ಶುಕ್ರವಾರ, ಜೂನ್ 18, 2021
23 °C

ಕೃಷ್ಣಪಟ್ಟಣಂ ಆಯುರ್ವೇದ ಔಷಧ: ಐಸಿಎಂಆರ್‌ ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

ಅಮರಾವತಿ: ಕೋವಿಡ್‌–19ರ ಚಿಕಿತ್ಸೆ ಸಲುವಾಗಿ ಎಸ್‌ಪಿಎಸ್‌ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯರು ನೀಡುತ್ತಿರುವ ಔಷಧಿಯ ಪರಿಣಾಮಕಾರಿ ಕುರಿತು ವಿವರವಾದ ಅಧ್ಯಯನ ನಡೆಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್‌) ಸೂಚಿಸಲು ಆಂಧ್ರ ಪ್ರದೇಶ ಸರ್ಕಾರ ಶುಕ್ರವಾರ ನಿರ್ಧರಿಸಿದೆ.

ಅಲ್ಲದೆ, ‘ಕೃಷ್ಣಪಟ್ಟಣಂನ ಔಷಧಿ’ಯ ಕುರಿತು ಸ್ಥಳದಲ್ಲಿಯೇ ಅಧ್ಯಯನ ನಡೆಸಲು ತಜ್ಞರ ತಂಡವನ್ನು ನೆಲ್ಲೂರಿಗೆ ಕಳುಹಿಸಲೂ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ಶುಕ್ರವಾರ ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ತೀರ್ಮಾನಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಎ.ಕೆ.ಕೆ. ಶ್ರೀನಿವಾಸ್‌ ತಿಳಿಸಿದರು.

ಹಿಂದೆ ಗ್ರಾಮದ ‘ಸರಪಂಚ್‌’ ಆಗಿ ಕೆಲಸ ಮಾಡಿ, ನಂತರ ಮಂಡಲ್‌ ಪರಿಷತ್‌ ಸದಸ್ಯರಾಗಿದ್ದ ಆಯುರ್ವೇದ ವೈದ್ಯ ಬಿ. ಆನಂದಯ್ಯ ಅವರು ಕೋವಿಡ್‌–19ರ ಚಿಕಿತ್ಸೆಗಾಗಿ ಈ ಔಷಧಿಯನ್ನು ಏಪ್ರಿಲ್‌ 21ರಿಂದ ನೀಡುತ್ತಿದ್ದಾರೆ. ಇದನ್ನು ಪಡೆಯಲು ಜನರು ಮುಗಿಬೀಳುತ್ತಿದ್ದು, ಶುಕ್ರವಾರ 10 ಸಾವಿರಕ್ಕೂ ಹೆಚ್ಚು ಜನರು ಔಷಧಿ ಪಡೆಯಲು ಕೃಷ್ಣಪಟ್ಟಣಂನಲ್ಲಿ ಜಮಾಯಿಸಿದ್ದರು. ಅವರು ಪರಸ್ಪರ ಅಂತರ ಮರೆತು ಕೋವಿಡ್‌ ಮಾರ್ಗಸೂಚಿಯನ್ನೂ ಉಲ್ಲಂಘಿಸಿದ್ದರು.

ರಾಜ್ಯ ಆಯುಷ್ ಇಲಾಖೆಯ ಆಯುರ್ವೇದ ವೈದ್ಯರ ತಂಡವು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ ಔಷಧದ ಬಗ್ಗೆ ವಿಚಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಔಷಧಿಯ ತಯಾರಿಕೆ, ಚಿಕಿತ್ಸೆಯ ಪ್ರಕ್ರಿಯೆ ಮತ್ತು ನಂತರದ ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಗಿಡಮೂಲಿಕೆಗಳು, ಜೇನುತುಪ್ಪ, ಮಸಾಲೆ ಪದಾರ್ಥಗಳನ್ನು ಬಳಸಿ ಆನಂದಯ್ಯ ಅವರು ಐದು ವಿಭಿನ್ನ ಔಷಧಿಗಳನ್ನು ತಯಾರಿಸಿ ಕೋವಿಡ್‌ ಸೋಂಕಿತರಿಗೆ, ಶಂಕಿತರಿಗೆ, ಶ್ವಾಸಕೋಶದ ತೊಂದರೆ ಇರುವವರಿಗೆ ನೀಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಧ್ಯಯನಕ್ಕೆ ಉಪರಾಷ್ಟ್ರಪತಿಯೂ ಸೂಚನೆ

ನೆಲ್ಲೂರು ಜಿಲ್ಲೆಯವರೇ ಆದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು, ಕೇಂದ್ರ ಆಯುಷ್‌ ಸಚಿವ ಕಿರಣ್‌ ರಿಜೀಜು ಮತ್ತು ಐಸಿಎಂಆರ್‌ ನಿರ್ದೇಶಕ ಬಲರಾಮ್‌ ಭಾರ್ಗವ ಅವರನ್ನು ಈ ಆಯುರ್ವೇದ ಔಷಧದ ಕುರಿತು ಅಧ್ಯಯನ ನಡೆಸಿ, ಆದಷ್ಟು ಬೇಗ ವರದಿ ನೀಡುವಂತೆ ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು