ಭಾನುವಾರ, ಮಾರ್ಚ್ 26, 2023
23 °C

ವಿಧಾನಸಭಾ ಚುನಾವಣೆಗೆ ತಾಲೀಮು: ಉತ್ತರಾಖಂಡಕ್ಕೆ ಕೇಜ್ರಿವಾಲ್ ಭಾನುವಾರ ಭೇಟಿ

ಶೆಮಿನ್ ಜಾಯ್/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿ(ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ ನಂತರ ಈಗ ಉತ್ತರಾಖಂಡ ರಾಜ್ಯದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ.

ಚುನಾವಣೆಯ ಹಿನ್ನೆಲೆಯಲ್ಲೇ ಆಪ್‌ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಉತ್ತರಾಖಂಡ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಉತ್ತರಾಖಂಡದಲ್ಲಿರುವ ಆಡಳಿತಾರೂಡ ಬಿಜೆಪಿ ಸರ್ಕಾರ ಈ ಚುನಾವಣೆಯಲ್ಲಿ ಜಯಗಳಿಸಿ, ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕ್ಷೀಣಿಸುತ್ತಿರುವ ತಮ್ಮ ಪಕ್ಷದ ಪ್ರಭಾವವನ್ನು ಮರುಸ್ಥಾಪಿಸಲು ನಾಲ್ಕು ತಿಂಗಳೊಳಗೆ ಮುಖ್ಯಮಂತ್ರಿಯನ್ನು ಬದಲಿಸಿ, ಹೊಸಬರನ್ನು ನೇಮಕ ಮಾಡಿದೆ.

ಆಪ್ ಪಕ್ಷ ಉತ್ತರಾಖಂಡ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಈಗಾಗಲೇ ಘೋಷಿಸಿದೆ. ದೆಹಲಿಯ ಚುನಾವಣೆಯಲ್ಲಿ ಯಶಸ್ವಿ ಮಂತ್ರವೆಂದೇ ಗುರುತಿಸುವ ‘ಉಚಿತ ವಿದ್ಯುತ್‌‘ ಯೋಜನೆಯನ್ನೇ,  ಈ ಚುನಾವಣೆಯಲ್ಲೂ ಪ್ರಮುಖ ವಿಷಯವಾಗಿಸಲು ಪಕ್ಷ ನಿರ್ಧರಿಸಿದೆ. 

ಆಪ್ ಕಾರ್ಯಕರ್ತರು ಈಗಾಗಲೇ ‘ದುಬಾರಿ ವಿದ್ಯುತ್ ಶುಲ್ಕ‘ದ ವಿರುದ್ಧ ಉತ್ತರಾಖಂಡದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯ ಭಾಗವಾಗಿದ್ದ ಕರ್ನಲ್ ಅಜಯ್ ಕೋಟಿಯಾಲ್ ಅವರನ್ನು ಬಂಧಿಸಿರುವ ವಿಚಾರವನ್ನು ಎತ್ತಿ ತೋರಿಸಲು ಪಕ್ಷ ನಿರ್ಧರಿಸಿದೆ.

ಆಪ್‌ ಮುಖಂಡ ಅರವಿಂದ್‌ ಕೇಜ್ರಿವಾಲ್ ಅವರು ಭಾನುವಾರ ಉತ್ತರಾಖಂಡಕ್ಕೆ ಭೇಟಿ ನೀಡುತ್ತಿದ್ದು, ಇದಕ್ಕೂ ಮುನ್ನ, ಈ ಭೇಟಿಯಲ್ಲಿ ಚರ್ಚಿಸಲಿರುವ ವಿಷಯವನ್ನು ಟ್ವೀಟ್‌ನಲ್ಲಿ ಹೇಳಿದ್ದಾರೆ. ‘ಉತ್ತರಾಖಂಡ ರಾಜ್ಯ ವಿದ್ಯುತ್ ಉತ್ಪಾದಿಸಿ, ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತದೆ. ಆದರೆ, ಆ ರಾಜ್ಯದಲ್ಲೇ ಏಕೆ ವಿದ್ಯುತ್‌ ಬಿಲ್ ದುಬಾರಿಯಾಗುತ್ತಿದೆ? ದೆಹಲಿಗೆ ಬೇಕಾದ ವಿದ್ಯುತ್, ದೆಹಲಿಯಲ್ಲಿ ಉತ್ಪಾದನೆಯಾಗುವುದಿಲ್ಲ. ಬೇರೆ ರಾಜ್ಯದಿಂದ ಖರೀದಿಸಲಾಗುತ್ತದೆ. ಆದರೂ ದೆಹಲಿಯಲ್ಲಿ ಉಚಿತ ವಿದ್ಯುತ್‌ ನೀಡಲಾಗುತ್ತಿದೆ. ಹಾಗಾದರೆ ಉತ್ತರಾಖಂಡದ ಜನರಿಗೆ ಉಚಿತ ವಿದ್ಯುತ್ ಸಿಗಬೇಕಲ್ಲವೇ‘ ಎಂದು ಟ್ವೀಟ್‌ ಮಾಡಿದ್ದಾರೆ.

ಆಪ್‌ ಪಕ್ಷದ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‌ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಚಿಸುತ್ತಿದೆ. ಪಂಜಾಬ್‌ ಮತ್ತು ಉತ್ತರಾಖಂಡದ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಉತ್ತರ ಪ್ರದೇಶದಲ್ಲಿ ಯಾವುದಾದರೂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು, ಆಯ್ದ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವ ಬಗ್ಗೆಯೂ ಯೋಚಿಸುತ್ತಿದೆ.

ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ‘ಉಚಿತ ವಿದ್ಯುತ್‌‘ ಕಾರ್ಯಕ್ರಮವೇ ಪ್ರಮುಖ ಚುನಾವಣಾ ವಿಷಯವಾಗಲಿದೆ. ಕಳೆದ ಜೂನ್‌ನಲ್ಲಿ ಪಂಜಾಬ್‌ಗೆ ಭೇಟಿ ನೀಡಿದ್ದ ಕೇಜ್ರಿವಾಲ್ ಅವರು, ‘ಎಎಪಿ ಅಧಿಕಾರಕ್ಕೆ ಬಂದರೆ, ಪಂಜಾಬ್‌ ಜನರು 300 ಯೂನಿಟ್‌ವರೆಗೆ ವಿದ್ಯುತ್‌ ಬಿಲ್ ಪಾವತಿಸಬೇಕಾಗಿಲ್ಲ‘ ಎಂದು ಪ್ರಕಟಿಸಿದ್ದರು. ‘ಎಎಪಿಗೆ ಬಹುತ ದೊರೆತರೆ, ಸಿಖ್‌ ಸಮುದಾಯದವರೇ ಮುಖ್ಯಮಂತ್ರಿಯಾಗುತ್ತಾರೆ‘ ಎಂದು ಘೋಷಿಸಿದ್ದರು.

ಇನ್ನೊಂದೆಡೆ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ, ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಆ ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ಅವರು ಕೇಜ್ರಿವಾಲ್ ಪಕ್ಷಕ್ಕೆ ಹಾರಬಹುದು ಎಂಬ ಲೆಕ್ಕಾಚಾರದ ಬಗ್ಗೆಯೂ ಗಮನ ಹರಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು