ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬ್ರಿ ಮಸೀದಿ ಧ್ವಂಸ: ನ್ಯಾಯಾಂಗ ನಿಂದನೆ ಅರ್ಜಿ ರದ್ದು ಮಾಡಿದ ‘ಸುಪ್ರೀಂ’

Last Updated 30 ಆಗಸ್ಟ್ 2022, 14:57 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿ 1992ರಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಹಾಗೂ ಇತರರ ಮೇಲೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ.

‘ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲೇ ಅಂತಿಮ ತೀರ್ಪು ಪ್ರಕಟಿಸಿದೆ. ಹೀಗಾಗಿ ಈ ಅರ್ಜಿಯ ವಿಚಾರಣೆ ಈಗ ಅಪ್ರಸ್ತುತ’ ಎಂದು ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಅರ್ಜಿಯು ಸುಮಾರು 30 ವರ್ಷಗಳಿಂದ ಬಾಕಿ ಇದೆ. ಅರ್ಜಿದಾರರಾದ ಭುರೆ ಅವರು 2010ರಲ್ಲೇ ಮೃತಪಟ್ಟಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಎಂ.ಎಂ.ಕಶ್ಯಪ್‌ ನ್ಯಾಯಾಲಯಕ್ಕೆ ಹೇಳಿದರು. ಅರ್ಜಿದಾರರ ಬದಲಿಗೆ ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಒದಗಿಸುವಂತೆ ಕೋರಿದರು. ಅವರ ಮನವಿಯನ್ನು ಪೀಠ ತಿರಸ್ಕರಿಸಿತು.

‘1992ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿತ್ತು. ಅದಾದ ನಂತರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿ ಅರ್ಜಿದಾರರು ಅನೇಕ ಅರ್ಜಿಗಳನ್ನು ಸಲ್ಲಿಸಿದ್ದರು’ ಎಂದೂ ಅವರು ತಿಳಿಸಿದರು.

‘ನಿಮ್ಮ ಕಾಳಜಿಯನ್ನು ನಾವು ಪ್ರಶಂಶಿಸುತ್ತೇವೆ. ಅರ್ಜಿಯ ವಿಚಾರಣೆಯು ಬಹಳ ಹಿಂದೆಯೇ ನಡೆಯಬೇಕಿತ್ತು. ಅದು ಆಗದಿರುವುದು ದುರದೃಷ್ಟಕರ. ಈಗ ಈ ವಿಚಾರದಲ್ಲಿ ಹೇಳುವುದಕ್ಕೆ ಏನೂ ಉಳಿದಿಲ್ಲ.ಸತ್ತ ಕುದುರೆಯನ್ನು ಚಾಟಿಯಿಂದ ಹೊಡೆಯಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಮತ್ತು ವಿಕ್ರಂ ನಾಥ್‌ ಅವರನ್ನೊಳಗೊಂಡ ಪೀಠ ಹೇಳಿತು.

‘ಅರ್ಜಿದಾರರು ಈಗಾಗಲೇ ಮರಣ ಹೊಂದಿದ್ದಾರೆ. ಸಾಂವಿಧಾನಿಕ ಪೀಠವು ಈ ವಿಚಾರವಾಗಿ ಅಂತಿಮ ತೀರ್ಪು ನೀಡಿದೆ. ಹೀಗಾಗಿ ಈ ಅರ್ಜಿಯನ್ನು ರದ್ದುಮಾಡುತ್ತಿದ್ದೇವೆ’ ಎಂದೂ ತಿಳಿಸಿತು.

16ನೇ ಶತಮಾನದಲ್ಲಿ ಸ್ಥಾಪಿಸಲಾಗಿದ್ದ ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್‌ 6ರಂದು ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠವುವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಅನುಮತಿ ನೀಡಿತ್ತು. ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್‌ ಮಂಡಳಿಗೆ 5 ಎಕರೆ ಭೂಮಿ ಮಂಜೂರು ಮಾಡುವಂತೆಯೂ 2019ರ ನವೆಂಬರ್‌ 9ರಂದು ನೀಡಿದ್ದ ತೀರ್ಪಿನಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT