ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ಮುಂದುವರಿದ ಹಿಂಸಾಚಾರ; 20 ಮಂದಿ ಸಾವು

ಅಸಿಸ್ಟೆನ್ಸ್‌ ಅಸೋಸಿಯೇಷನ್‌ ಫಾರ್‌ ಪೊಇಲಿಟಿಕಲ್ ಪ್ರಿಸನರ್ಸ್‌’ (ಎಎಪಿಪಿ) ಸಂಸ್ಥೆ ಹೇಳಿಕೆ
Last Updated 16 ಮಾರ್ಚ್ 2021, 7:11 IST
ಅಕ್ಷರ ಗಾತ್ರ

ಯಾಂಗೊನ್: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ಸೋಮವಾರ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀವಾಗಿ ಪ್ರತಿಭಟನೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ ‘ಅಸಿಸ್ಟೆನ್ಸ್‌ ಅಸೋಸಿಯೇಷನ್‌ ಫಾರ್‌ ಪೊಲಿಟಿಕಲ್ ಪ್ರಿಸನರ್ಸ್‌’ (ಎಎಪಿಪಿ) ಸಂಸ್ಥೆ ತಿಳಿಸಿದೆ.

ದೇಶದಾದ್ಯಂತ ಮಿಲಿಟರಿ ಸರ್ಕಾರದ ವಿರುದ್ಧ ನಾಗರಿಕರು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಮೇಲೆ ಭದ್ರತಾ ಪಡೆಗಳು ಅಶ್ರುವಾಯು, ರಬ್ಬರ್ ಗುಂಡುಗಳನ್ನು ಸಿಡಿಸುತ್ತಿದ್ದಾರೆ. ಕೆಲವೊಮ್ಮೆ ಜೀವಂತ ಗುಂಡುಗಳನ್ನು ಹಾರಿಸುತ್ತಿದ್ದಾರೆ. ಪರಿಣಾಮವಾಗಿ ಪ್ರತಿ ನಿತ್ಯ ಪ್ರತಿಭಟನಾನಿರತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ಫೆ.1ರಂದು ಆಂಗ್‌ ಸಾನ್ ಸೂ ಕಿ ನೇತೃತ್ವದ ಎನ್‌ಎಲ್‌ ಡಿ ಸರ್ಕಾರವನ್ನು ತೆಗೆದು ಹಾಕಿ, ಮಿಲಿಟರಿ ಆಡಳಿತ ಜಾರಿಗೆ ಬಂದಾಗಿನಿಂದ ಇಡೀ ಮ್ಯಾನ್ಮಾರ್‌ನಲ್ಲಿ ಕೋಲಾಹಲ ಮನೆ ಮಾಡಿದೆ. ನಾಗರಿಕರು ಮತ್ತು ರಾಜಕೀಯ ಪಕ್ಷಗಳ ಸಾವಿರಾರು ಕಾರ್ಯಕರ್ತರು, ಮಿಲಿಟರಿ ಸರ್ಕಾರ ತೆಗೆದು ಹಾಕಿ, ಪ್ರಜಾಪ್ರಭುತ್ವವನ್ನು ಮರಳಿ ತರುವುದಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆ
ವಿಶ್ವಸಂಸ್ಥೆ
: ‌ಮ್ಯಾನ್ಮಾರ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌, ‘ಈ ಮಿಲಿಟರಿ ದೌರ್ಜನ್ಯವನ್ನು ಕೊನೆಗೊಳಿಸಲು ಸಾಮೂಹಿಕವಾಗಿ ಹಾಗೂ ದ್ವಿಪಕ್ಷೀಯವಾಗಿ ಕೆಲಸ ಮಾಡಬೇಕು‘ ಎಂದು ಅಂತರರಾಷ್ಟ್ರೀಯ ಸಮುದಾಯಗಳನ್ನು ‌ಕೋರಿದ್ದಾರೆ.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರ ಹತ್ಯೆ ಮತ್ತು ಮಿಲಿಟರಿ ಅನಿಯಂತ್ರಿತ ಬಂಧನಗಳನ್ನು ನಿಲ್ಲಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡು, ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೀಡಿದ್ದ ಕರೆಯನ್ನು ಸ್ಪಷ್ಟವಾಗಿ ಧಿಕ್ಕರಿಸಲಾಗಿದೆ ಎಂದು ಗುಟೆರೆಸ್ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿಯವರ ವಕ್ತಾರರು ತಿಳಿಸಿದ್ದಾರೆ.

‘ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿಯನ್ನು ಶಾಂತಗೊಳಿಸುವ ಮತ್ತು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಲು ವಿಶೇಷ ರಾಯಭಾರಿ ಭೇಟಿಗೆ ಅನುಮತಿ ನೀಡುವಂತೆ ಅಲ್ಲಿನ ಮಿಲಿಟರಿಯನ್ನು ಪ್ರಧಾನ ಕಾರ್ಯದರ್ಶಿಯವರು ಒತ್ತಾಯಿಸಿದ್ದಾರೆ‘ ಎಂದು ವಕ್ತಾರರು ತಿಳಿಸಿದ್ದಾರೆ.

‘ಪ್ರತಿಭಟನಾಕಾರರ ಹತ್ಯೆ, ಅನಿಯಂತ್ರಿತ ಬಂಧನಗಳು ಮತ್ತು ಬಂಧಿತರಿಗೆ ಚಿತ್ರಹಿಂಸೆ ನೀಡುವುದು ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ‘ ಎಂದು ಗುಟೆರಸ್ ಎಚ್ಚರಿಸಿರುವುದಾಗಿ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT