ಭಾನುವಾರ, ಸೆಪ್ಟೆಂಬರ್ 26, 2021
23 °C

ಅಸ್ಸಾಂ ದೋಣಿ ದುರಂತ: ಬದುಕುಳಿದ 84 ಮಂದಿ, ಒಬ್ಬರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೊರ್ಹಾತ್‌/ಗುವಾಹಟಿ: ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ್ದ ದೋಣಿಯಲ್ಲಿನ 84 ಮಂದಿ ಬದುಕುಳಿದಿದ್ದು, ಒಬ್ಬರು ಸಾವಿಗೀಡಾಗಿರುವುದು ದೃಢಪಟ್ಟಿದೆ. ಆದರೆ, ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ.

ಬುಧವಾರ ನಿಮತಿ ಘಾಟ್‌ನಿಂದ ಮಜುಲಿ ಸಾಂಕ್‌ಗೆ ತೆರಳುತ್ತಿದ್ದ ಈ ದೋಣಿಯು ಸರ್ಕಾರಿ ಸ್ವಾಮ್ಯದ ದೋಣಿಗೆ ಡಿಕ್ಕಿಯಾಗಿತ್ತು. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳು ಬುಧವಾರ ರಾತ್ರಿಯೂ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದವು.

ಪತ್ತೆಯಾಗಿರುವ 84 ಮಂದಿಯಲ್ಲಿ ಹೆಚ್ಚಿನವರು ಜೊರ್ಹಾತ್‌ ಮತ್ತು ಮಜುಲಿ ಜಿಲ್ಲೆಗೆ ಸೇರಿದ್ದಾರೆ ಎಂದು ಜೋರ್ಹಾತ್‌ ಜಿಲ್ಲಾಧಿಕಾರಿ ಅಶೋಕ್‌ ಬರ್ಮನ್‌ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಇಬ್ಬರು ಜೊರ್ಹತ್‌ ಮತ್ತು ಲಖಿಮಪುರ ಜಿಲ್ಲೆಗೆ ಸೇರಿದ್ದಾರೆ. ಸೇನೆಯ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ವಾಯು ಪಡೆಯ ನೆರವನ್ನು ಸಹ ಕೋರಲಾಗಿದೆ ಎಂದು ಜೋರ್ಹಾತ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಕುರ್‌ ಜೈನ್‌ ತಿಳಿಸಿದ್ದಾರೆ.

ಖಾಸಗಿ ದೋಣಿಯಲ್ಲಿದ್ದ ಪ್ರಯಾಣಿಕರ ಸಂಖ್ಯೆ ಬಗ್ಗೆ ಗೊಂದಲ ಉಂಟಾಗಿದೆ. ಪ್ರಯಾಣಿಕರಿಗೆ ಟಿಕೆಟ್‌ ನೀಡುವ ವ್ಯವಸ್ಥೆ ಖಾಸಗಿ ದೋಣಿಯಲ್ಲಿ ಇಲ್ಲದ ಕಾರಣ ಖಚಿತ ಸಂಖ್ಯೆ ಗೊತ್ತಾಗಿಲ್ಲ. ದೋಣಿಯಲ್ಲಿ 80ರಿಂದ 150 ಪ್ರಯಾಣಿಕರಿದ್ದರು ಎಂದು ಅಂದಾಜಿಸಲಾಗಿದೆ.

‘ಘಟನೆ ಕುರಿತು ತನಿಖೆ ನಡೆಸಲು ಸಾರಿಗೆ ಇಲಾಖೆ ಕಾರ್ಯದರ್ಶಿ ಜಾದವ್‌ ಸೈಕಿಯಾ ಅವರಿಗೆ ಸೂಚಿಸಲಾಗಿದೆ. ಈಗಾಗಲೇ ಜಲ ಸಾರಿಗೆ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಿಬ್ಬಂದಿಯ ಲೋಪದಿಂದ ಈ ಘಟನೆ ನಡೆದಿರುವ ಸಾಧ್ಯತೆಗಳು ಹೆಚ್ಚಾಗಿವೆ’ ಎಂದು ಸಾರಿಗೆ ಸಚಿವ ಚಂದ್ರ ಮೋಹನ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು