ್ತೇಜಿಸಲು ಲಸಿಕೆ ಪಡೆದವರಿಗೆ 20 ಕೆ.ಜಿ ಉಚಿತ ಅಕ್ಕಿಯ ಆಫರ್ ನೀಡಲಾಗಿದೆ.
ಈ ಘೋಷಣೆಯಿಂದ ಅರುಣಾಚಲ ಪ್ರದೇಶದ ಆಡಳಿತ ವಲಯದ ಗ್ರಾಮಸ್ಥರಲ್ಲಿ ವ್ಯಾಕ್ಸಿನೇಷನ್ ಬಗ್ಗೆ ವದಂತಿಗಳನ್ನು ಹೋಗಲಾಡಿಸುವ ನಿರೀಕ್ಷೆಯು ಸಾಕಷ್ಟು ಲಾಭದಾಯಕವಾಗಿದೆ.ಏಕೆಂದರೆ, 80 ಕ್ಕೂ ಹೆಚ್ಚು ಜನರು ಈ ಘೋಷಣೆಯಾದ ಕೆಲವೇ ದಿನಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಕಾಲ್ನಡಿಗೆಯಲ್ಲಿ ಬಂದಿದ್ದಾರೆ.
ಸುಬನ್ಸಿರಿ ಜಿಲ್ಲೆಯ ಯಜಾಲಿಯ ವೃತ್ತಾಧಿಕಾರಿ ತಾಶಿ ವಾಂಗ್ಚುಕ್ ಥೊಂಗ್ಡಾಕ್ ಅವರು ಈ ಉಪಾಯ ಮಾಡಿದ್ದು, ಲಸಿಕೆ ಹಾಕಿಸಿಕೊಳ್ಳುವ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಅಕ್ಕಿ ನೀಡುವಿಕೆಯನ್ನು ಪ್ರಾರಂಭಿಸಿದ್ದಾರೆ.
‘ಲಸಿಕೆ ವಿತರಣೆ ಸುಧಾರಿಸಲು ನಮ್ಮ ವೃತ್ತ ಮತ್ತು ಜಿಲ್ಲೆಯಲ್ಲಿ ನಾವು ನಿರಂತರವಾಗಿ ಕಾರ್ಯತಂತ್ರಗಳನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ. ಯಜಾಲಿ ವೃತ್ತದಲ್ಲಿ 45 ವರ್ಷಕ್ಕೂ ಮೇಲ್ಪಟ್ಟ 1,399 ಜನರಿದ್ದಾರೆ’ ಎಂದು ಅಧಿಕಾರಿ ಹೇಳಿದ್ದಾರೆ.
‘ಇಂದು ಮಧ್ಯಾಹ್ನದವರೆಗೆ, 80 ಜನರು ಲಸಿಕೆ ಸ್ವೀಕರಿಸಲು ಬಂದಿದ್ದಾರೆ. ಜೂನ್ 20 ರೊಳಗೆ ವಲಯದಲ್ಲಿ ಶೇಕಡಾ 100 ರಷ್ಟು ಲಸಿಕಾ ಅಭಿಯಾನ ನಡೆಸುವುದು ನಮ್ಮ ಉದ್ದೇಶ’ ಎಂದು ಅಧಿಕಾರಿ ಥೊಂಗ್ಡಾಕ್ ಹೇಳಿದ್ದಾರೆ.
ಸ್ವತಃ ಲಸಿಕೆ ಪಡೆಯಲು ಬಂದವರಲ್ಲಿ ಅನೇಕರು ದೂರದ ಹಳ್ಳಿಗಳಿಂದ ಕಾಲ್ನಡಿಗೆಯಲ್ಲಿ ಪ್ರತಿಕೂಲ ಹವಾಮಾನವನ್ನು ಲೆಕ್ಕಿಸದೇ ಬಂದಿದ್ದಾರೆ ಎಂದು ಥೊಂಗ್ಡಾಕ್ ಹೇಳಿದರು.
ನಮ್ಮ ವೃತ್ತದ ಪ್ರತಿ ಹಳ್ಳಿಗೆ ಲಸಿಕೆ ತಲುಪಿಸಲು ಆಡಳಿತವು ಮಾರ್ಗಸೂಚಿಯನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು.
‘45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆಗಳನ್ನು ನೀಡಲು ನಾವು ಶುಕ್ರವಾರ ಮತ್ತು ಶನಿವಾರ ಮನೆ-ಮನೆಗೆ ಭೇಟಿ ನೀಡಲು ಯೋಜಿಸುತ್ತಿದ್ದೇವೆ. ನಮ್ಮ ಆಫರ್ ಮುಂದುವರಿಯುತ್ತದೆ ಆದರೆ ಅಕ್ಕಿಯ ಪ್ರಮಾಣವು 20 ಕೆಜಿಗೆ ಬದಲಾಗಿ 10 ಕೆಜಿ ಇರುತ್ತದೆ’ ಎಂದು ಥೊಂಗ್ಡಾಕ್ ಹೇಳಿದರು.
ವಿವೇಕಾನಂದ ಕೇಂದ್ರ ವಿದ್ಯಾಲಯದ ಇಬ್ಬರು ಮಾಜಿ ವಿದ್ಯಾರ್ಥಿಗಳು ಫಲಾನುಭವಿಗಳಿಗೆ ವಿತರಣೆಗಾಗಿ ಅಕ್ಕಿಯನ್ನು ದಾನ ಮಾಡಿದ್ದಾರೆ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.